
ಬೆಂಗಳೂರು/ಚಿಕ್ಕಬಳ್ಳಾಪುರ, ಜುಲೈ 07: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿ ಚಪ್ಪಲಿ ಎಸೆದ ಆರೋಪ ಪ್ರಕರಣ ಸಂಬಂಧ ನಾಲ್ವರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಶಾಸಕರಿಗೆ ಅಪಮಾನವಾಗಿದ್ದರೆ ಮಾನನಷ್ಟ ಕೇಸ್ ದಾಖಲಿಸಬಹುದಿತ್ತು. 800 ಜನರಲ್ಲಿ ಈ ನಾಲ್ವರ ವಿರುದ್ಧ ಕೇಸ್ ದಾಖಲಿಸಿದ್ದೇಕೆ? ಎಂದು ಚಿಕ್ಕಬಳ್ಳಾಪುರ ಪೊಲೀಸರಿಗೆ ನ್ಯಾ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಪ್ರಶ್ನೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸೂಚಿಸಿ ಮೋಹನ್ ರಾಜ್, ಅಕ್ಕುಲ ರೆಡ್ಡಿ, ಟಿ.ಎಸ್.ಮಹೇಂದ್ರ ಮತ್ತು ಟಿ.ಎಸ್.ಪ್ರಕಾಶ್ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಚಿಕ್ಕಬಳ್ಳಾಪುರದಲ್ಲಿ ಜೂನ್ 27ರಂದು ನಡೆದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಕುಮಾರಸ್ವಾಮಿ ಅವರ ಕುರಿತು ಶಾಸಕರ ಹೇಳಿಕೆ ಬಗ್ಗೆ ಸಿಡಿದೆದ್ದಿದ್ದ ಜೆಡಿಎಸ್ ಕಾರ್ಯಕರ್ತರು, ನಗರದ ಕನ್ನಡ ಭವನದಲ್ಲಿ ನಡೆಯುತ್ತಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವ ಕಾರ್ಯಕ್ರಮಕ್ಕೆ ನುಗ್ಗಿದ್ದರು. ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಕೆಳಗಿಳಿಸಬೇಕು ಎಂದು ಘೋಷಣೆ ಕೂಗಿ ಗಲಾಟೆ ನಡೆಸಿದ್ದರು. ಬಳಿಕ ಸ್ವಾಮೀಜಿ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತ್ತು.
ಇದನ್ನೂ ಓದಿ: ತೋಳು ತಟ್ಟಿ ಮೀಸೆ ತಿರುವಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ
ಆದರೆ ಕಾರ್ಯಕ್ರಮ ಮುಗಿದ ಬಳಿಕ ಗಲಾಟೆ ಮತ್ತೆ ಶುರುವಾಗಿದ್ದು, ಪ್ರದೀಪ್ ಈಶ್ವರ್ ತಮ್ಮ ಕಾರಿನ ಸನ್‌ರೂಫ್ ಓಪನ್ ಮಾಡಿ ನಿಂತು ಮೆರವಣಿಗೆ ಹೊರಟಿದ್ದರು. ಈ ವೇಳೆ ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ಜೆಡಿಎಸ್ ಕಾರ್ಯಕರ್ತರಿಗೆ ತಿರುಗೇಟು ನೀಡಲು ಮೀಸೆ ತಿರುವಿ, ತೋಳು ತಟ್ಟಿ ಸವಾಲು ಹಾಕಿದ್ದರು. ಇದರಿಂದ ತೀವ್ರ ರೊಚ್ಚಿಗೆದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕರ ಮೇಲೆ ನೇರವಾಗಿ ಚಪ್ಪಲಿ ಎಸೆದಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದಲ್ಲೇ ಕೆಲವರನ್ನು ವಶಕ್ಕೆ ಪಡೆದಿದ್ದರು. ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಠಾಣೆಯ ಪಿಎಸ್‌ಐ ಅಮರ್ ಸ್ವಯಂಪ್ರೇರಿತ (Suo Moto) ಎಫ್‌ಐಆರ್ ದಾಖಲಿಸಿದ್ದರು. ಶಾಸಕರ ಮೇಲೆ ಚಪ್ಪಲಿ ಎಸೆದು, ಅವಾಚ್ಯ ಪದಗಳಿಂದ ನಿಂದಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಾಲ್ವರನ್ನು ಬಂಧಿಸಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:33 pm, Tue, 7 July 26