
ಬೆಂಗಳೂರು, ಜುಲೈ 3: ನಮ್ಮ ಮೆಟ್ರೋ, ಬಿಎಂಟಿಸಿ ಎರಡೂ ಕೂಡ ಬೆಂಗಳೂರಿನ ಸಂಚಾರ ನಾಡಿ. ನಿತ್ಯ ನಗರದ ಲಕ್ಷಾಂತರ ಜನ ಬಳಕೆ ಮಾಡುವ ಸಾರಿಗೆ ಸಂಪರ್ಕ. ಹೆಚ್ಚು ಕಡಿಮೆ ಈ ಎರಡು ಸಾರಿಗೆಗಳ ನಿತ್ಯ ಬಳಕೆದಾರರ ಸಂಖ್ಯೆ 50 ಲಕ್ಷಕ್ಕೂ ಹೆಚ್ಚು. ಇತ್ತೀಚೆಗೆ ಉಭಯ ಸಾರಿಗೆಗಳ ನಡುವೆ ನಗರದ ಹಲವು ಕಡೆ ಸಾಮಾನ್ಯವಾಗಿ ಪೈಪೋಟಿ ಇದೆ. ನಾಲ್ಕೈದು ತಿಂಗಳ ಹಿಂದೆ ನಮ್ಮ ಮೆಟ್ರೋ (Namma Metro) ಪ್ರಯಾಣ ದರ ಏರಿಕೆ ಮಾಡಿದ್ದು, ಮೆಟ್ರೋಗೆ ಕೊಂಚ ಹಿನ್ನಡೆ ಉಂಟು ಮಾಡಿದೆ. ಆದರೆ ಇದರ ಪ್ರಯೋಜನ ಬಿಎಂಟಿಸಿಗೆ (BMTC) ಆಗಿದೆ.
ಮೆಟ್ರೋ ಪ್ರಯಾಣ ದರ ಏರಿಕೆಯ ನಂತರ ಬಿಎಂಟಿಸಿ ಬಸ್ಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ನಿತ್ಯ 2 ಲಕ್ಷ ಪ್ರಯಾಣಿಕರು ಹೆಚ್ಚುವರಿಯಾಗಿ ಪ್ರಯಾಣಿಸುತ್ತಿದ್ದು, ಹೆಚ್ಚುವರಿ 25 ಲಕ್ಷ ರೂ. ಆದಾಯ ಹರಿದುಬರುತ್ತಿದೆ.
ಫೆಬ್ರವರಿಯಲ್ಲಿ ಮೆಟ್ರೋ ದರ ಪರಿಷ್ಕರಣೆ ಮಾಡಲಾಯಿತು. ಮೆಟ್ರೋ ದರ ಹೆಚ್ಚಳ ಬಿಎಂಆರ್ಸಿಎಲ್ಗೆ ಆದಾಯ ಹೆಚ್ಚಿಸಿದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಯಿತು. ಆದರೆ, ಮೆಟ್ರೋ ಪ್ರಯಾಣ ಬಿಟ್ಟ ಜನ ಆಯ್ಕೆ ಮಾಡಿಕೊಂಡಿದ್ದು ಬಿಎಂಟಿಸಿಯನ್ನು. ಇದಕ್ಕೆ ಕಾರಣ ಮೆಟ್ರೋಗಿಂತ ಕಡಿಮೆ ದರದ ಪ್ರಯಾಣ. ಜೊತೆಗೆ ಸಂಪರ್ಕದ ವಿಚಾರದಲ್ಲಿ ಕೂಡ ಬಿಎಂಟಿಸಿ ಮುಂದೆ ಇದ್ದ ಕಾರಣ ಅನೇಕರು ಮತ್ತೆ ಬಿಎಂಟಿಸಿಯತ್ತ ಮುಖ ಮಾಡಿದರು. ಪರಿಣಾಮವಾಗಿ, ಬಿಎಂಟಿಸಿ ಬಸ್ಗಳಲ್ಲಿ ಪ್ರತಿ ನಿತ್ಯ ಸಂಚಾರ ಮಾಡುತ್ತಿದ್ದ ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ 2 ಲಕ್ಷದಷ್ಟು ಹೆಚ್ಚಳ ಕಂಡುಬಂದಿದೆ.
ಈ ಹಿಂದೆ ನಿತ್ಯ ಬಿಎಂಟಿಸಿಯಲ್ಲಿ ಸರಾಸರಿ 40 ಲಕ್ಷ ಪ್ರಯಾಣಿಕರ ಓಡಾಟ ಇತ್ತು. ನಿತ್ಯದ ಆದಾಯ 6.90 ಕೋಟಿ ರೂ. ಇತ್ತು. ಆದರೆ ಮೆಟ್ರೋ ದರ ಏರಿಕೆ ಬಳಿಕ ನಿತ್ಯ ಸರಾಸರಿ 42 ಲಕ್ಷ ಪ್ರಯಾಣಿಕರು, ಹಾಗೂ ಆದಾಯ 7.25 ಕೋಟಿ ರೂ.ಗೆ ಏರಿಕೆ ಆಗಿದೆ.
ಈ ಹಿಂದೆ ನಿತ್ಯ ನಗರದಲ್ಲಿ 6900 ಬಸ್ಗಳಿಂದ 54 ಸಾವಿರ ಟ್ರಿಪ್ ಮಾಡಲಾಗುತ್ತಿತ್ತು. ಇದೀಗ ಡಿಪೋದಲ್ಲಿದ್ದ ಬಸ್ಗಳನ್ನ ಕೂಡ ರಸ್ತೆಗಿಳಿಸುವ ಮೂಲಕ 54 ಸಾವಿರ ಇದ್ದ ಟ್ರಿಪ್ಗಳನ್ನು 8 ಸಾವಿರದಷ್ಟು ಹೆಚ್ಚಳ ಮಾಡಿ 62 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾದ ಕಾರಣ ಸದ್ಯ ಬಿಎಂಟಿಸಿ ಈ ನಿರ್ಧಾರಕ್ಕೆ ಬಂದಿದ್ದು, ಇದು ಲಾಭ ಹೆಚ್ಚಳಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟನಲ್ ರಸ್ತೆ, ವಾಹನ ಸವಾರರಿಗೆ ದುಬಾರಿ ಟೋಲ್ ಬರೆ!
ಒಟ್ಟಿನಲ್ಲಿ ಮೆಟ್ರೋ ದರ ಏರಿಕೆಯ ಲಾಭ ಪಡೆದು ಬಿಎಂಟಿಸಿ ತನ್ನ ಆದಾಯವನ್ನು ಹೆಚ್ಚಳ ಮಾಡಿಕೊಂಡಿದೆ. ಮೆಟ್ರೋದ ಉಳಿದ ಮಾರ್ಗಗಳು ಕಾರ್ಯಾಚರಣೆ ಆರಂಭಿಸಿದ ನಂತರವೂ ಪರಿಸ್ಥಿತಿ ಹೀಗೆಯೇ ಮುಂದುವರೆಯುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.
Published On - 7:53 am, Thu, 3 July 25