ಸಿಜೆ ರಾಯ್ಗೆ ಪ್ರಭಾವಿ ಶಾಸಕರ ಲಿಂಕ್, ಚಿತ್ರರಂಗದ ಗಣ್ಯರ ಜತೆ ನಂಟು: ಡೈರಿಯಲ್ಲಿ ಸಿಕ್ತು ಮಹತ್ವದ ಮಾಹಿತಿ!
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಇದೀಗ ಹಲವು ಮಾಹಿತಿಗಳು ಬಯಲಾಗುತ್ತಿದ್ದು, ಪೊಲೀಸ್ ತನಿಖೆ ವೇಳೆ ಅವರ ಪರ್ಸನಲ್ ಡೈರಿ ಸಿಕ್ಕಿದೆ ಎನ್ನಲಾಗಿದೆ. ಅದರಲ್ಲಿ ಅವರು ಬೆಂಗಳೂರಿನ ಪ್ರಭಾವಿ ಶಾಸಕರೊಬ್ಬರು, ಚಿತ್ರರಂಗದ ಅನೇಕರ ಜತೆ ಒಡನಾಟ ಇರುವುದನ್ನು ಉಲ್ಲೇಖಿಸಿದ್ದಾರೆ ಎಂಬುದು ತಿಳಿದುಬಂದಿದೆ. ಮತ್ತೊಂದೆಡೆ, ಖ್ಯಾತ ನಟಿಯೊಬ್ಬರ ಜತೆ ಸಿಜೆ ರಾಯ್ ಇದ್ದರೆಂಬ ಬಗ್ಗೆಯೂ ಇದೀಗ ಮತ್ತೆ ಚರ್ಚೆ ಶುರುವಾಗಿದೆ.

ಬೆಂಗಳೂರು, ಜನವರಿ 31: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ (CJ Roy) ಅವರ ಆತ್ಮಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ರಾಯ್ ಅವರ ಡೈರಿ (ದಿನಚರಿ ಪುಸ್ತಕ) ಈಗ ಪೊಲೀಸರ ತನಿಖೆಯ ಪ್ರಮುಖ ಭಾಗವಾಗಿದೆ. ಡೈರಿಯಲ್ಲಿ ಅವರು ಪ್ರಭಾವಿ ಶಾಸಕರ, ಚಿತ್ರ ರಂಗದ ಗಣ್ಯರ ಹೆಸರುಗಳನ್ನು ಉಲ್ಲೇಖಿಸಿರುವುದು ಗೊತ್ತಾಗಿದೆ.
ಸಿಜೆ ರಾಯ್ ಡೈರಿಯಲ್ಲಿ ಏನಿದೆ?
ಸಿಜೆ ರಾಯ್ ಅವರಿಗೆ ಪ್ರತಿನಿತ್ಯ ಡೈರಿ ಬರೆಯುವ ಅಭ್ಯಾಸವಿತ್ತು. ಡೈರಿಯಲ್ಲಿ ರಾಜ್ಯದ ಇಬ್ಬರು ಪ್ರಭಾವಿ ಶಾಸಕರು ಮತ್ತು ಒಬ್ಬರು ಮಾಜಿ ಸಂಸದರ ಹೆಸರು ಉಲ್ಲೇಖವಾಗಿದೆ ಎಂಬುದು ತಿಳಿದುಬಂದಿದೆ. ವಿಶೇಷವಾಗಿ ಬೆಂಗಳೂರಿನ ಪ್ರಭಾವಿ ಶಾಸಕರು ಮತ್ತು ಕೋಲಾರ ಜಿಲ್ಲೆಯ ಶಾಸಕರ ಜೊತೆಗಿನ ವ್ಯವಹಾರಿಕ ಸಂಬಂಧಗಳ ಬಗ್ಗೆ ಮಾಹಿತಿಯಿದೆ ಎನ್ನಲಾಗುತ್ತಿದೆ.
ಅಷ್ಟೇ ಅಲ್ಲದೆ, ಡೈರಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ಮಾಡೆಲ್‌ಗಳ ಹೆಸರುಗಳೂ ಉಲ್ಲೇಖವಾಗಿವೆ. ದುಬೈನಲ್ಲಿ ಅವರು ನಡೆಸುತ್ತಿದ್ದ ವ್ಯವಹಾರಗಳು ಮತ್ತು ಅಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕದ ಬಗ್ಗೆಯೂ ರಾಯ್ ಬರೆದಿದ್ದಾರೆ ಎನ್ನಲಾಗಿದೆ.
ಖ್ಯಾತ ನಟಿ ಜತೆ ಇದ್ದ ರಾಯ್?
ಈ ಘಟನೆಗೆ ಸಂಬಂಧಿಸಿದಂತೆ ಬರಹಗಾರ ಚಂದ್ರಚೂಡ್ ಅವರು ವಿಡಿಯೋ ಬಿಡುಗಡೆ ಮಾಡಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸಿಜೆ ರಾಯ್ ಅವರು ಶೂಟೌಟ್ ಮಾಡಿಕೊಳ್ಳುವಂತಹ ಪರಿಸ್ಥಿತಿ ಏನಿತ್ತು? ಅವರು ದೇಶ ಬಿಟ್ಟು ಹೋಗುವಂತಹ ಅನಿವಾರ್ಯತೆ ಎದುರಾಗಿತ್ತೇ? ದೊಡ್ಡಬಳ್ಳಾಪುರದ ರೆಸಾರ್ಟ್ ಒಂದರಲ್ಲಿ ನಡೆದ ವಿಚಾರಗಳು ಮತ್ತು ಒಬ್ಬರು ಖ್ಯಾತ ನಟಿಯ ಜೊತೆಗಿನ ಅವರ ಲಿಂಕ್ ಬಗ್ಗೆ ತನಿಖೆಯಾಗಬೇಕು. ಅವರ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ಅಕ್ರಮಗಳ ಬಗ್ಗೆಯೂ ಪೊಲೀಸ್ ತನಿಖೆ ನಡೆಯಲಿ’ ಚಕ್ರವರ್ತಿ ಚಂದ್ರಚೂಡ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಿಜೆ ರಾಯ್ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ!
ಸದ್ಯ ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಂಗಳೂರಿನ ಅಶೋಕನಗರ ಪೊಲೀಸರು ಈಗಾಗಲೇ ತನಿಖೆ ಚುರುಕುಗೊಳಿಸಿದ್ದಾರೆ. ಡಿಜಿ ಮತ್ತು ಐಜಿಪಿ ಸಲೀಂ ಅವರು ಕಮಿಷನರ್ರಿಂದ ಮಾಹಿತಿ ಪಡೆದಿದ್ದಾರೆ.