
ಬೆಂಗಳೂರು, ಜೂನ್ 26: ನಮ್ಮ ಮೆಟ್ರೋದ ನೇರಳೆ ಮಾರ್ಗದ (Purple Line) ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಗುರುವಾರ ಸಂಜೆ ರೈಲಿನ ಬಾಗಿಲು ಮುಚ್ಚದೆ ಪ್ರಯಾಣಿಕರು ಆತಂಕಗೊಂಡಿದ್ದ ಮತ್ತು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲಿನಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಎಂಆರ್‌ಸಿಎಲ್, ಘಟನೆಗೆ ಕಾರಣವಾದ ಅಸಲಿ ಸತ್ಯವನ್ನು ಬಿಚ್ಚಿಟ್ಟಿದೆ.
ಗುರುವಾರ ಸಂಜೆ 7:36 ರ ಸುಮಾರಿಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಸರಿಯಾಗಿ ಮುಚ್ಚದ ಕಾರಣ ಮುಂಜಾಗ್ರತಾ ಕ್ರಮವಾಗಿ ಸಂಜೆ 7:54 ರವರೆಗೆ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿತ್ತು.
ಈ ಘಟನೆಯ ಬೆನ್ನಲ್ಲೇ ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಜಂಟಿಯಾಗಿ ಸಮಗ್ರ ಪ್ರಾಥಮಿಕ ತನಿಖೆ ನಡೆಸಿದ್ದು, ಪ್ರಯಾಣಿಕರೊಬ್ಬರ ಲೋಹದ ಸರ ರೈಲಿನ ಬಾಗಿಲಿನ ಡೋರ್ ಗೈಡ್‌ವೇ ಯಲ್ಲಿ ಸಿಲುಕಿಕೊಂಡಿದ್ದನ್ನು ಪತ್ತೆ ಹಚ್ಚಿವೆ. ಇದರಿಂದಾಗಿಯೇ ಬಾಗಿಲುಗಳು ಸ್ವಯಂಚಾಲಿತವಾಗಿ ಲಾಕ್ ಆಗಲು ಸಾಧ್ಯವಾಗಿರಲಿಲ್ಲ ಎಂದು ವರದಿ ತಿಳಿಸಿದೆ.
ರೈಲು ಹಾಗೂ ಅದರ ಬಾಗಿಲಿನ ವ್ಯವಸ್ಥೆಯನ್ನು ಸಮಗ್ರವಾಗಿ ತಾಂತ್ರಿಕ ಪರಿಶೀಲನೆಗೆ ಒಳಪಡಿಸಿದ ನಂತರ, ರೈಲಿನ ಉಪಕರಣಗಳಲ್ಲಿ ಯಾವುದೇ ರೀತಿಯ ದೋಷ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ‘ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಯೇ ಬಿಎಂಆರ್‌ಸಿಎಲ್‌ಗೆ ಅತ್ಯುನ್ನತ ಆದ್ಯತೆಯಾಗಿದೆ. ಸಾರ್ವಜನಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ನಿರಂತರ ಮೆಟ್ರೋ ಸೇವೆಗಳನ್ನು ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರು ಮೆಟ್ರೋ ಹತ್ತುವಾಗ ಮತ್ತು ಇಳಿಯುವಾಗ ತಮ್ಮ ಬ್ಯಾಗ್ ಹಾಗೂ ಸರಗಳಂತಹ ವಸ್ತುಗಳ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕವಾಗಿದೆ.
ಇದನ್ನೂ ಓದಿ: ಮತ್ತೆ ಕೈಕೊಟ್ಟ ನಮ್ಮ ಮೆಟ್ರೋ: ಬಾಗಿಲು ಲಾಕ್ ಆಗದೇ ನಿಂತಲ್ಲೇ ನಿಂತ ರೈಲು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ