ಸಿಜೆ ರಾಯ್ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ!
CJ Roy Death: ಸಾವಿರಾರು ಕೋಟಿ ಆಸ್ತಿಯ ಒಡೆಯ, ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿಜೆ ರಾಯ್ ಐಟಿ ದಾಳಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಅವರ ಸಾವಿನ ಸುತ್ತ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ. ಐಟಿ ಕಿರುಕುಳವೇ ಸಾವಿಗೆ ಕಾರಣವೆಂದು ಸಹೋದರ ಆರೋಪಿಸಿದ್ದಾರೆ. ಸಿಜೆ ರಾಯ್ ಸಾವಿನ ಬಗ್ಗೆ ಹುಟ್ಟಿಕೊಂಡಿರುವ ಪ್ರಶ್ನೆಗಳು, ಅನುಮಾನಗಳ ದೊಡ್ಡ ಪಟ್ಟಿಯೇ ಇಲ್ಲಿದೆ.

ಬೆಂಗಳೂರು, ಜನವರಿ 31: ಸಾವಿರಾರು ಕೋಟಿ ರೂಪಾಯಿ ಆಸ್ತಿಗಳ ಒಡೆಯ ಸಿಜೆ ರಾಯ್ (CJ Roy) ಐಟಿ ದಾಳಿ (IT Raid) ನಡೆದ ಹೊತ್ತಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಅವರ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಐಟಿ ದಾಳಿಯಿಂದ ಹುಟ್ಟಿಕೊಂಡ ಭಯ ಆತ್ಮಹತ್ಯೆಗೆ ಕಾರಣ ಎಂದು ಅನುಮಾನಪಡಲಾಗಿದೆ. ಆದರೆ, ಈ ಸಾವಿನ ಹಿಂದೆ ಬೇರೆ ಕಾರಣವೂ ಇರಬಹುದು ಎನ್ನಲಾಗುತ್ತಿದೆ. ಶೂನ್ಯ ಸಾಲದ ಬ್ಯುಸಿನೆಸ್ ಮಾಡೆಲ್‌ನಿಂದ ಪ್ರಖ್ಯಾತಿ ಗಳಿಸಿದ್ದ ರಾಯ್ ಸಾವಿನ ಹಿಂದೆ ಅನುಮಾನದ ಹುತ್ತವೇ ಬೆಳೆದು ನಿಂತಿದೆ.
ಅನುಮಾನ ನಂ.1: ಐಟಿ ಟಾರ್ಚರ್‌ಗೆ ಆತ್ಮಹತ್ಯೆ?
ಸತತ ಮೂರು ತಿಂಗಳಿಂದಲೂ ಕಾನ್ಫಿಡೆಂಟ್ ಗ್ರೂಪ್ ಮೇಲೆ ಐಟಿ ಅಧಿಕಾರಿಗಳು ರೇಡ್ ನಡೆಸಿದ್ದಾರೆಂಬ ಮಾಹಿತಿ ಇದೆ. ಕಳೆದ ಡಿಸೆಂಬರ್‌ನಲ್ಲೂ ಕೇರಳದ ಕೊಚ್ಚಿ ಮತ್ತು ಬೆಂಗಳೂರಿನಲ್ಲಿ ರೇಡ್ ಮಾಡಿದ್ದರು ಎನ್ನಲಾಗಿದೆ. ಈಗ ಅದೇ ಡಿಸೆಂಬರ್ ರೇಡ್‌ನ ಮುಂದುವರಿದ ದಾಳಿ ಶುಕ್ರವಾರ ನಡೆದಿತ್ತು. ಬುಧವಾರ ಕೇರಳದ ಕೊಚ್ಚಿಯಿಂದ ಐಟಿ ಅಧಿಕಾರಿಗಳ ತಂಡ ಆಗಮಿಸಿತ್ತು. ಬುಧವಾರದಿಂದ ಪರಿಶೀಲನೆ ಬಳಿಕ ಕೆಲ ಸ್ಪಷ್ಟನೆ ಕೇಳಲು ಶುಕ್ರವಾರ ಮತ್ತೆ ಐಟಿ ತಂಡ, ಮಧ್ಯಾಹ್ನ 3ಗಂಟೆ ಸುಮಾರಿಗೆ ರಾಯ್ ಅಪಾರ್ಟ್‌ಮೆಂಟ್ ಕಚೇರಿಗೆ ಬಂದಿತ್ತು.
ಹೀಗಾಗಿ, ಐಟಿ ಅಧಿಕಾರಿಗಳ ಟಾರ್ಚರ್ ಸಹೋದರನ ಸಾವಿಗೆ ಕಾರಣ. ಐಟಿ ಅಧಿಕಾರಿ ಅಡಿಷನಲ್ ಕಮಿಷನರ್ ಕೃಷ್ಣಪ್ರಸಾದ್ ಎಂಬುವವರೇ ಸಾವಿಗೆ ಕಾರಣ ಎಂದು ರಾಯ್ ಸಹೋದರ ಬಾಬು ಸಿ ಜೋಸೆಫ್ ಆರೋಪ ಮಾಡಿದ್ದಾರೆ.
ರಾಯ್ ಸಹೋದರ ಹೇಳಿದಂತೆ ಶುಕ್ರವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ 2 ಕಾರುಗಳಲ್ಲಿ 10 ಮಂದಿ ಕೊಚ್ಚಿಯ ಐಟಿ ಅಧಿಕಾರಿಗಳ ತಂಡ ಆನೆಪಾಳ್ಯದ ಅಪಾರ್ಟ್‌ಮೆಂಟ್ ಕಚೇರಿಗೆ ಬಂದಿತ್ತು. ಆದರೆ, ಆ ವೇಳೆ ಪ್ರತ್ಯೇಕವಾಗಿ ಕೊಠಡಿಗೆ ರಾಯ್ ಹೋಗಿದ್ದೇಕೆ ಎಂಬುದೇ ಈಗ ಅನುಮಾನಕ್ಕೆ ಕಾರಣವಾಗಿದೆ.
ಅನುಮಾನ ನಂ.2: ಪ್ರತ್ಯೇಕವಾಗಿ ಕೊಠಡಿಗೆ ರಾಯ್ ಹೋಗಿದ್ದೇಕೆ?
ಐಟಿ ದಾಳಿ ವೇಳೆ ಸಾಮಾನ್ಯವಾಗಿ ಆರೋಪಿ ಮುಂದೆಯೇ ಪರಿಶೀಲನೆ ನಡೆಯುತ್ತದೆ. ಆದರೆ, ಐಟಿ ರೇಡ್ ರೇಡ್ ವೇಳೆಯೇ ರಾಯ್ ಪ್ರತ್ಯೇಕವಾಗಿ ಕೊಠಡಿಗೆ ಹೋಗಿದ್ದೇಕೆ? ಯಾವ ದಾಖಲೆ ತರಲು ಹೋದರು? ಹೋದರೂ 15 ನಿಮಿಷಗಳ ಕಾಲ ಅವರನ್ನು ಒಳಗೆ ಬಿಟ್ಟಿದ್ದೇಕೆ ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.
ಅನುಮಾನ ನಂ.3: 15 ನಿಮಿಷ ಫೋನ್ ಕಾಲ್ ಮಾಡಿದ್ರಾ?
ಐಟಿ ಅಧಿಕಾರಿಗಳ ನೋಟಿಸ್‌ಗೆ ಸಹಿ ಮಾಡಿ ಸಿಜೆ ರಾಯ್ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಇದಾದ 15 ನಿಮಿಷಗಳ ಬಳಿಕ ಕೊಠಡಿಯಿಂದ ಗುಂಡಿನ ಸದ್ದು ಕೇಳಿಸಿತ್ತು. ಈ 15 ನಿಮಿಷಗಳ ಅವಧಿಯಲ್ಲಿ ರಾಯ್ ಯಾರಿಗೋ ಫೋನ್ ಕಾಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಫೋನ್ ಕಾಲ್ ಮಾಡಿದ್ಯಾರಿಗೆ? ಆ ಸಮಯದಲ್ಲಿ ಫೋನ್ ಮಾಡಿದ್ದೇಕೆ ಎಂಬ ಅನುಮಾನ ಈಗ ದಟ್ಟವಾಗಿದೆ.
ಅನುಮಾನ ನಂ.4: ಎರಡು ತಿಂಗಳಿಂದ ಎಲ್ಲಾ ಸಿಸಿಟಿವಿ ಆಫ್!
ಕಾನ್ಫಿಡೆಂಟ್ ಗ್ರೂಪ್ ದೊಡ್ಡ ಕಂಪನಿ. ಅದರಲ್ಲೂ ನಿತ್ಯವೂ ನೂರಾರು ಜನರು ಬಂದು ಹೋಗುವ ಅಪಾರ್ಟ್‌ಮೆಂಟ್ ಕಚೇರಿ. ಸಣ್ಣ ಅಂಗಡಿಗಳಿಗೂ ಸಿಸಿ ಕ್ಯಾಮರಾ ಆ್ಯಕ್ಟಿವ್ ಇಟ್ಟುಕೊಳ್ಳುತ್ತಾರೆ. ಆದರೆ, ಇಷ್ಟು ದೊಡ್ಡ ಕಚೇರಿಯ ಸಿಸಿಟಿವಿಗಳು ಎರಡು ತಿಂಗಳಿಂದ ಆಫ್ ಆಗಿವೆ ಎನ್ನಲಾಗುತ್ತಿದೆ. ಇದಕ್ಕೆ ತಾಂತ್ರಿಕ ಕಾರಣ ಇದೆಯಾ? ಅಥವಾ ಬೇರೆಯದ್ದೇ ಕಾರಣವೇ? ಉದ್ದೇಶಪೂರ್ವಕವಾಗಿ ಆಫ್ ಮಾಡಲಾಗಿತ್ತಾ ಎಂಬ ಪ್ರಶ್ನೆ ಈಗ ಮೂಡಿದೆ.
ಅನುಮಾನ ನಂ.5: ಪೆನಾಲ್ಟಿ ಕಟ್ಟಲು ಕಷ್ಟವಾಗಿತ್ತಾ?
ಸಿಜೆ ರಾಯ್ ಐಟಿ ದಾಳಿಗೆ ಹೆದರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನವೂ ಅಚ್ಚರಿ ಮೂಡಿಸಿದೆ. ಯಾಕೆಂದರೆ ದುಬೈ, ಬೆಂಗಳೂರು ಸೇರಿದಂತೆ ಹಲವೆಡೆ ಪ್ರಾಪರ್ಟಿ ಹೊಂದಿರುವ ಸಿಜೆ ರಾಯ್ ಸಾವಿರಾರು ಕೋಟಿ ರೂ.ಗಳ ಒಡೆಯ. ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ ರಾಯ್‌ಗೆ ಒಂದು ವೇಳೆ ಐಟಿ ದಾಳಿಯಲ್ಲಿ ಲೋಪ ಕಂಡುಬಂದಿದ್ದರೂ ಪೆನಾಲ್ಟಿ ಕಟ್ಟುವುದು ಕಷ್ಟವಾಗಿರಲಿಲ್ಲ. ಕಾನೂನು ಹೋರಾಟದ ಆಪ್ಷನ್ ಕೂಡ ಇತ್ತು. ದೊಡ್ಡ ಕಂಪನಿಗಳ ಚಾರ್ಟರ್ಡ್ ಅಕೌಂಟೆಂಟ್‌ಗಳೇ ನಿಭಾಯಿಸಬಹುದಾದ, ವಕೀಲರು ನೋಡಿಕೊಳ್ಳಬಹುದಾದ ಕೇಸ್‌ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂಬ ಪ್ರಶ್ನೆ ಮೂಡಿದೆ..
ಅನುಮಾನ ನಂ.6: ಸಹೋದರನ ಜತೆ ಸಹಜವಾಗಿ ಮಾತು!
ಐಟಿ ಅಧಿಕಾರಿಗಳು ಟಾರ್ಚರ್ ಕೊಡುತ್ತಿದ್ದರು ಎಂದು ರಾಯ್ ಸಹೋದರ ಹೇಳಿದ್ದಾರೆ. ಆದರೆ, ಶುಕ್ರವಾರ ರೇಡ್‌ಗೆ ಮುನ್ನ ಬೆಳಗ್ಗೆ 11ಗಂಟೆಗೆ ಸಹೋದರ ಬಾಬುಗೆ ರಾಯ್ ಕರೆ ಮಾಡಿದ್ದರು ಎನ್ನಲಾಗಿದೆ. ಕರೆ ಮಾಡಿ, ‘ಯಾವಾಗ ಬರುತ್ತೀ’ ಎಂದು ಸಹಜವಾಗಿಯೇ ಮಾತಾಡಿದ್ದಾರೆ. ಐಟಿ ಅಧಿಕಾರಿಗಳು ಬರಬಹುದು ಎಂದು ಯಾವುದೇ ಒತ್ತಡ ಇಲ್ಲದೆ ಮಾತಾನಾಡಿದ್ದರು. ಈ ವಿಚಾರವನ್ನು ಖುದ್ದು ಬಾಬು ಜೋಸೆಫ್ ‘ಟಿವಿ9’ಗೆ ಹೇಳಿದ್ದಾರೆ.
ಇದನ್ನೂ ಓದಿ: ಯಾರು ಈ CJ ರಾಯ್? ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಜೀವನದಲ್ಲಿ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ?
ಇದಷ್ಟೇ ಅಲ್ಲ, ಜನವರಿ 26ರಂದು ಗಣರಾಜ್ಯೋತ್ಸವಕ್ಕೂ ಖುಷಿಯಿಂದಲೇ ರಾಯ್ ಪೋಸ್ಟ್ ಮಾಡಿಕೊಂಡು, ಶುಭ ಹಾರೈಸಿದ್ದಾರೆ. ಇವೆಲ್ಲವನ್ನು ನೋಡಿದರೆ 15 ನಿಮಿಷದಲ್ಲಿ ರಾಯ್‌ಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಅನಿವಾರ್ಯತೆ ಬಂದಿದ್ದೇಕೆ? ಸಾಮ್ರಾಜ್ಯ ಕಟ್ಟಿ ಬೆಳೆಸಿದ ರಾಯ್ ಅಷ್ಟರ ಮಟ್ಟಿಗೆ ಕುಸಿಯಲು ಕಾರಣವೇನು ಎಂಬುದೇ ಈಗ ನಿಗೂಢವಾಗಿದೆ. ಇದಕ್ಕೆ ಉತ್ತರಿಸಬೇಕಾದ ರಾಯ್ ಬದುಕಿಲ್ಲ. ತನಿಖೆಯಲ್ಲಷ್ಟೇ ನಿಜ ಸಂಗತಿ ಬಯಲಾಗಬೇಕಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
