
ಬೆಂಗಳೂರು, ಜುಲೈ 13: ಇತ್ತೀಚೆಗೆ ಸಾರಿಗೆ ಸಚಿವ ಭೈರತಿ ಸುರೇಶ್ (Minister Byrathi Suresh) ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸುವ ಮೂಲಕ ರಿಯಾಲಿಟಿ ಚೆಕ್ ಮಾಡಿದ್ದರು. ಈ ವೇಳೆ “ಚಿಲ್ಲರೆ ಕೊಡಿ, ಇಲ್ಲದಿದ್ದರೆ ಬಸ್‌ನಿಂದ ಕೆಳಗೆ ಇಳಿಯಿರಿ” ಎಂದಿದ್ದ ಚಾಲಕ ಕಂ ನಿರ್ವಾಹಕನನ್ನು ಬಿಎಂಟಿಸಿ ನಿಗಮ ಇದೀಗ ಅಮಾನತು (suspended) ಮಾಡಿದೆ. ರಾಮಕೃಷ್ಣ ಟಿ.ಜಿ ಅಮಾನತು ಆದ ಬಿಎಂಟಿಸಿ ಸಿಬ್ಬಂದಿ.
ಜುಲೈ 11ರಂದು ರಾತ್ರಿ ಸುಮಾರು 9:30ರ ವೇಳೆಗೆ ಸಾರಿಗೆ ಸಚಿವ ಭೈರತಿ ಸುರೇಶ್, ಹೆಬ್ಬಾಳದಿಂದ ಭೂಪಸಂದ್ರಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಏರಿದ್ದರು. ಈ ವೇಳೆ ಟಿಕೆಟ್‌ಗಾಗಿ ಸಚಿವರು ಹಣ ನೀಡಿದಾಗ ಚಾಲಕ ಕಂ ನಿರ್ವಾಹಕ ರಾಮಕೃಷ್ಣ ಟಿ.ಜಿ. 6 ಚಿಲ್ಲರೆ ನೀಡುವಂತೆ ಕೇಳಿದ್ದಾರೆ. ಸಚಿವರು ತಮ್ಮ ಬಳಿ ಚಿಲ್ಲರೆ ಇಲ್ಲ ಎಂದಿದ್ದಾರೆ. ಆಗ ನಿರ್ವಾಹಕ ಚಿಲ್ಲರೆ ನೀಡದಿದ್ದರೆ ಬಸ್‌ನಿಂದ ಇಳಿಯುವಂತೆ ಉದ್ಧಟತನದಿಂದ ವರ್ತಿಸಿದ್ದಾರೆ.
ಬಿಎಂಟಿಸಿ ಬಸ್‌ಗಳಲ್ಲಿ 2024ರಿಂದಲೇ ಯುಪಿಐ ಮೂಲಕ ಡಿಜಿಟಲ್ ಟಿಕೆಟ್ ಪಾವತಿ ವ್ಯವಸ್ಥೆ ಜಾರಿಯಲ್ಲಿದ್ದು, ಪ್ರಸ್ತುತ ಸಂಸ್ಥೆಯ ಒಟ್ಟು ಟಿಕೆಟ್ ಆದಾಯದಲ್ಲಿ ಸುಮಾರು 53% ರಷ್ಟು ಯುಪಿಐ ಮೂಲಕವೇ ಸಂಗ್ರಹವಾಗುತ್ತಿದೆ. ಹೀಗಿರುವಾಗ ಸಾರ್ವಜನಿಕರಿಗಾಗಲಿ, ಸಚಿವರಿಗಾಗಲಿ ಯುಪಿಐ ಪಾವತಿ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವಲ್ಲಿ ನಿರ್ವಾಹಕ ಸಂಪೂರ್ಣ ವಿಫಲರಾಗಿದ್ದಾರೆ. ಕಂಡಕ್ಟರ್‌ನ ಈ ವರ್ತನೆಯಿಂದಾಗಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯ ವಿರುದ್ಧ ನಕಾರಾತ್ಮಕ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ನಿಗಮ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ನಿರ್ವಾಹಕ ರಾಮಕೃಷ್ಣರನ್ನ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಇನ್ನು ಸಚಿವರ ರಿಯಾಲಿಟಿ ಚೆಕ್ ವೇಳೆ ಜಯಮಹಲ್ ರಸ್ತೆ, ಫನ್ ವರ್ಲ್ಡ್ ಸಮೀಪ ಪ್ರಯಾಣಿಕರೊಬ್ಬರು ಕೈ ಸನ್ನೆ ಮಾಡಿ ನಿಲ್ಲಿಸಲು ಸೂಚಿಸಿದರೂ ಬಸ್ ನಿಲ್ಲಿಸದೆ ಹೋಗಿರುವುದನ್ನು ಸಚಿವರು ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಸಚಿವ ನಿರ್ದೇಶನದ ಮೇರೆಗೆ, ಫನ್ ವರ್ಲ್ಡ್ ಸಮೀಪ ಅಧಿಕೃತ ಬಸ್ ನಿಲುಗಡೆಯನ್ನು ಇಂದಿನಿಂದಲೇ ಜಾರಿಗೆ ತರಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.