Chamrajpet Idgah Maidan: ನನ್ನ ಪ್ರಾಣ ಇರೋವರೆಗೂ ಮೈದಾನ ತೆಗೆಯಲು ಸಾಧ್ಯವಿಲ್ಲ; ಜಮೀರ್ ಅಹಮದ್
ಆಟದ ಮೈದಾನ ಎಲ್ಲಿಗೆ ಹೋಗಿದೆ? ಆಟದ ಮೈದಾನವನ್ನು ಯಾರು ತೆಗೆದಿದ್ದಾರೆ ಎಂದು ಜಮೀರ್ ಅಹಮದ್ ಪ್ರಶ್ನಿಸಿದರು.
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ (Chamrajpet Idgah Maidan) ಆಟವಾಡಲು ಮಕ್ಕಳಿಗೆ ಅವಕಾಶ ಕೊಡುವುದಿಲ್ಲ ಎಂದು ಯಾರೂ ಹೇಳಿಲ್ಲ. ನನ್ನ ಪ್ರಾಣ ಹೋಗುವವರೆಗೂ ಮೈದಾನ ತೆಗೆಯಲು ಸಾಧ್ಯವಿಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ (Zameer Ahmed) ಹೇಳಿದರು. ಚಾಮರಾಜಪೇಟೆಯ ವೆಂಕಟಾರಾಮ್ ಕಲಾ ಭವನದಲ್ಲಿ ಶುಕ್ರವಾರ (ಜುಲೈ 8) ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರೂ ಆಟದ ಮೈದಾನ ಉಳಿಸಬೇಕು ಎಂದು ಸಭೆ ಮಾಡಿ ಒತ್ತಾಯಿಸಿದರು. ಆಟದ ಮೈದಾನ ಎಲ್ಲಿಗೆ ಹೋಗಿದೆ? ಆಟದ ಮೈದಾನವನ್ನ ಯಾರು ತೆಗೆದಿದ್ದಾರೆ? ಎಂಎಲ್ಎ, ಬಿಬಿಎಂಪಿ, ವಕ್ಫ್ ಬೋರ್ಡ್ ಯಾರಾದ್ರೂ ಇಲ್ಲಿ ಆಟದ ಮೈದಾನ ಇರುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.
ಚಾಮರಾಜಪೇಟೆಯಲ್ಲಿ ಆಟ ಆಡಲು ಜಾಗ ಸಿಗುತ್ತಿಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಆಟ ಆಡೋಕೆ ಜಾಗ ಕೊಡೊಲ್ಲ ಅಂತ ಯಾರಾದರೂ ಹೇಳಿದ್ದಾರಾ ಎಂದು ಕೇಳಿದರು. ನನ್ನ ಪ್ರಾಣ ಇರುವವರೆಗೂ ಈ ಮೈದಾನ ತೆಗೆಯಲು ಸಾಧ್ಯವೇ ಇಲ್ಲ. ಇದು ಆಟದ ಮೈದಾನವಾಗಿಯೇ ಉಳಿಯುತ್ತದೆ. 1871ರಿಂದಲೂ ಇದನ್ನು ಈದ್ಗಾ ಮೈದಾನವಾಗಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯ ಆರಂಭದಿಂದಲೂ ಆಟದ ಮೈದಾನವಾಗಿ ಉಳಿಸಬೇಕು ಎನ್ನುವ ಬಗ್ಗೆಯೇ ಹೆಚ್ಚಿನ ಒತ್ತಾಯ ಕೇಳಿಬಂತು. ಕೈ ಎತ್ತುವ ಮೂಲಕ ಒಮ್ಮತದ ನಿರ್ಧಾರ ತೆಗೆದುಕೊಂಡರು. ಇದಕ್ಕೆ ಜಮೀರ್ ಅಹಮದ್ ಸಹ ಸಹಮತ ವ್ಯಕ್ತಪಡಿಸಿದರು.
ಜಮೀರ್ ಅಹಮದ್ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಮಾಜಿ ಕಾರ್ಪೊರೇಟರ್ಗಳಾದ ಕೋಕಿಲಾ ಚಂದ್ರಶೇಖರ್, ಸುಜಾತ ಡಿ.ಸಿ ರಮೇಶ್, ಬಿ.ಟಿ.ಶ್ರೀನಿವಾಸಮೂರ್ತಿ, ಚಂದ್ರಶೇಖರ್, ಅಲ್ತಾಫ್ ಖಾನ್ ಸೇರಿದಂತೆ ಹಲವು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ್ ಮಾತನಾಡಿ, ನನ್ನ ಗೆಲುವಿಗೆ ಕ್ಷೇತ್ರದ ಎಲ್ಲ ವರ್ಗದ ಸಹಕರಿಸಿದ್ದಾರೆ. ಕೇವಲ ಒಂದೇ ಧರ್ಮದ ಪರ ನಾನು ನಿಲ್ಲಲು ಆಗುವುದಿಲ್ಲ. ಈ ಮೈದಾನವನ್ನು ಆಟದ ಮೈದಾನವಾಗಿ ಉಳಿಸುವುದಾಗಿ ಜಮೀರ್ ಮಾತು ಕೊಟ್ಟಿದ್ದಾರೆ ಎಂದು ಹೇಳಿದರು.
ಸಭೆಗೆ ಬಂದ ಜಯ ಕರ್ನಾಟಕ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ವಸಂತ್ ಅವರನ್ನು ವೇದಿಕೆಗೆ ಆಹ್ವಾನಿಸಿದ ಜಮೀರ್ ಅಹಮದ್, ‘ಬಾರಪ್ಪ ಬಾ, ಬಂದ್ ಸಭೆಗೆ ನೀನೇ ಹೋಗಿದ್ದೆಯಂತೆ. ಬಾ ಇಲ್ಲಿಗೆ’ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವಸಂತ್ ಅವರನ್ನು ವೇದಿಕೆಗೆ ಆಹ್ವಾನಿಸಿದರು. ‘ಏನೇ ಇದ್ರೂ ಹೇಳಪ್ಪ, ನನ್ನ ತಪ್ಪು ತಿದ್ದಿಕೊಳ್ಳುತ್ತೇನೆ’ ಎಂದು ಮುಗುಳ್ನಕ್ಕರು.
‘ಯಾವುದೇ ಕಾರ್ಯಕ್ರಮ ಮಾಡಲೂ ಇಲ್ಲಿ ಒಂದೇ ಒಂದು ಮೈದಾನವಿಲ್ಲ. ಏನ್ ಮಾಡೋದು ಅಣ್ಣ’ ಎಂದು ವಂಸತ್ ಅವರು ಜಮೀರ್ಗೆ ಕೇಳಿದರು. ‘ಈಗ ಗಣೇಶ ಹಬ್ಬ ಮಾಡ್ಬೇಕು ಅಂತ ಹೇಳ್ತಿದ್ಯಾ, ಎಷ್ಟು ವರ್ಷದಿಂದ ಮೈದಾನ ಇರಲಿಲ್ಲ? ನೀನು ಎಷ್ಟು ವರ್ಷದಿಂದ ಇಲ್ಲಿ ಇದ್ಯಾ. ಇದು ಗೊಂದಲ ಸೃಷ್ಟಿಸುವ ಪ್ರಶ್ನೆ. ಆಯ್ತು ಇನ್ಮುಂದೆ ಫ್ಲಾಗ್ ಹಾರಿಸೋಣ ಬಿಡು’ ಎಂದು ವಿವಾದವನ್ನು ಶಮನಗೊಳಿಸಿದರು ಜಮೀರ್.
ಈದ್ಗಾ ಮೈದಾನದ ಹತ್ತಿರವೇ ಮಲೈಮಹದೇಶ್ವರ ದೇವಸ್ಥಾನವಿದೆ. ಮೈದಾನದ ಸುತ್ತಮುತ್ತಲೂ ಮನೆಗಳಿವೆ. ಅಲ್ಲಿ ಕುರಿ-ಮೇಕೆ ಸಂತೆ ನಡೆಯುವ ಕಾರಣ ಕೆಟ್ಟ ವಾಸನೆ ಬರುತ್ತಿದೆ. ಮಕ್ಕಳು ಆಟವಾಡಲೂ ಸಮಸ್ಯೆಯಾಗ್ತಿದೆ. ಅಲ್ಲಿ ಸಂತೆ ನಡೆಸಲು ಅವಕಾಶ ಕೊಡಬಾರದು ಎಂದು ಜನರು ಒತ್ತಾಯಿಸಿದರು. ಸ್ಥಳೀಯರಾದ ನೀವೆಲ್ಲರೂ ಏನು ಹೇಳುವಿರೋ ಅದಕ್ಕೆ ನಾವು ಬದ್ಧ ಎಂದು ಜಮೀರ್ ಪ್ರತಿಕ್ರಿಯಿಸಿದರು.
ಸಂಸದ ಪಿ.ಸಿ.ಮೋಹನ್ ಹಾಗೂ ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಸಭೆಗೆ ಬಂದಿರಲಿಲ್ಲ. ನಮ್ಮ ಕ್ಷೇತ್ರದ ಎಂಪಿ ಸಭೆಗೆ ಬಂದಿಲ್ಲ. ಪಾಲಿಕೆಯ ಬಿಜೆಪಿ ಸದಸ್ಯರು ಆಹ್ವಾನ ಕಳಿಸಿದರೂ ಬರಲಿಲ್ಲ. ಈ ವರ್ಷದಿಂದ ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ. ನೀವು ಹೇಳಿದಂತೆ ಕೇಳೋನು ನಾನು. ಏನೇ ಇದ್ರೂ ಕೇಳಿ ನಾನು ಕ್ಷೇತ್ರದ ಜನರ ಗುಲಾಮ, ನಾನು ನಿಮ್ಮ ಗುಲಾಮ ಎಂದರು.
Published On - 12:34 pm, Fri, 8 July 22