ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ನಾಲ್ವರು ದುರ್ಮರಣ
ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮರಗಲ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮಾರ್ಗಮಧ್ಯೆ ಒಬ್ಬರು ಮೃತಪಟ್ಟಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಕರಣ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಕೋಲಾರ, ಸೆಪ್ಟೆಂಬರ್ 24: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತಗಳ ಸರಣಿ ಮುಂದುವರೆದಿದೆ. ಇದೀಗ ಹೈವೇನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ದುರ್ಮರಣ ಹೊಂದಿದ್ದರೆ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮತ್ತೊಬ್ಬ ಮೃತಪಟ್ಟಿದ್ದಾರೆ. ಆ ಮೂಲಕ ಐವರ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮರಗಲ್ ಬಳಿ ಈ ಘಟನೆ ನಡೆದಿದೆ. ಓರ್ವನ ಸ್ಥಿತಿ ಗಂಭೀರವಾಗಿದೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿ ಆಗಿದೆ. ಕಾರು ಪಲ್ಟಿಯಾದ ರಭಸಕ್ಕೆ ನಜ್ಜುಗುಜ್ಜಾಗಿದೆ. ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ, ಆದರೆ ಮೃತರು ಹಾಗೂ ಗಾಯಾಳುಗಳು ಪುಣೆ ಮೂಲದವರು ಎನ್ನಲಾಗಿದೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕೋಲಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಸಂಸದ ಮಲ್ಲೇಶ್ ಬಾಬು
ಇನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರಿಗೆ ಕೋಲಾರ ಸಂಸದ ಮಲ್ಲೇಶ್ ಬಾಬು ನೆರವಾಗಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಅಪಘಾತದಲ್ಲಿ ತೊಪ್ಪನಹಳ್ಳಿ ಗ್ರಾಮದ ಜಗದೀಶ್ ಗಾಯಗೊಂಡಿದ್ದರು. ಅದೇ ಮಾರ್ಗವಾಗಿ ತೆರಳುತ್ತಿದ್ದ ಮಲ್ಲೇಶ್ ಬಾಬು ಅವರು ಆಂಬ್ಯುಲೆನ್ಸ್ ಕರೆಸಿ ಕೂಡಲೇ ಆಸ್ಪತ್ರೆಗೆ ರವಾನಿಸುವ ಮೂಲಕ ಗಾಯಾಳುಗಳಿಗೆ ನೆರವಾಗಿದ್ದಾರೆ.
ಹಿಟ್ ಆ್ಯಂಡ್ ರನ್ಗೆ ಇಬ್ಬರು ಸಾವು: ಮತ್ತಿಬ್ಬರ ಸ್ಥಿತಿ ಗಂಭೀರ
ಹಿಟ್ ಆ್ಯಂಡ್ ರನ್ಗೆ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಬಳಿ ನಿನ್ನೆ ರಾತ್ರಿ ನಡೆದಿದೆ. ಹನುಮಯ್ಯ (50) ಮತ್ತು ಲಿಂಗರಾಜು (35) ಮೃತರು. ರಾಮಲಿಂಗಪ್ಪ ನಾಯಕ ಹಾಗೂ ರಂಗನಾಥ ನಾಯಕ ಸ್ಥಿತಿ ಗಂಭೀರವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಶಿರಸಿ ಬಳಿ ಎರಡು ಬಸ್ಗಳ ನಡುವೆ ಭೀಕರ ಅಪಘಾತ: ಹಲವು ಪ್ರಯಾಣಿಕರ ಸ್ಥಿತಿ ಗಂಭೀರ
ನಿನ್ನೆ ರಾತ್ರಿ ಜಾಲಹಳ್ಳಿಯಿಂದ ತಿಂಥಣಿ ಬ್ರಿಜ್ ಕಡೆಗೆ ತೆರಳುತ್ತಿದ್ದ ಬೊಲೆರೋ ವಾಹನ ಮಾರ್ಗ ಮಧ್ಯೆ ಎದುರಿಗೆ ಬರುತ್ತಿದ್ದವರಿಗೆ ಡಿಕ್ಕಿ ಹೊಡೆದಿದೆ. ಅಪಘಾತವೆಸಗಿ ಬೊಲೆರೋ ವಾಹನ ಸಮೇತ ಚಾಲಕ ಪರಾರಿ ಆಗಿದ್ದು, ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಪಘಾತಕ್ಕೆ ಕಾಮಗಾರಿ ಕಾರಣ: ಸ್ಥಳೀಯರಿಂದ ಪ್ರತಿಭಟನೆ
ಇನ್ನು ಘಟನೆಗೆ ಜಲ ಜೀವನ್ ಮಿಷನ್ ಕಾಮಗಾರಿ ಕಾರಣ ಅಂತ ಬೆಳ್ಳಂಬೆಳಿಗ್ಗೆ ಸ್ಥಳೀಯರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಪ್ರತಿಭಟಿಸಿದ್ದಾರೆ. ಘಟನಾ ಸ್ಥಳದ ಪಕ್ಕದಲ್ಲಿ ಜೆಜೆಎಂ ಕಾಮಗಾರಿಗಾಗಿ ಗುಂಡಿ ಅಗೆಯಲಾಗಿದೆ. ಬೇಕಾಬಿಟ್ಟಿ ಮಣ್ಣು ಹಾಕಲಾಗಿದೆ. ಸಂಚಾರಿ ನಾಮಫಲಕಗಳು ಅಥವಾ ಎಚ್ಚರಿಕೆ ಫಲಕಗಳನ್ನ ಅಳವಡಿಸಿಲ್ಲ. ಇದು ಘಟನೆಗೆ ಕಾರಣ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದು, ಮೃತರಿಗೆ ಪರಹಾರ ಒದಗಿಸುವಂತೆ ಪಟ್ಟು ಹಿಡಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Thu, 24 September 26




