ಬೈಕ್ ಟ್ಯಾಕ್ಸಿಗೆ ಅನುಮತಿ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದ ಕರ್ನಾಟಕದ 5 ಆಟೋ, ಟ್ಯಾಕ್ಸಿ ಚಾಲಕರ ಸಂಘಟನೆಗಳು

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿದ್ದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಲಕ್ಷಾಂತರ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ ರಾಜ್ಯದ 5 ಪ್ರಮುಖ ಚಾಲಕರ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಇದೇ ವಿಚಾರವಾಗಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಕೂಡ ಇನ್ನೂ ವಿವರವಾಗಿ ನಡೆದಿಲ್ಲ ಎಂಬುದಿಲ್ಲಿ ಪ್ರಮುಖ ಅಂಶವಾಗಿದೆ.

ಬೈಕ್ ಟ್ಯಾಕ್ಸಿಗೆ ಅನುಮತಿ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದ ಕರ್ನಾಟಕದ 5 ಆಟೋ, ಟ್ಯಾಕ್ಸಿ ಚಾಲಕರ ಸಂಘಟನೆಗಳು
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದ ಕರ್ನಾಟಕದ 5 ಆಟೋ, ಟ್ಯಾಕ್ಸಿ ಚಾಲಕರ ಸಂಘಟನೆಗಳು
Image Credit source: Ubar and PTI

Updated on: Sep 24, 2026 | 8:02 AM

ಬೆಂಗಳೂರು, ಸೆಪ್ಟೆಂಬರ್​​ 24: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯದ ಐದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಮೋಟಾರ್‌ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಹಾಗೂ ಅವುಗಳನ್ನು ಕಾಂಟ್ರಾಕ್ಟ್ ಕ್ಯಾರೇಜ್‌ಗಳಾಗಿ ಕಾರ್ಯಾಚರಿಸಲು ಪರವಾನಗಿ ನೀಡುವ ಸಂಬಂಧ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಜನವರಿ 23ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಈ ತೀರ್ಮಾನ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿಯಲ್ಲಿ ಹಲವು ಪ್ರಮುಖ ಅಂಶಗಳ ಉಲ್ಲೇಖ

ಅರ್ಜಿದಾರ ಸಂಘಟನೆಗಳಲ್ಲಿ ನಾಡಪ್ರಭು ಕೆಂಪೇಗೌಡ ಆಟೋ ಚಾಲಕರ ಸಂಘಟನೆ, ಕರ್ನಾಟಕ ವೆಂಕಟೇಗೌಡ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಗ್ರೇಟರ್ ಬೆಂಗಳೂರು ಚಾಲಕರ ಸಂಘ, ಕರ್ನಾಟಕ ಸಾರಥಿಗಳ ಮಹಾಸಂಘ ಹಾಗೂ ಜೈ ಕರ್ನಾಟಕ ಸಾರಥಿ ಸೇನೆ ಟ್ರಸ್ಟ್ ಸೇರಿವೆ. ಹೈಕೋರ್ಟ್ ತನ್ನ ತೀರ್ಪಿನ ಮೂಲಕ ಬೈಕ್ ಟ್ಯಾಕ್ಸಿಗಳಿಗೆ ನಿಯಂತ್ರಣಾತ್ಮಕ ಮಾರ್ಗವನ್ನು ಕಲ್ಪಿಸಿದ್ದು, ಇದು ರಾಜ್ಯ ಸರ್ಕಾರ ಹಾಗೂ ಕಾನೂನುಬದ್ಧ ಸಾರಿಗೆ ಪ್ರಾಧಿಕಾರಗಳ ವ್ಯಾಪ್ತಿಗೆ ಬರುವ ವಿಚಾರವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಅಗ್ರಿಗೇಟರ್‌ಗಳ ವ್ಯವಹಾರ ಹಿತಾಸಕ್ತಿಗಳಿಗೆ ಅನುಗುಣವಾಗಿ ನಿರ್ದಿಷ್ಟ ಸಾರಿಗೆ ನೀತಿಯನ್ನು ರೂಪಿಸಲು ಅಥವಾ ಜಾರಿಗೆ ತರಲು ರಾಜ್ಯ ಸರ್ಕಾರವನ್ನು ಸಾಂವಿಧಾನಿಕ ನ್ಯಾಯಾಲಯ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಬೈಕ್ ಟ್ಯಾಕ್ಸಿಗಳಿಂದ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರ ಮೇಲೆ ಉಂಟಾಗಬಹುದಾದ ಪರಿಣಾಮವನ್ನು ಅರ್ಜಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ ಸುಮಾರು 1.5 ಲಕ್ಷ ಆಟೋ ಚಾಲಕರು, ಟ್ಯಾಕ್ಸಿ ಪರವಾನಗಿ ಹೊಂದಿರುವವರು ಹಾಗೂ ಇತರ ನಿಯಂತ್ರಿತ ಸಾರಿಗೆ ನಿರ್ವಾಹಕರು ಇದ್ದು, ಸಮಾನ ನಿಯಂತ್ರಣಾತ್ಮಕ ವ್ಯವಸ್ಥೆಯಿಲ್ಲದೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿದರೆ ಇವರ ಮೇಲೆ ಪರಿಣಾಮ ಬೀರಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್: ವೈಟ್ ಬೋರ್ಡ್ ವಾಹನಗಳಿಗೆ ಎಚ್ಚರಿಕೆ ಸಂದೇಶ

ಈಗಿರುವ ನಿರ್ವಾಹಕರು ಪರವಾನಗಿ ಷರತ್ತುಗಳು, ವಾಹನಗಳ ಫಿಟ್‌ನೆಸ್ ನಿಯಮಗಳು, ವಿಮೆ, ತೆರಿಗೆ, ಪ್ರಯಾಣ ದರ ನಿಯಂತ್ರಣ ಹಾಗೂ ಲೈಸೆನ್ಸ್ ಸೇರಿದಂತೆ ಹಲವು ನಿಯಮಗಳಿಗೆ ಒಳಪಟ್ಟಿದ್ದಾರೆ. ಇದೇ ರೀತಿಯ ಸುರಕ್ಷತಾ ಕ್ರಮಗಳಿಲ್ಲದೆ ಮತ್ತೊಂದು ಸ್ಪರ್ಧಾತ್ಮಕ ಸಾರಿಗೆ ವರ್ಗಕ್ಕೆ ಅವಕಾಶ ನೀಡುವುದು ನಿಯಂತ್ರಣಾತ್ಮಕ ಸಮಾನತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. 2019ರಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯ ವರದಿಯನ್ನೂ ಅರ್ಜಿದಾರರು ಉಲ್ಲೇಖಿಸಿದ್ದಾರೆ. ರಸ್ತೆ ಸುರಕ್ಷತೆ, ಸಂಚಾರ ದಟ್ಟಣೆ, ರಸ್ತೆ ಸ್ಥಳದ ಸಮರ್ಪಕ ಬಳಕೆ ಹಾಗೂ ಮಾಲಿನ್ಯ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟು ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದನ್ನು ಸಮಿತಿ ವಿರೋಧಿಸಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಕರ್ನಾಟಕ ಸರ್ಕಾರವೂ ಹೈಕೋರ್ಟ್‌ನ ಬೈಕ್ ಟ್ಯಾಕ್ಸಿ ನಿಷೇಧ ತೆರವುಗೊಳಿಸಿದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ಇನ್ನೂ ವಿವರವಾಗಿ ನಡೆದಿಲ್ಲ ಎಂದು ಬಾರ್​​ & ಬೆಂಚ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us