ಬೆಂಗಳೂರು: ಮೋದಿ ಕರೆಯ ಮೇರೆಗೆ ಬೆಂಗಳೂರಿನಾದ್ಯಂತ ಬಿಜೆಪಿ ನಾಯಕರಿಂದ ದೇಗುಲ ಸ್ವಚ್ಛತಾ ಅಭಿಯಾನ
ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ‘ಪ್ರಾಣ ಪ್ರತಿಷ್ಠೆ'ಯ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಹಲವಾರು ರಾಜ್ಯ ಬಿಜೆಪಿ ನಾಯಕರು ಪೊರಕೆ ಮತ್ತು ಇತರ ಪರಿಕರಗಳೊಂದಿಗೆ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು.
ಬೆಂಗಳೂರು, ಜನವರಿ 15: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕರೆಯ ಮೇರೆಗೆ ಬೆಂಗಳೂರಿನ ವಿವಿಧೆಡೆ ಭಾನುವಾರ ಬಿಜೆಪಿ ನಾಯಕರು (BJP Leaders) ಭಾನುವಾರ ದೇವಸ್ಥಾನಗಳ ಸ್ವಚ್ಛತಾ ಅಭಿಯಾನ ನಡೆಸಿದರು. ಪ್ರತಿಪಕ್ಷ ನಾಯಕ ಆರ್ ಅಶೋಕ (R Ashoka), ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸೇರಿದಂತೆ ಕೆಲವು ಮಂದಿ ನಾಯಕರು ದೇವಸ್ಥಾನಗಳ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ‘ಪ್ರಾಣ ಪ್ರತಿಷ್ಠೆ’ಯ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಹಲವಾರು ರಾಜ್ಯ ಬಿಜೆಪಿ ನಾಯಕರು ಪೊರಕೆ ಮತ್ತು ಇತರ ಪರಿಕರಗಳೊಂದಿಗೆ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು.
ಜಯನಗರ 4ನೇ ಬ್ಲಾಕ್‌ನ ವಿನಾಯಕ ದೇವಸ್ಥಾನದಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಸ್ಥಳೀಯ ಮುಖಂಡರೊಂದಿಗೆ ಅಶೋಕ ಅವರು ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದ್ಮನಾಭನಗರದಲ್ಲಿರುವ ತಮ್ಮ (ಶಾಸಕರ) ಕಚೇರಿ ಬಳಿ ಹೊಚ್ಚಹೊಸ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಇದು ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ ಎಂದರು.
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ದಿನ ನಾವು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದು ಅವರು ಹೇಳಿದರು.
ಡಾ. ಅಶ್ವತ್ಥ ನಾರಾಯಣ್ ಅವರು ಮಲ್ಲೇಶ್ವರಂನ ಕೋದಂಡರಾಮ ದೇಗುಲದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ದಿನ ಆಯೋಜಿಸುವ ವಿವಿಧ ಆಚರಣೆಯಲ್ಲಿ ಭಾಗವಹಿಸುವಂತೆ ಎಲ್ಲಾ ಹಿಂದೂಗಳಿಗೆ ಮನವಿ ಮಾಡುತ್ತೇನೆ ಎಂದು ಅಶ್ವತ್ಥ ನಾರಾಯಣ್ ಹೇಳಿದರು. ಅಯೋಧ್ಯೆ ರಾಮ ಮಂದಿರ ಈಗ ಭಾರತಕ್ಕೆ ಹೆಮ್ಮೆಯ ಸಂಕೇತವಾಗಿದೆ ಎಂದರು.
ಇದನ್ನೂ ಓದಿ: ಶಾಲೆಗಳಲ್ಲಿ ಮತ್ತೆ ಶುರುವಾದ ಧರ್ಮ ದಂಗಲ್; ಜನವರಿ 22ರಂದು ರಾಜ್ಯದ ಶಾಲೆಗಳಿಗೆ ರಜೆ ನೀಡುವಂತೆ ಒತ್ತಾಯ
ಮಹಾರಾಷ್ಟ್ರದ ನಾಸಿಕ್‌ನ ಕಾಲಾರಾಮ್ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸ್ವಚ್ಛತಾ ಅಭಿಯಾನ ನಡೆಸಿದ್ದರು. ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶದ ದೇಗುಲಗಳ ಸ್ವಚ್ಛತಾ ಅಭಿಯಾನಕ್ಕೆ ಅವರು ಕರೆ ನೀಡಿದ್ದರು. ಈ ಕಾರಣ ಕರ್ನಾಟಕ ಬಿಜೆಪಿ ನಾಯಕರು ರಾಜ್ಯದಾದ್ಯಂತ ದೇಗುಲಗಳ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ