ಕಾಂಗ್ರೆಸ್ ಶಾಸಕ ಹ್ಯಾರಿಸ್ ಕುಟುಂಬಕ್ಕೆ ಇ.ಡಿ ಶಾಕ್: ನಲಪಾಡ್‌ಗೆ ಉರುಳಾಯ್ತಾ ಬಿಟ್ ಕಾಯಿನ್ ಹಗರಣ!
ಬಿಟ್‌ಕಾಯಿನ್ ಹಗರಣದ ತನಿಖೆ ತೀವ್ರಗೊಂಡಿದ್ದು, ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ ಮತ್ತು ನಲಪಾಡ್ ನಿವಾಸಗಳಲ್ಲಿ ಇಡಿ ಅಧಿಕಾರಿಗಳು 15 ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ಹ್ಯಾಕರ್ ಶ್ರೀಕಿ ಜೊತೆಗಿನ ಅಕ್ರಮ ಹಣಕಾಸು ನಂಟು ಮತ್ತು 10 ಲಕ್ಷ ರೂ. ವರ್ಗಾವಣೆಯ ಕುರಿತು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶಾಸಕರ ಪುತ್ರನಿಗೆ ವಿಚಾರಣೆಯ ಭೀತಿ ಎದುರಾಗಿದೆ.

ಬೆಂಗಳೂರು, ಏಪ್ರಿಲ್ 21: ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣದ ತನಿಖೆ ಈಗ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ (NA Haris) ಕುಟುಂಬದ ಹೊಸ್ತಿಲಿಗೆ ಬಂದು ನಿಂತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED Raid) ಅಧಿಕಾರಿಗಳು ಶಾಸಕ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸದಗಳಲ್ಲಿ ಸತತ 15 ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಶೋಧ ನಡೆಸಿದ್ದಾರೆ.
12 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ
ಏಪ್ರಿಲ್ 20 ರ ಮುಂಜಾನೆ 6:30ಕ್ಕೆ ಏಕಕಾಲಕ್ಕೆ ಕಾರ್ಯಾಚರಣೆ ಆರಂಭಿಸಿದ ಇಡಿ ಅಧಿಕಾರಿಗಳು, ಬೆಂಗಳೂರಿನ ಒಟ್ಟು 12 ಆಯಕಟ್ಟಿನ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
- ಅಶೋಕನಗರದಲ್ಲಿರುವ ಶಾಸಕ ಹ್ಯಾರಿಸ್ ನಿವಾಸ.
- ಮೊಹಮ್ಮದ್ ನಲಪಾಡ್ ನಿವಾಸ.
- ಬೆಳ್ಳಂದೂರಿನಲ್ಲಿರುವ ಉಮರ್ ನಲಪಾಡ್ ಕಚೇರಿ.
- ನಲಪಾಡ್‌ಗೆ ಸೇರಿದ ಬೆಂಗಳೂರಿನ 4 ಪ್ರತ್ಯೇಕ ಕಚೇರಿಗಳು.
- ವೈಟ್‌ಫೀಲ್ಡ್‌ನ ಏವಿಯೇಷನ್ ಕಂಪನಿ ಮತ್ತು ಎಲೆಕ್ಟ್ರಾನಿಕ್ ಸಿಟಿಯ ಐಟಿ ಸೆಲ್ಯುಲೋಸ್ ಸಂಸ್ಥೆಗಳು.
- ಹಗರಣದ ಕಿಂಗ್‌ಪಿನ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಮನೆ.
- ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಮೊಮ್ಮಗ ಹಕೀಬ್ ಖಾನ್ ನಿವಾಸ.
ಇ.ಡಿ ದಾಳಿಗೆ ಅಸಲಿ ಕಾರಣವೇನು?
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಬಿಟ್‌ಕಾಯಿನ್ ಕಳವು ಮಾಡಿರುವ ಆರೋಪ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ತಂಡದ ಮೇಲಿದೆ. ಕಳುವಾದ ಡಿಜಿಟಲ್ ಆಸ್ತಿಗಳನ್ನು ಕ್ರಿಪ್ಟೋ ಮೂಲಕ ಮಾರಾಟ ಮಾಡಿ, ಆ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ (Layering) ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಈ ಹಣವನ್ನು ಡ್ರಗ್ಸ್ ಖರೀದಿ ಮತ್ತು ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂಬುದು ಇಡಿ ಅಧಿಕಾರಿಗಳ ಪ್ರಮುಖ ಆರೋಪ.
10 ಲಕ್ಷ ರೂ. ಮತ್ತು ಶ್ರೀಕಿ-ನಲಪಾಡ್ ಲಿಂಕ್
2020ರಲ್ಲಿ ಯಶೋಧಾ ದೇವಿ ಎಂಬುವವರು ನೀಡಿದ ವಂಚನೆ ದೂರಿನ ತನಿಖೆ ವೇಳೆ ಈ ಲಿಂಕ್ ಬಯಲಾಗಿದೆ. ಹ್ಯಾಕರ್ ಶ್ರೀಕಿ, ಹ್ಯಾರಿಸ್ ಕಿರಿಯ ಪುತ್ರ ಉಮರ್ ನಲಪಾಡ್‌ನ ಕ್ಲಾಸ್‌ಮೇಟ್ ಆಗಿದ್ದ. ಇದೇ ಸ್ನೇಹದ ಮೂಲಕ ಶ್ರೀಕಿ ಮೊಹಮ್ಮದ್ ನಲಪಾಡ್‌ಗೂ ಹತ್ತಿರವಾಗಿದ್ದ. ಶ್ರೀಕಿ ಬಿಟ್‌ಕಾಯಿನ್ ಹ್ಯಾಕ್ ಮಾಡಿ ಮುಂಬೈ ಮೂಲದ ವ್ಯಕ್ತಿಯೊಬ್ಬನಿಗೆ ಕಳುಹಿಸಿದ್ದ. ಆ ವ್ಯಕ್ತಿ ನಲಪಾಡ್ ಖಾತೆಗೆ 10 ಲಕ್ಷ ರೂ. ವರ್ಗಾಯಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ಗುಂಪಿನ ನಡುವೆ ಒಟ್ಟು 4.5 ಕೋಟಿ ರೂ. ಅಕ್ರಮ ವಹಿವಾಟು ನಡೆದಿದೆ ಎಂಬ ಶಂಕೆಯಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣಕ್ಕೂ ಶಾಸಕ ಹ್ಯಾರಿಸ್ಗೂ ಏನು ಸಂಬಂಧ? ಕಾಂಗ್ರೆಸ್ ಶಾಸಕರ, ನಲಪಾಡ್ ಮನೆ ಮೇಲೆ ಇಡಿ ದಾಳಿ ಮಾಡಿದ್ದೇಕೆ?
15 ಗಂಟೆಗಳ ಕಾಲ ನಡೆದ ಶೋಧದ ನಂತರ ಇಡಿ ಅಧಿಕಾರಿಗಳು ಮಹತ್ವದ ಡಿಜಿಟಲ್ ದಾಖಲೆಗಳು, ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಮತ್ತು ವಿದೇಶಿ ಬ್ಯಾಂಕ್ ವಹಿವಾಟಿನ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಹ್ಯಾರಿಸ್ ಕುಟುಂಬಕ್ಕೆ ಸೂಚನೆ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



