ಕಾಲ್ತುಳಿತ ದುರಂತ ಪ್ರಕರಣದ ತನಿಖೆಗಿಳಿದ ಸಿಐಡಿ: ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ, ಇಂಚಿಂಚೂ ಮಾಹಿತಿ ಸಂಗ್ರಹ

ಆರ್​ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ್ದ ಕಾಲ್ತುಳಿತ ದುರಂತದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈಗಾಗಲೇ ಆರ್​ಸಿಬಿಯ ನಾಲ್ವರನ್ನು ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿಗಳ ತಲೆ ದಂಡವಾಗಿದೆ. ಇದೀಗ ಕೆಎಸ್​ಸಿಎ ಸೆಕ್ರೆಟರಿ ಸ್ಥಾನಕ್ಕೆ ಶಂಕರ್ ರಾಜೀನಾಮೆ ನೀಡಿದ್ದಾರೆ. ಕಾಲ್ತುಳಿತ ಕೇಸ್ ಬಳಿಕ ಕರ್ನಾಟಕ ಕ್ರಿಕೆಟ್ ಅಸೋಸಿಯೆಷನ್​ನಲ್ಲೂ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ.

ಕಾಲ್ತುಳಿತ ದುರಂತ ಪ್ರಕರಣದ ತನಿಖೆಗಿಳಿದ ಸಿಐಡಿ: ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ, ಇಂಚಿಂಚೂ ಮಾಹಿತಿ ಸಂಗ್ರಹ
ಕೆಎಸ್​​ಸಿಎ ಕಚೇರಿಗೆ ಭೇಟಿ ನೀಡಿದ ಸಿಐಡಿ ತಂಡ
Updated By: Ganapathi Sharma

Updated on: Jun 07, 2025 | 4:38 PM

ಬೆಂಗಳೂರು, ಜೂನ್ 7: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ (Chinnaswamy Stadium Stampede) ದುರಂತ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈಗಾಗಲೇ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಸಿಐಡಿ ತನಿಖೆಗೂ ವಹಿಸಲಾಗಿದೆ. ಸಿಐಡಿ ವಿಶೇಷ ವಿಚಾರಣಾ ದಳದ ಎಸ್​ಪಿ ಶುಭನ್ವಿತಾ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಿ, ಕಾಲ್ತುಳಿತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಗೇಟ್ ನಂಬರ್ 7, 19, 18, 16 ಮತ್ತು 21 ರ ಬಳಿ ಹೆಚ್ಚು ಅನಾಹುತ ಆಗಿತ್ತು. ಅಲ್ಲಿಗೆ ಭೇಟಿ ನೀಡಿದ ಸಿಐಡಿ ತಂಡ ಪರಿಶೀಲನೆ ನಡೆಸಿದೆ.

ಆರೋಪಿಗಳನ್ನು ಕಸ್ಟಡಿಗೆ ಕೇಳಲು ಸಿಐಡಿ ಸಿದ್ಧತೆ

ಈಗಾಗಲೇ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಸಿಐಡಿ ಅರ್ಜಿ ಸಲ್ಲಿಸಲಿದೆ. ಇಂದು ಸರ್ಕಾರಿ ರಜೆ, ನಾಳೆ ಭಾನುವಾರವಾಗಿರುವುದರಿಂದ, ಸೋಮವಾರ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಸಿಐಡಿ ತಂಡ ಸಿದ್ಧತೆ ನಡೆಸಿದೆ.

ಕಬ್ಬನ್​ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು

ಈಗಾಗಲೇ ದುರಂತ ಸಂಬಂಧ RCB, KSCA, DNA ಕಂಪನಿ ವಿರುದ್ಧ 2 FIR ದಾಖಲಾಗಿದ್ದವು. ಇದೀಗ ಕಾಲ್ತುಳಿತದಲ್ಲಿ ಗಾಯಗೊಂಡ ಬಿ.ಕಾಂ ವಿದ್ಯಾರ್ಥಿ ವೇಣು ದೂರು ಆಧರಿಸಿ ಮತ್ತೊಂದು FIR ದಾಖಲಾಗಿದೆ. RCB ಜಾಹೀರಾತು ನೋಡಿ, ಉಚಿತ ಟಿಕೆಟ್ ಎಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಂದಿದ್ದೆ, ಕ್ರೀಡಾಂಗಣದ ಗೇಟ್ ನಂ.6ರ ಬಳಿ ನೂಕುನುಗ್ಗಲು ಉಂಟಾಗಿತ್ತು, ಈ ವೇಳೆ ಬಲಗಾಲ ಮೇಲೆ ಬ್ಯಾರಿಕೇಡ್ ಬಿದ್ದಿತ್ತು. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ವೇಣು ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ
ಬೆಂಗಳೂರು ಕಾಲ್ತುಳಿತ: ಕೆಎಸ್​ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ
ವಿಧಾನಸೌಧ ಮುಂದೆ RCB ವಿಜಯೋತ್ಸವಕ್ಕೆ 19 ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ
Stampede: ಆರ್​ಸಿಬಿ ವಿರುದ್ಧ 3ನೇ ಎಫ್​ಐಆರ್​, ಹೆಚ್ಚಿದ ಸಂಕಷ್ಟ
Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ವಿರುದ್ಧ ಬಿಜೆಪಿ ದೂರು

ಏತನ್ಮಧ್ಯೆ, ಈಗಾಗಲೇ ಬಂಧಿತರಾಗಿರುವ ನಾಲ್ವರ ಪೈಕಿ RCB ಮಾರ್ಕೆಟಿಂಗ್ ಹೆಡ್​ ನಿಖಿಲ್ ಸೋಸಲೆ ವಿಚಾರಣೆ ನಡೆಸಿರುವ ಪೊಲೀಸರು, ಹಲವಾರು ಪ್ರಶ್ನೆಗಳನ್ನು ಕೇಳಿ ವಿವರ ಸಂಗ್ರಹಿಸಿದ್ದಾರೆ. ಮತ್ತೊಂದೆಡೆ, KSCA ಮ್ಯಾನೇಜ್​​ಮೆಂಟ್​​​​​ಗೆ ನೊಟೀಸ್ ಕೊಟ್ಟು ವಿಚಾರಣೆ ನಡೆಸಲು ಸಿಐಡಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೆಎಸ್​​ಸಿಎ ಅಧ್ಯಕ್ಷ ರಘುರಾಮ್ ಭಟ್, ಗೌರವಾಧ್ಯಕ್ಷ ಶ್ರೀರಾಮ್, ಕಾರ್ಯದರ್ಶಿ ಎ.ಶಂಕರ್​​​​​ಗೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಲಿದ್ದಾರೆ. ಆದರೆ ಈಗಾಗಲೇ ಕೆಎಸ್​​ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕಜೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಜತೆಗೆ ತನಿಖೆಗೆ ಸಹಕರಿಸುವಂತೆಯೂ, ಬೆಂಗಳೂರು ಬಿಟ್ಟು ಹೋಗದಂತೆಯೂ ಸೂಚನೆ ನೀಡಿದೆ. ಹೀಗಾಗಿ ಸದ್ಯ ಸಿಐಡಿ ಅಧಿಕಾರಿಗಳು ಆರ್​​ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮದ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಕೆಎಸ್​ಸಿಎ ಕಾರ್ಯದರ್ಶಿ ಸ್ಥಾನಕ್ಕೆ ಶಂಕರ್ ರಾಜಿನಾಮೆ

ಇದೆಲ್ಲದರ ನಡುವೆ ಹಠಾತ್ ಬೆಳವಣಿಗೆ ಎಂಬಂತೆ ನೈತಿಕ ಹೊಣೆಹೊತ್ತು ಕೆಎಸ್​ಸಿಎ ಕಾರ್ಯದರ್ಶಿ ಸ್ಥಾನಕ್ಕೆ ಶಂಕರ್ ಮತ್ತು ಖಜಾಂಚಿ ಜೈರಾಮ್ ರಾಜೀನಾಮೆ ಸಲ್ಲಿಸಿದ್ದಾರೆ. ಶುಕ್ರವಾರವೇ ಕೆಎಸ್​ಸಿಎ ಅಧ್ಯಕ್ಷರಿಗೆ ಇಬ್ಬರೂ ರಾಜೀನಾಮೆ ಸಲ್ಲಿಸಿದ್ದಾರೆ. ಶಂಕರ್ ಹಾಗೂ ಜೈರಾಮ್ ವಿರುದ್ಧ ಪದಾಧಿಕಾರಿಗಳು ಸಿಡಿದೆದ್ದಿದ್ದರು. ಹೈಕೋರ್ಟ್ ರಿಲೀಫ್ ಕೊಟ್ಟ ಬಳಿಕ ಕೆಎಸ್​ಸಿಎಯಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಬ್ರಿಜೇಶ್ ಪಟೇಲ್ ಖಡಕ್ ಸೂಚನೆ ಬಳಿಕ ಇಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ಕೆಎಸ್​ಸಿಎ ಜಂಟಿ ಸೆಕ್ರೆಟರಿ ಆಗಿರೋ ಶಾವೀರ್ ತಾರಪೂರ್​​​ಗೆ ಇಬ್ಬರ ಹುದ್ದೆಯ ಹೊಣೆ ಹೊರಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ