COVID 19: ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಮಾಸ್ಕ್ ಕಡ್ಡಾಯ: ಇಲ್ಲದಿದ್ದರೆ ನೋ ಎಂಟ್ರಿ…!
ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಪ್ರಯಾಣಿಕರಿಗೂ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ ಬಸ್ ಹತ್ತಿ ಎಂದು ಪ್ರಯಾಣಿಕರಿಗೆ ಬಿಎಂಟಿಸಿ ಸೂಚನೆ ನೀಡಿದೆ.
ಬೆಂಗಳೂರು: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಸೋಂಕು (Coronavirus) ಪ್ರಕರಣಗಳು ಹೆಚ್ಚಾಗುತ್ತಿರುವುದು ಹಾಗೂ ದೇಶದಲ್ಲೂ ಹೊಸ ರೂಪಾಂತರಿ ವೈರಾಣು ಸೋಂಕು ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳಲ್ಲಿ (BMTC Bus) ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸ್ಕ್ (Mask) ಕಡ್ಡಾಯ ಮಾಡಲಾಗಿದೆ.
ಕೊರೋನಾ ರೂಪಾಂತರಿ ತಳಿ BF.7 ಆತಂಕ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಕಂಡಕ್ಟರ್, ಡ್ರೈವರ್, ಪ್ರಯಾಣಿಕರಿಗೂ ಮಾಸ್ಕ್ ಕಡ್ಡಾಯ ಮಾಡಿದೆ. ಈ ಸಂಬಂಧ ಶೀಘ್ರವೇ ಬಿಎಂಟಿಸಿ ಗೈಡ್ಲೈನ್ಸ್ ಬಿಡುಗಡೆ ಮಾಡಲಿದೆ. ನಾಳೆಯಿಂದ (ಡಿಸೆಂಬರ್ 24) ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಬೇಕಾದರೆ ಮಾಸ್ಕ್ ಕಡ್ಡಾಯವಾಗಿ ಧರಸಬೇಕು. ಒಂದು ವೇಳೆ ಮಾಸ್ಕ್ ಹಾಕಿಲ್ಲ ಅಂದ್ರೆ ಬಸ್ ಹತ್ತುವಂತಿಲ್ಲ.
ಈ ಬಗ್ಗೆ ಸಂಚಾರ ನಿಯಂತ್ರಕರು ಮೆಜೆಸ್ಟಿಕ್, ಬಿಎಂಟಿಸಿ ಬಸ್ ಡ್ರೈವರ್, ಕಂಡಕ್ಟರ್ ಗಳಿಗೂ ಗೈಡ್ಲೈನ್ಸ್ ನೀಡುತ್ತಿದ್ದು, ಮಾಸ್ಕ್ ಧರಿಸುವಂತೆ ಹೇಳುತ್ತಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಚಾರ ನಿಯಂತ್ರಕರು, ಇಂದು ಮೊದಲನೇ ದಿನವಾದ್ದರಿಂದ ಎಲ್ಲರಿಗೂ ಸೂಚನೆ ನೀಡಿದ್ದೇವೆ. ನಾಳೆ(ಡಿ.24) ಬೆಳಗ್ಗೆ ಮಾಸ್ಕ್ ಹಾಕಿಲ್ಲ ಅಂದ್ರೆ ಗಾಡಿಯೊಳಗೆ(ಬಸ್) ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
‘ಮೆಟ್ರೋ’ದಲ್ಲಿ ಸಂಚರಿಸಲು ಸಹ ಮಾಸ್ಕ್ ಕಡ್ಡಾಯಗೊಳಿಸಲು BMRCL ಮುಂದಾಗಿದೆ. ಡಿಸೆಂಬರ್ 23ರ ಸಂಜೆ ವೇಳೆಗೆ ಮೆಟ್ರೋ ರೈಲಿನಲ್ಲಿ ಮಾಸ್ಕ್ ಕಡ್ಡಾಯ ಆದೇಶ ಹೊರಡಿಸುವ ಸಾಧ್ಯತೆಗಳಿವೆ. ಈಗಾಗಲೇ ಮೆಟ್ರೋ ನಿಲ್ದಾಣದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಕೊರೊನಾ ಭೀತಿ: ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಅರಿವು ಮೂಡಿಸಲು ಮುಂದಾದ ಬಿಬಿಎಂಪಿ
ಕೊರೊನಾ ಆತಂಕ ಕಾಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಬಿಬಿಎಂಪಿ ಸಾರ್ವಜನಿಕರಿಗೆ ಮಾಸ್ಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಸದ್ಯಕ್ಕೆ, ಒಳಾಂಗಣ ಸಮಾರಂಭಗಳಲ್ಲಿ ಮಾತ್ರ ಮಾಸ್ಕ್ ಬಳಕೆ ಮಾಡುವುದನ್ನು ಸರ್ಕಾರ ಕಡ್ಡಾಯ ಮಾಡಿರುವುದರಿಂದ ಬಿಬಿಎಂಪಿ ಹೊರ ಭಾಗದಲ್ಲೂ ಜನರು ಮಾಸ್ಕ್ ಧರಿಸುವ ಮೂಲಕ ಮಹಾಮಾರಿ ಹಾವಳಿಯಿಂದ ತಪ್ಪಿಸಿಕೊಳ್ಳಿ ಎಂಬ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನಿಸಿದೆ. ಜನರಲ್ಲಿ ಮಾಸ್ಕ್ ಬಗ್ಗೆ ಅರಿವು ಮೂಡಿಸಲು ಬಿಬಿಎಂಪಿ ಮಾರ್ಷಲ್‍ಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:10 pm, Fri, 23 December 22