ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭಾರತ ದೇಶದ ಬ್ಯಾಂಕಿಂಗ್ ಇತಿಹಾಸದಲ್ಲಿ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ದಿವಾಳಿ ಸಂದರ್ಭದಲ್ಲಿ ಠೇವಣಿದಾರರ ಹಣ ಕೊಡಲಾಗದಿದ್ದರೆ, 90 ದಿನಗಳಲ್ಲಿ 5 ಲಕ್ಷದವರೆಗೆ ಠೇವಣಿ ವಾಪಸ್ ಕೊಡಬೇಕು. ಬ್ಯಾಂಕ್ ದಿವಾಳಿ ಹಂತ ತಲುಪಿದರೂ ಹಣ ಪಡೆಯಬಹುದು. ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕೇಂದ್ರದ ಗಮನ ಸೆಳೆದಿದ್ದರು. ಠೇವಣಿದಾರರ ಹಣ ಕೊಡಿಸುವಲ್ಲಿ ಅವರ ಪಾತ್ರ ಮಹತ್ವದ್ದು. ಬೇರೆ ಬ್ಯಾಂಕ್ಗಳು ದಿವಾಳಿಯಾಗಿದ್ದರೂ ಈ ನಿಯಮ ಅನ್ವಯ ಆಗಲಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ. ಕೇಂದ್ರದ ಮುಂದೆ ನಾಯಕತ್ವ ಬದಲಾವಣೆಯ ಪ್ರಸ್ತಾಪವಿಲ್ಲ. ನಾನು ಮೊದಲೇ ಅತ್ಯಂತ ಸ್ಪಷ್ಟವಾಗಿ ಅಧಿಕೃತವಾಗಿ ಹೇಳಿರುವೆ. ರಾಜ್ಯದಲ್ಲಿ ಅಂತಹ ಯಾವುದೇ ಬದಲಾವಣೆ ನಡೆಯುವುದಿಲ್ಲ. 2023ರ ಚುನಾವಣೆವರೆಗೂ ಬೊಮ್ಮಾಯಿ ಸಿಎಂ ಆಗಿರುತ್ತಾರೆ. ಯಾವುದೇ ಗೊಂದಲವಿಲ್ಲದೆ ಅಧಿಕೃತವಾಗಿ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಮಿಕ್ರಾನ್ ಪ್ರಭೇದದ 3ನೇ ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಲಾಕ್ಡೌನ್ ಮಾತ್ರ ಕಠಿಣ ಕ್ರಮವಲ್ಲ, ಜನ ಜಾಗೃತರಾಗಬೇಕು. ಮೊದಲ ಅಲೆಯಲ್ಲಿ ದೇಶದಲ್ಲಿ ಲಾಕ್ಡೌನ್ ಜಾರಿಯಾಯ್ತು. ಈಗ ಸ್ಥಳೀಯವಾಗಿ ಕಂಟೇನ್ಮೆಂಟ್ ವಲಯ ಮಾಡಲಾಗಿದೆ. ಜಿಲ್ಲಾವಾರು ಕೊರೊನಾ ನಿಯಮ ಪಾಲನೆಗೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಡಿಸಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಗಳ ವ್ಯವಸ್ಥೆಯಿದೆ. ಕೊವಿಡ್ ಎದುರಿಸಲು ನಾವು ಸಂಪೂರ್ಣ ಸಜ್ಜಾಗಿದ್ದೇವೆ. ಆರ್ಥಿಕ ಚಟುವಟಿಕೆಗೆ ನಿರ್ಬಂಧ ಹೇರಲು ಆಗುವುದಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಬಲವಂತ, ಒತ್ತಾಯ, ಆಮಿಷದ ಮತಾಂತರ ತಪ್ಪು. ಇದನ್ನು ತಡೆಯಲು ಕಾನೂನು ತರುವ ಬಗ್ಗೆ ಚರ್ಚೆ ನಡೀತಿದೆ. ಇನ್ನೂ ಅಂತಿಮವಾಗಿಲ್ಲ ಆದರೆ ಆಗಲೇ ವಿರೋಧ ಮಾಡುತ್ತಿರುವುದೇಕೆ? ಎಲ್ಲಾ ಧರ್ಮದವರಿಗೂ ಅವರ ಪೂಜಾ ಪದ್ಧತಿಗೆ ಅವಕಾಶವಿದೆ. ಆಸೆ, ಆಮಿಷಗಳಿಂದ ಪೂಜಾ ಪದ್ಧತಿ ಬದಲಾವಣೆ ಒಪ್ಪಲಾಗಲ್ಲ. ಹಿಂದೂಗಳು ಮತಾಂತರ ಮಾಡಲ್ಲ, ಆದ್ದರಿಂದ ವಿರೋಧಿಸಿಲ್ಲ. ಯಾರು ಮತಾಂತರ ಮಾಡುತ್ತಾರೋ ಅವರು ವಿರೋಧಿಸ್ತಿದ್ದಾರೆ. ಕಾಲಿಲ್ಲದವರಿಗೆ ಕಾಲು ಬರುತ್ತೆ ಎಂದು ನಂಬಿಸುವುದು ತಪ್ಪು ಎಂದು ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೇವಸ್ಥಾನ ಕಟ್ಟುವ ಬದಲು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ: ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ ಹೇಳಿಕೆ
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆ ಹ್ಯಾಕ್; ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ ಎಂದು ನಕಲಿ ಟ್ವೀಟ್!