ವನ್ಯಜೀವಿ ಪಳೆಯುಳಿಕೆ ಹಿಂದಿರುಗಿಸುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ
ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸುವಂತೆ ರಾಜ್ಯ ಸರ್ಕಾರದ ಹೊರಡಿಸಿದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ನೂರಾರು ವರ್ಷಗಳ ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸುವಂತೆ ಸಿಐಡಿ ನೋಟಿಸ್ ಜಾರಿ ಮಾಡುತ್ತಿದ್ದು, ಇದರಿಂದ ಕೊಡಗು ನಿವಾಸಿಗಳ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ಬೆಂಗಳೂರು, ಫೆ.20: ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸುವಂತೆ ರಾಜ್ಯ ಸರ್ಕಾರದ ಹೊರಡಿಸಿದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಮಧ್ಯಂತರ ತಡೆ ನೀಡಿದೆ. ನೂರಾರು ವರ್ಷಗಳ ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸುವಂತೆ ಸರ್ಕಾರ ಹೊರಡಿಸಿದ ಆದೇಶ ಪ್ರಶ್ನಿಸಿ ರಂಜಿ ಪೂಣಚ್ಚ ಹಾಗೂ ಕುಟ್ಟಪ್ಪ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಅರ್ಜಿ ವಿಚಾರಣೆ ವೇಳೆ, ನೂರಾರು ವರ್ಷಗಳ ವನ್ಯಜೀವಿ ಪಳೆಯುಳಿಕೆ ಹಿಂತಿರುಗಿಸುವಂತೆ ಕೊಡಗಿನ ಜನರಿಗೆ ಸಿಐಡಿ ನೋಟಿಸ್ ಜಾರಿ ಮಾಡುತ್ತಿದೆ. ಇದರಿಂದ ಕೊಡಗು ನಿವಾಸಿಗಳ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ಇದನ್ನೂ ಓದಿ: ನಿಯಮ ಉಲ್ಲಂಘನೆ: ವೀರಪ್ಪ ಮೊಯ್ಲಿ, ನಲಪಾಡ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
ಜನರು ತಮ್ಮಲ್ಲಿರುವ ವನ್ಯಜೀವಿ ಸಾಮಾಗ್ರಿಗಳನ್ನು ಒಪ್ಪಿಸುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಪರವಾನಿಗೆ ಇಲ್ಲದೆ ಅಕ್ರಮವಾಗಿ ವನ್ಯ ಜೀವಿಗಳ ಅಂಗಾಂಗಗಳನ್ನು ಇಟ್ಟು ಕೊಂಡಿರುವವರಿಗೆ ಸರ್ಕಾರ ಗಡುವು ನೀಡಿದ್ದು, ಏಪ್ರಿಲ್ 10ರ ಒಳಗಾಗಿ ಹಿಂದಿರುಗಿಸುವಂತೆ ಸೂಚಿಸಿದೆ.
ಪ್ರಮಾಣ ಪತ್ರ ಇಲ್ಲದೆ ಅಕ್ರಮವಾಗಿ ವನ್ಯಜೀವಿ ಅಂಗಾಂಗಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ. 1973 ಹಾಗೂ 2003ರಲ್ಲಿ ವನ್ಯಜೀವಿ ಅಂಗಾಂಗಗಳ ವಾಪಸ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ವಾಪಸ್ ಮಾಡದೇ ಇರುವುದು ದೊಡ್ಡ ಅಪರಾಧ. ಮೌಢ್ಯತೆ ಹಾಗೂ ನಂಬಿಕೆಗಾಗಿ ಕೆಲವು ಮುಗ್ಧ ಜನರು ಇನ್ನೂ ವನ್ಯಜೀವಿ ಅಂಗಾಂಗಗಳನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಏಪ್ರಿಲ್ 10ರ ಒಳಗೆ ಹುಲಿ, ಚಿರತೆ ಮತ್ತು ಆನೆಗಳ ಕೊಂಬು, ಉಗುರು, ಹಲ್ಲು, ಕೂದಲು ಸೇರಿದಂತೆ ಎಲ್ಲಾ ವನ್ಯಜೀವಿ ಅಂಗಾಂಗಗಳನ್ನು ಹಿಂತಿರುಗಿಸಲು ಕೊನೆಯದಾಗಿ ಗಡುವು ನೀಡಲಾಗಿದೆ ಎಂದು ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದರು.
ಹುಲಿ ಉಗುರು ಧರಿಸಿದ್ದ ಹಿನ್ನೆಲೆ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನಕ್ಕೊಳಗಾಗಿದ್ದರು. ಈ ಪ್ರಕರಣ ಬೆನ್ನಲ್ಲೇ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣ ಭಾರೀ ಸದ್ದು ಮಾಡಿತ್ತು. ಹಲವು ನಟರು, ರಾಜಕೀಯ ನಾಯಕರು ಹುಲಿ ಉಗುರು ಧರಿಸಿರುವ ಫೋಟೋಗಳು ವೈರಲ್ ಆಗಿತ್ತು. ಅಂತಹವರ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಲಾಕೆಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:50 pm, Tue, 20 February 24