ಚಿತ್ರದುರ್ಗ: ಮುರುಘಾಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ಜಿಲ್ಲಾ ನ್ಯಾಯಾಧೀಶರ ನೇಮಕ, ಕರ್ನಾಟಕ ಹೈಕೋರ್ಟ್ ಆದೇಶ
ಚಿತ್ರದುರ್ಗದ ಮುರುಘಾ ಮಠದ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಆದರೆ ಇದನ್ನು ಕೋರ್ಟ್ ರದ್ದುಗೊಳಿಸಿತ್ತು.
ಬೆಂಗಳೂರು: ಮುರುಘಾಮಠಕ್ಕೆ (Murugha Mutt) ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಪ್ರಧಾನಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡಿ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಮುರುಘಾಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಆದರೆ ಈ ನೇಮಕವನ್ನು ಏಕಸದಸ್ಯ ಪೀಠ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅದರಂತೆ ಜುಲೈ 18 ರಂದು ಮೇಲ್ಮನವಿ ವಿಚಾರಣೆಗೆ ನಿರ್ಧಾರ ಮಾಡಿದ ಸಿಜೆ ಪ್ರಸನ್ನ ಬಿ. ವರಾಳೆ ಮತ್ತು ನ್ಯಾ. ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠ, ಮುಂದಿನ ಆದೇಶದವರೆಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ನಾಳೆ ಬೆಳಗ್ಗೆ 11 ಗಂಟೆಗೆ ಅಧಿಕಾರ ವಹಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ.
ಮುಂದಿನ ಆದೇಶದವರೆಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನು ಜಗದ್ಗುರು ಮುರುಘರಾಜೇಂದ್ರ ಮಠ, ವಿದ್ಯಾಪೀಠದ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಮಠ, ವಿದ್ಯಾಪೀಠದ ದಿನನಿತ್ಯದ ವ್ಯವಹಾರ ನೋಡಿಕೊಳ್ಳಬೇಕು. ಯಾವುದೇ ನೀತಿ ನಿರ್ಧಾರದ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಚಿತ್ರದುರ್ಗ ಜಿಲ್ಲಾಧಿಕಾರಿಯವರು ಜಿಲ್ಲಾ ನ್ಯಾಯಾಧೀಶರಿಗೆ ಸಹಕಾರ ನೀಡಬೇಕು. ಜಿಲ್ಲಾ ನ್ಯಾಯಾಧೀಶರು ಕೋರಿದ ಸಹಕಾರ ನೀಡಬೇಕು ಎಂದು ವಿಭಾಗೀಯ ಪೀಠ ಸೂಚಿಸಿದೆ.
ಇದನ್ನೂ ಓದಿ: ಸೌದಿಯಲ್ಲಿ ಭಾರತೀಯನ ಬಂಧನ: ಕುಲಭೂಷಣ್ ಮಾದರಿಯಲ್ಲಿ ರಾಜತಾಂತ್ರಿಕ ಕ್ರಮವೇಕಿಲ್ಲ ಎಂದ ಕರ್ನಾಟಕ ಹೈಕೋರ್ಟ್
ಮಠದ ಲೆಕ್ಕಪತ್ರ ನಿರ್ವಹಣೆ, ಮಠದ ಚರ ಸ್ಥಿರಾಸ್ತಿ ಹಿತದೃಷ್ಟಿಯಿಂದ ಪಿಎಸ್ ವಸ್ತ್ರದ್ ಅವರನ್ನು ಮಠದ ಆಡಳಿತಾಧಿಕಾರಿಯನ್ನಾಗಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಆದರೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಡಿ.ಎಸ್.ಮಲ್ಲಿಕಾರ್ಜುನ ಸೇರಿದಂತೆ ಹಲವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಕಳೆದ ಹಲವು ತಿಂಗಳಿಂದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ಏಕಸದಸ್ಯರ ಪೀಠ, ಮೇ 22 ರಂದು ಅಂತಿಮವಾಗಿ ಸರ್ಕಾರದ ಆಡಳಿತಾಧಿಕಾರಿ ನೇಮಕವನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು.
ಸರ್ಕಾರಕ್ಕೆ ಮಠದ ಆಡಳಿತಾಧಿಕಾರಿ ನೇಮಿಸುವ ಅಧಿಕಾರವಿಲ್ಲ. ವೀರಶೈವ ಮುಖಂಡರು, ಸಮಾಜದ ಪ್ರಮುಖರು ಆಡಳಿತ ನಡೆಸಬಹುದು. ಇನ್ನು 4 ವಾರಗಳ ಕಾಲ ಮಾತ್ರ ಆಡಳಿತಾಧಿಕಾರಿ ಮುಂದುವರಿಯಬಹುದು. 4 ವಾರಗಳ ನಂತರ ಆಡಳಿತಾಧಿಕಾರಿಗೆ ಅಧಿಕಾರವಿಲ್ಲ ಎಂದು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ತೀರ್ಪಿನಲ್ಲಿ ತಿಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Mon, 3 July 23