
ಬೆಂಗಳೂರು, ಆಗಸ್ಟ್ 12: ಮೈಸೂರು ವಿಶ್ವವಿದ್ಯಾನಿಲಯದ (Mysuru University) ಮೌಲ್ಯಮಾಪನ ಕುಲಸಚಿವರಾಗಿ ಪ್ರೊ ಬಿಕೆ ಕೆಂಪೇಗೌಡ ನೇಮಕ ಮಾಡಲಾಗಿದೆ. ಆದರೆ ನಿಯಮ ಬಾಹಿರವಾಗಿ ಮಾಡಿರುವ ನೇಮಕಾತಿಯನ್ನು ತಕ್ಷಣವೇ ರದ್ದುಗೊಳಿಸುವಂತೆ ಕೋರಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
‘ಮೈಸೂರು ವಿವಿ ರಾಜ್ಯದ ಪ್ರತಿಷ್ಠಿತ ಹಾಗೂ ಐತಿಹಾಸಿಕ ಉನ್ನತ ಶಿಕ್ಷಣ ಸಂಸ್ಥೆಯಾಗಿದ್ದು, ಅದರ ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಅಧಿನಿಯಮ ಹಾಗೂ ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಂತ ಅಗತ್ಯವಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ: ಹೈಸ್ಕೂಲ್, ಪಿಯುಸಿ ಮಕ್ಕಳಿಗೆ ಸಿಗಲಿದೆ ಮೆಂಟಲ್ ಹೆಲ್ತ್ ಸಪೋರ್ಟ್!
‘ಮೈಸೂರು ವಿವಿ ಮೌಲ್ಯಮಾಪನ ಕುಲಸಚಿವ ಹುದ್ದೆಗೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ವಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಅಥವಾ ವ್ಯಾಸಂಗ ವಿಭಾಗದ ಹಿರಿಯ ಸದಸ್ಯರನ್ನು ಪರಿಗಣಿಸಿ ನೇಮಕ ಮಾಡಬೇಕೆಂಬ ನಿಯಮವಿದೆ. ಕಾಲೇಜು ಶಿಕ್ಷಣ ಇಲಾಖೆ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರನ್ನು ಈ ಹುದ್ದೆಗೆ ನೇಮಕ ಮಾಡಲು ಅವಕಾಶವಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ. ಕೆಂಪೇಗೌಡ ಬಿಕೆರನ್ನು ಮೈಸೂರು ವಿವಿ ಮೌಲ್ಯಮಾಪನ ಕುಲಸಚಿವರ ಹುದ್ದೆಗೆ ನೇಮಕ ಮಾಡಿರುವುದು ಮೇಲ್ಕಂಡ ನಿಯಮಗಳು ಹಾಗೂ ವಿಶ್ವವಿದ್ಯಾನಿಲಯ ಅಧಿನಿಯಮದ ಆಶಯಕ್ಕೆ ವಿರುದ್ಧವಾಗಿರುವ ಸಾಧ್ಯತೆ ಕಂಡುಬರುತ್ತಿದೆ. ಆದ್ದರಿಂದ ಈ ನೇಮಕಾತಿಯ ಕಾನೂನು ಬದ್ಧತೆಯನ್ನು ಸರ್ಕಾರ ತಕ್ಷಣ ಪರಿಶೀಲಿಸುವ ಅಗತ್ಯವಿದೆ’ ಎಂದು ಹೇಳಿದ್ದಾರೆ.
‘ಪ್ರೊ. ಕೆಂಪೇಗೌಡ ಬಿ.ಕೆ ವಿರುದ್ಧ ಈ ಹಿಂದೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳು ಬೆಳಕಿಗೆ ಬಂದಿರುವ ಕುರಿತು ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ಶಾಸಕರು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸಭೆ ನಡೆಸಿ, ಕೆಲವು ನಿರ್ದೇಶನಗಳ ಆಧಾರದ ಮೇಲೆ ಅವರನ್ನು ಪ್ರಾಂಶುಪಾಲರ ಹುದ್ದೆಯಿಂದ ಬದಲಾವಣೆ ಅಥವಾ ನಿಯುಕ್ತಿಗೊಳಿಸಿರುವುದಾಗಿ ತಿಳಿದುಬಂದಿದೆ. ನಂತರ ಅವರು ಅನಾರೋಗ್ಯದ ಕಾರಣ ನೀಡಿ ಕರ್ತವ್ಯಕ್ಕೆ ಗೈರುಹಾಜರಾಗಿರುವ ಕುರಿತು ಸಹ ಮಾಹಿತಿ ಲಭ್ಯವಾಗಿದೆ’.
‘ಈ ಆರೋಪಗಳ ಸತ್ಯಾಸತ್ಯತೆ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕಾಗಿದೆ. ಅದೇ ರೀತಿ, ಅವರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದ, ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಾದ ವಿಶೇಷ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಗಳು ಸಹ ಕೇಳಿಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಿ, ಆರೋಪಗಳು ಸತ್ಯವೆಂದು ಕಂಡುಬಂದಲ್ಲಿ ಸಂಬಂಧಪಟ್ಟ ಕಾನೂನುಗಳಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ: ಹಾಸನ ಜಿಲ್ಲೆಗೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್: ಶಿರಾಡಿಘಾಟ್ ಮಾರ್ಗದಲ್ಲಿ ಯಶಸ್ವಿ ಪ್ರಾಯೋಗಿಕ ಸಂಚಾರ
‘ಈ ರೀತಿಯ ಗಂಭೀರ ಆರೋಪಗಳು ಹಾಗೂ ನೇಮಕಾತಿಯ ನಿಯಮಬದ್ಧತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ ಅವರನ್ನು ಮೈಸೂರು ವಿವಿ ಪ್ರಮುಖ ಆಡಳಿತಾತ್ಮಕ ಹುದ್ದೆಗೆ ನೇಮಕ ಮಾಡಿರುವುದು ಸಾರ್ವಜನಿಕರಲ್ಲಿ ಸಹಜವಾಗಿಯೇ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿವಿ ಆಡಳಿತದಲ್ಲಿ ಅರ್ಹತೆ, ಅನುಭವ, ನಿಯಮಬದ್ಧತೆ, ಪಾರದರ್ಶಕತೆ ಮತ್ತು ನೈತಿಕತೆಗಳಿಗೆ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ, ನಿಯಮಗಳನ್ನು ಕಡೆಗಣಿಸಿ ಯಾವುದೇ ನೇಮಕಾತಿ ಮಾಡುವುದು ಉನ್ನತ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡಬಹುದು’ ಎಂದು ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.