ಬೆಂಗಳೂರು, ನ.19: ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) 8,000 ಕ್ಕೂ ಹೆಚ್ಚು ವಿದ್ಯುತ್ ಕಳ್ಳತನ ಪ್ರಕರಣಗಳನ್ನು ದಾಖಲಿಸಿ 33 ಕೋಟಿ ರೂ.ಗೂ ಹೆಚ್ಚು ದಂಡವನ್ನು ವಸೂಲಿ ಮಾಡಿದೆ. ಮನೆಯ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣ ಸಂಬಂಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರಿಗೆ 68 ಸಾವಿರ ರೂ. ದಂಡ ವಿಧಿಸಿದ ನಂತರ ಈ ವಿಚಾರ ಬಹಿರಂಗವಾಗಿದೆ.
ಬೆಸ್ಕಾಂನ ಹಿರಿಯ ಅಧಿಕಾರಿಯ ಪ್ರಕಾರ, ವಿದ್ಯುತ್ ಕಳ್ಳತನದ ಅಡಿಯಲ್ಲಿ ಬಿಲ್ ಬಾಕಿ ಪ್ರಕರಣಗಳು (ಬಿಬಿಸಿ) ಮತ್ತು ಕಾಂಪೌಂಡಿಂಗ್ (ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳು) ಪ್ರಕರಣಗಳು (ಸಿಸಿ) ಎಂಬ ಎರಡು ರೀತಿಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಿಬಿಸಿಗಳ ಮೂಲಕ ಸಂಗ್ರಹಿಸಲಾದ ದಂಡವು ಬೆಸ್ಕಾಂಗೆ ಹೋದರೆ, ಉಳಿದ ಪಕ್ರರಣಗಳ ದಂಡದ ಮೊತ್ತ ಸರ್ಕಾರಕ್ಕೆ ಹೋಗುತ್ತದೆ.
ಇತ್ತೀಚೆಗಷ್ಟೇ, ಮನೆ ದೀಪಾಲಂಕಾರಕ್ಕಾಗಿ ಅಕ್ರಮವಾಗಿ ದಾರಿದೀಪ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಅವರ ವಿರುದ್ಧ ವಿದ್ಯುತ್ ಕಳ್ಳತನ ಪ್ರಕರಣ ದಾಖಲಾಗಿತ್ತು. ಇವರ ವಿರುದ್ಧ ಎಫ್ಐಆರ್ ದಾಖಲಿಸಿ 68 ಸಾವಿರ ರೂ.ಗೂ ಅಧಿಕ ದಂಡ ವಿಧಿಸಲಾಗಿತ್ತು.
ಇದನ್ನೂ ಓದಿ: ಅಕ್ರಮ ವಿದ್ಯುತ್ ಸಂಪರ್ಕ: ಬೆಸ್ಕಾಂಗೆ ದಂಡ ಪಾವತಿಸಿದ ಹೆಚ್ಡಿ ಕುಮಾರಸ್ವಾಮಿ, ಎಷ್ಟು ಗೊತ್ತಾ?
ಆದರೆ, 71 ಯುನಿಟ್ಗೆ ಮೂರು ಪಟ್ಟು ದಂಡ ವಿಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಆರೋಪಿಸಿದ್ದರು. ಇವರ ವಿರುದ್ಧ ಕಾಂಪೌಂಡ್ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ದಿ ಹಿಂದೂ ವರದಿ ಮಾಡಿದೆ.
FY (ಹಣಕಾಸು ವರ್ಷ) 2021-22 ರಲ್ಲಿ, ಬೆಸ್ಕಾಂ 3,369 BBC ಮತ್ತು 797 CC ಪ್ರಕರಣಗಳನ್ನು ದಾಖಲಿಸಿ 13.92 ಕೋಟಿ ರೂ. ದಂಡವನ್ನು ಸಂಗ್ರಹಿಸಿದೆ. FY 2022-23 ರಲ್ಲಿ 2,268 BBC ಮತ್ತು 560 CC ಪ್ರಕರಣಗಳನ್ನು ದಾಖಲಿಸಿ 12 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಕ್ಟೋಬರ್ 31 ರ ವರೆಗೆ, 955 ಬಿಬಿಸಿ ಪ್ರಕರಣಗಳು ಮತ್ತು 235 ಸಿಸಿ ಅಡಿ ಪ್ರಕರಣಗಳನ್ನು ದಾಖಲಿಸಿ 6.55 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ಬೆಸ್ಕಾಂ ಒದಗಿಸಿದ ಅಂಕಿಅಂಶಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ