ಅಮಿತ್ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ವಂಚನೆ: ಸುಜಯೇಂದ್ರ ವಿರುದ್ಧ ಜಾರ್ಜ್​​ಶೀಟ್​​ ಸಲ್ಲಿಕೆ

ಅಮಿತ್ ಶಾ ವಿಶೇಷಾಧಿಕಾರಿ ಎಂದು ನಂಬಿಸಿ ಜಮ್ಮು-ಕಾಶ್ಮೀರ ಮೂಲದ ವೈದ್ಯನಿಗೆ 2.70 ಕೋಟಿ ರೂ. ವಂಚಿಸಿದ್ದ ಆರೋಪಿ ಸುಜಯೇಂದ್ರ ವಿರುದ್ಧ ಬೆಂಗಳೂರು ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಏರ್‌ಪೋರ್ಟ್ ಬಳಿ ಜಮೀನು ಕೊಡಿಸುವುದಾಗಿ ಮೋಸ ಮಾಡಿದ್ದ ಸುಜಯೇಂದ್ರ, ರಾಜ್ಯಪಾಲರ ನಕಲಿ ಸಹಿ ಬಳಸಿ ಮತ್ತೊಂದು ಹಗರಣದಲ್ಲೂ ಭಾಗಿಯಾಗಿದ್ದ. ಆ ಸಂಬಂಧವೂ ಈತನ ವಿರುದ್ಧ FIR ದಾಖಲಾಗಿತ್ತು.

ಅಮಿತ್ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ವಂಚನೆ: ಸುಜಯೇಂದ್ರ ವಿರುದ್ಧ ಜಾರ್ಜ್​​ಶೀಟ್​​ ಸಲ್ಲಿಕೆ
ಆರೋಪಿ ಸುಜಯೇಂದ್ರ
Image Credit source: Tv9 Kannada
Edited By:

Updated on: Apr 29, 2026 | 11:54 AM

ಬೆಂಗಳೂರು, ಏಪ್ರಿಲ್​​ 29: ಅಮಿತ್ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ಜಮ್ಮು-ಕಾಶ್ಮೀರ ಮೂಲದ ವೈದ್ಯನಿಗೆ 2.70 ಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿ ಸುಜಯೇಂದ್ರ ವಿರುದ್ಧ ಪೊಲೀಸರು ಬೆಂಗಳೂರಿನ 24ನೇ ಎಸಿಜೆಎಂ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಯದುಗಿರಿ ಯತಿರಾಜ ಮಠದ ಸ್ವಾಮೀಜಿ ಆತ್ಮೀಯತೆ ಗಳಿಸಿದ್ದ ಆರೋಪಿ, ಮಠಕ್ಕೆ ಧನಸಹಾಯ ಮಾಡಿಕೊಂಡು ಹತ್ತಿರವಾಗಿದ್ದ. ಬಳಿಕ ದೇಶಾದ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅಲ್ಲಿ ರಾಜಕಾರಣಿಗಳ ಜೊತೆಗಿನ ಫೋಟೋ ಇಟ್ಟುಕೊಂಡು ವಂಚನೆಗೆ ಇಳಿದಿದ್ದ. 2023ರಲ್ಲಿ ಏರ್​ಪೋರ್ಟ್​ ಬಳಿ ಜಮೀನು ಕೊಡಿಸುವುದಾಗಿ ವಂಚನೆ ಪ್ರಕರಣ ಸಂಬಂಧ ಆರೋಪಿ‌ ವಿರುದ್ಧ ವಿಜಯನಗರ ಠಾಣೆಯಲ್ಲಿ‌ ಎಫ್​ಐಆರ್ ದಾಖಲಾಗಿತ್ತು.

ವೈದ್ಯರಾಗಿರುವ ಡಾ.ರಾಜಾ ಲಂಗೇರ್‌ ಕೂಡ ಮಠದ ಭಕ್ತರಾಗಿದ್ದು, ಇದೇ ಮಠದಲ್ಲಿ ಅವರಿಗೆ ಆರೋಪಿ ಸುಜಯೇಂದ್ರನ ಪರಿಚಯವಾಗಿತ್ತು. ಗೃಹ ಸಚಿವ ಅಮಿತ್‌ ಶಾ ಅವರ ವಿಶೇಷ ಕರ್ತವ್ಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಈ ನಡುವೆ ಬೆಂಗಳೂರಿನ ಏರ್​​ಪೋರ್ಟ್​​ ಬಳಿ ಮಠಕ್ಕೆ ಸೇರಿರುವ ಜಮೀನಿದ್ದು, ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಅಲ್ಲದೆ ಸ್ವಾಮೀಜಿ ಕೂಡ ತನ್ನ ಮಾತಿಗೆ ಒಪ್ಪುತ್ತಾರೆ ಎಂದು ಬುರುಡೆ ಬಿಟ್ಟಿದ್ದ. ಈತನ ಮೋಸ ಅರಿಯದ ವೈದ್ಯ ಡಾ.ರಾಜಾ ಲಂಗೇರ್‌ ಒಟ್ಟು 2.70 ಕೋಟಿ ರೂಪಾಯಿಗಳನ್ನು ಆರೋಪಿಗೆ ನೀಡಿದ್ದರು. ಆದರೆ ಸುಜಯೇಂದ್ರ ಹೇಳಿದಂತೆ ಜಮೀನು ಕೊಡಿಸದಾಗ ಅನುಮಾನಗೊಂಡು ಆತನ ಬಗ್ಗೆ ವಿಚಾರಿಸಿದಾದ ನಿಜ ಬಣ್ಣ ಬಯಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನ ಡಯಾಗ್ನೋಸ್ಟಿಕ್ ಲ್ಯಾಬ್‌ನಲ್ಲಿ ಮಹಿಳೆಗೆ ಕಿರುಕುಳ, ಜೀವ ಬೆದರಿಕೆ

ಇದೇ ಸುಜಯೇಂದ್ರನ ವಿರುದ್ಧ ರಾಜ್ಯಪಾಲರ ನಕಲಿ ಸಹಿ ಮತ್ತು ಲೋಕಭವನದ ಅಧಿಕೃತ ಲೆಟರ್ ಹೆಡ್ ಅನ್ನು ಬಳಸಿಕೊಂಡು ವಂಚನೆ ಎಸಗಿರುವ ಆರೋಪವೂ ಕೇಳಿಬಂದಿತ್ತು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. 2025ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದಿದ್ದ ಸುಜಯೇಂದ್ರ, ರಾಜ್ಯಪಾಲರೇ ಶಿಫಾರಸು ಮಾಡಿದ್ದಾರೆ ಎಂದು ನಂಬಿಸಿ ಒಬ್ಬ ವಿದ್ಯಾರ್ಥಿಗೆ ಸೀಟ್ ಮಂಜೂರು ಮಾಡುವಂತೆ ಸೂಚಿಸಿದ್ದ ಎಂಬ ಆರೋಪ ಕೇಳಿಬಂದಿತ್ತು. ಈತನ ಮನೆಯ ಮೇಲೆ ದಾಳಿ ನಡೆಸಿದಾಗ ಕೇಂದ್ರ ಗೃಹ ಸಚಿವಾಲಯ ಮತ್ತು ಲೋಕಭವನದ ಹೆಸರಿನ ಹಲವು ನಕಲಿ ಲೆಟರ್ ಹೆಡ್‌ಗಳು ಮತ್ತು ನಕಲಿ ಸೀಲುಗಳು ಪತ್ತೆಯಾಗಿದ್ದ ಕಾರಣ ಹಗರಣದ ವ್ಯಾಪ್ತಿ ದೊಡ್ಡದಿದೆ ಎಂಬ ಅನುಮಾನ ವ್ಯಕ್ತವಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us