Bharath Rice: ಚಾಲನೆ ಸಿಕ್ಕ 15 ದಿನಕ್ಕೆ ಎಲ್ಲೆಲ್ಲೂ ಸಿಗುತ್ತಿಲ್ಲ ಭಾರತ್ ಅಕ್ಕಿ, ಇದು ಚುನಾವಣೆ ಗಿಮಿಕ್ ಎಂದು ಜನರ ಆಕ್ರೋಶ
ಅಕ್ಕಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್ ಯೋಜನೆಯಡಿ ಭಾರತ್ ಅಕ್ಕಿ ಯೋಜನೆಯನ್ನ ಫೆಬ್ರುವರಿ 6ರಂದು ರಾಜ್ಯದಲ್ಲಿ ಚಾಲನೆ ನೀಡಿತ್ತು. ಕೆಜಿಗೆ 29 ರೂಪಾಯಿಯಂತೆ ಭಾರತ್ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಎಲ್ಲೂ ಕೂಡ ಭಾರತ್ ಅಕ್ಕಿ ಸಿಗುತ್ತಿಲ್ಲ. ಇದರಿಂದ ಜನ ಆಕ್ರೋಶ ಹೊರ ಹಾಕಿದ್ದು ಇದು ಚುನಾವಣೆ ಪ್ರಚಾರ ಪಡೆದುಕೊಳ್ಳಲು ಗಿಮಿಕ್ ಅಷ್ಟೇ ಎಂದಿದ್ದಾರೆ.
ಬೆಂಗಳೂರು, ಫೆ.21: ಅಕ್ಕಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ (Central Government) ಪ್ಲ್ಯಾನ್ ಮಾಡಿ ಮಧ್ಯಮ ವರ್ಗದವರಿಗೆ ಅನಕೂಲ ಆಗುವ ದೃಷ್ಟಿಕೋನದಿಂದ ಭಾರತ್ ಬ್ರ್ಯಾಂಡ್ ಯೋಜನೆಯಡಿ ಭಾರತ್ ಅಕ್ಕಿ ಯೋಜನೆಯನ್ನ (Bharath Rice) ಕೇಂದ್ರ ಸರ್ಕಾರ ಚಾಲನೆ ನೀಡಿತ್ತು, ಆದರೆ ಆರಂಭಿಕ ದಿನಗಳಲ್ಲೆ ಅಕ್ಕಿ ಸಿಗದೇ ಗ್ರಾಹಕರು ಕಂಗಾಲಾಗಿದ್ದಾರೆ.
ಅಕ್ಕಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಮಧ್ಯಮ ವರ್ಗದವರಿಗೆ ಅನಕೂಲ ಆಗುವ ದೃಷ್ಟಿಕೋನದಿಂದ ಭಾರತ್ ಬ್ರ್ಯಾಂಡ್ ಯೋಜನೆಯಡಿ ಭಾರತ್ ಅಕ್ಕಿ ಯೋಜನೆಯನ್ನ ಕೇಂದ್ರ ಸರ್ಕಾರ ಫೆಬ್ರುವರಿ 6 ನೇ ತಾರೀಖಿನಂದು ಮೊಬೈಲ್ ವ್ಯಾನ್‌ಗಳ ಮೂಲಕ ಕರ್ನಾಟಕ ರಾಜ್ಯದಲ್ಲಿ ಚಾಲನೆ ನೀಡಿತ್ತು. ಕೆಜಿಗೆ 29 ರೂಪಾಯಿಯಂತೆ ಒಬ್ಬ ವ್ಯಕ್ತಿ10 ಕೆಜಿ ಅಕ್ಕಿ ಪಡೆಯಬಹುದಿತ್ತು. ಆದರೆ ಇನ್ನೂ ತಿಂಗಳುಗಳೆ ಕಳೆದಿಲ್ಲ ಜನರ ಬೇಡಿಕೆಗೆ ತಕ್ಕಂತೆ ಭಾರತ್ ಅಕ್ಕಿ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಪೂರ್ವ ಸಿದ್ಧತೆ ಇಲ್ಲದೇ ಭಾರತ್ ಅಕ್ಕಿ ಯೋಜನೆ ಜಾರಿಗೆ ತಂದಿದೆ. ಪ್ರಚಾರ ಪಡೆದುಕೊಳ್ಳಲು ಗಿಮಿಕ್ ಅಷ್ಟೇ ಅಂತ ಸಾರ್ವಜನಿಕರು ಕೇಂದ್ರ ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ಭಾರತ್ ಅಕ್ಕಿಗಾಗಿ ಮುಗಿಬಿದ್ದ ಜನ: ಕೆಲವೇ ಕ್ಷಣಗಳಲ್ಲಿ ಒಂದು ಲಾರಿ ಲೋಡ್ ಖಾಲಿ
ಇನ್ನೂ ಅಕ್ಕಿ ಖರೀದಿಗೆ ಯಾವುದೇ ಆಧಾರ ಕಾರ್ಡ್, ಬಿಪಿಎಲ್, ಎಪಿಎಲ್ ಕಾರ್ಡ್ ನ ಅವಶ್ಯಕತೆ ಇರುವುದಿಲ್ಲ ತಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡುವ ಮೂಲಕ ಅಕ್ಕಿ ಖರೀದಿಸಬಹುದಾಗಿದ್ದು, ಅಷ್ಟೇ ಅಲ್ಲದೇ ರಿಲಯನ್ಸ್, ಫ್ಲಿಪ್ಕಾರ್ಟ್, ಬಿಗ್ ಬಾಸ್ಕೆಟ್ ಸೇರಿದಂತೆ ಆನ್ಲೈನ್ನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿ ಮಾಡಬಹುದಿತ್ತು. ಆದರೆ ಸಧ್ಯ ಎಲ್ಲೂ ಅಕ್ಕಿ ಸಿಗುತ್ತಿಲ್ಲ. ಈ ಬಗ್ಗೆ ನೆಫೆಡ್ ಮುಖ್ಯಸ್ಥ ಜ್ಯೋತಿ ಪಾಟೀಲ್ ಅವರನ್ನು ಸಂಪರ್ಕಿಸಿದರೆ ನಾಫೆಡ್ ಸೇರಿದಂತೆ ಎನ್‌ಸಿಸಿಎಫ್, ಕೇಂದ್ರೀಯ ಭಂಡಾರ್ ಮೂಲಕ ಅಕ್ಕಿ ರಾಜ್ಯದಲ್ಲಿ ಮಾರಾಟ ಆಗುತ್ತಿದೆ. ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಸ್ಟಾಕ್ ಬರುತ್ತಿದೆ ಪ್ರತಿದಿನ ಮಾರಾಟ ಆಗುತ್ತಿದೆ. ಅಕ್ಕಿ ಮಿಲ್‌ನವರ ಜೊತೆ ಮಾತುಕತೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿದೆ ಎನ್ನುತ್ತಾರೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಭಾರತ್ ಅಕ್ಕಿ ಯೋಜನೆಗೆ ಚಾಲನೆ ದೊರೆತು ಮೊಬೈಲ್ ವ್ಯಾನ್ ಸೇರಿದಂತೆ ಆನ್‌ಲೈನ್ ನಲ್ಲಿ ಅಕ್ಕಿ ದೊರೆಯಬೇಕಿತ್ತು ಆದರೆ, ಆರಂಭಿಕ ದಿನಗಳಲ್ಲೆ ಬೆಂಗಳೂರು ಜನ್ರಿಗೆ ದೊರೆಯದೇ ಇರುವುದು ನಿರಾಶೆಗೆ ಕಾರಣವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ