ಪ್ರತಿಷ್ಠಿತ ಹೋಟೆಲ್​​ನಲ್ಲಿ ಮಹಿಳೆಯ ಜೊತೆ ಸ್ಪಾ ಸಿಬ್ಬಂದಿ ಅನುಚಿತ ವರ್ತನೆ ಆರೋಪ: ಕೇಸ್​​ ದಾಖಲು

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಸ್ಪಾದಲ್ಲಿ ಕೆನಡಾದ ಮಹಿಳೆಯೊಬ್ಬರ ಜೊತೆ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೋಟೆಲ್ ಆಡಳಿತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಹಿಳೆ ಹೇಳಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗಿದೆ.

ಪ್ರತಿಷ್ಠಿತ ಹೋಟೆಲ್​​ನಲ್ಲಿ ಮಹಿಳೆಯ ಜೊತೆ ಸ್ಪಾ ಸಿಬ್ಬಂದಿ ಅನುಚಿತ ವರ್ತನೆ ಆರೋಪ: ಕೇಸ್​​ ದಾಖಲು
ಸಾಂದರ್ಭಿಕ ಚಿತ್ರ
Image Credit source: Google

Updated on: Feb 10, 2026 | 3:56 PM

ಬೆಂಗಳೂರು, ಫೆಬ್ರವರಿ 10: ಕೆನಡಾದ ಮಹಿಳೆಯೊಬ್ಬರ ಜೊತೆ ನಗರದ ಖಾಸಗಿ ಹೋಟೆಲ್​​ನ ಸ್ಪಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದು, ಮಸಾಜ್ ಸಮಯದಲ್ಲಿ ಥೆರಪಿಸ್ಟ್ ಅಸಮಂಜಸವಾಗಿ ವರ್ತಿಸಿದ್ದಾನೆ. ತಾನು ಅರೆನಗ್ನ ಸ್ಥಿತಿಯಲ್ಲಿದ್ದಾಗಲೇ ಕೊಠಡಿಯ ಬಾಗಿಲು ತೆರೆದಿದ್ದರಿಂದ ತೀವ್ರ ಅವಮಾನ ಮತ್ತು ಮಾನಸಿಕ ಪೀಡನೆ ಅನುಭವಿಸಬೇಕಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಘಟನೆ ನಡೆದಿದೆ.

ಘಟನೆ ಬಗ್ಗೆ ದೂರಿದರೂ ನಿರ್ಲಕ್ಷ್ಯ ಆರೋಪ

ಇನ್ನು ನಡೆದ ಘಟನೆಯ ಬಗ್ಗೆ ತಕ್ಷಣವೇ ಮಹಿಳೆ ಹೋಟೆಲ್ ಆಡಳಿತದ ಗಮನಕ್ಕೆ ತಂದಿದ್ದಾರೆ. ಆದರೆ ಅವರ ದೂರನ್ನು ಹೋಟೆಲ್​​ ಗಂಭೀರವಾಗಿ ಪರಿಗಣಿಸಲಾಗಿಲ್ಲ. ಬದಲಾಗಿ 7000 ರೂಪಾಯಿ ಮಸಾಜ್ ಶುಲ್ಕದ ಹಣವನ್ನ ಮರುಪಾವತಿ ಮಾಡಿ, ವಿಷಯವನ್ನು ಮುಂದುವರಿಸದಂತೆ ಸಲಹೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಮೊದಲ ಸಲ ಕಮಲಾಕರ ಜೊತೆ ಹೋಗಿದ್ದಕ್ಕೆ 10 ಸಾವಿರ ರೂ. ನಿರೀಕ್ಷಿಸಿದ್ದ ಸುಚಿತ್ರಾಗೆ ಸಿಕ್ಕಿದ್ದು 35 ಸಾವಿರ ರೂ.

ಹೋಟೆಲ್​​ ಆಡಳಿತದಿಂದ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದ ಮಹಿಳೆ ನಿರಾಸೆಗೊಂಡ ಬಳಿಕ ಘಟನೆ ಬಗ್ಗೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಥೆರಪಿಸ್ಟ್ ಮತ್ತು ಇತರ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರೋದಾಗಿ ಟೈಮ್ಸ್​​ ನೌ ವರದಿ ಮಾಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿವಿದೇಶಿ ಮಹಿಳೆಗೆ ತಪಾಸಣೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೆಲ ದಿನಗಳ ಹಿಂದೆಯಷ್ಟೇ ಕೇಳಿಬಂದಿತ್ತು. ಕೊರಿಯಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿದೇಶಿ ಮಹಿಳೆಗೆ ಏರ್​ಲೈನ್ಸ್ ಸಿಬ್ಬಂದಿ ಅಪಾನ್ ಅಹ್ಮದ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರಲಾದ ಕಾರಣ ಆತನನ್ನು ಪೊಲೀಸರು ಬಂಧಿಸಿದ್ದರು. ಆ ಘಟನೆ ಮಾಸುವ ಮುನ್ನವೇ ವಿದೇಶಿ ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪ ಬೆಂಗಳೂರಲ್ಲಿ ಕೇಳಿಬಂದಿರೋದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.