ಬೆಂಗಳೂರು: ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ(State Cabinet Meeting) ನಡೆದಿದೆ. ಸಂಪುಟ ಸಭೆಯಲ್ಲಿ ನಿನ್ನೆ ನಡೆದ ಪಂಚ ರಾಜ್ಯ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲೂ ವಿಧಾನಸಭಾ ಚುನಾವಣೆ ಸಮೀಪಕ್ಕೆ ಬರ್ತಿದೆ. ಕ್ಷೇತ್ರಗಳಲ್ಲಿ ಜನರಿಗೆ ನಮ್ಮ ಕಾರ್ಯಕ್ರಮ ಮುಟ್ಟಿಸಬೇಕು. ಆಡಳಿತ ವಿರೋಧ ಅಲೆ ಮೆಟ್ಟಿನಿಂತು ಅಧಿಕಾರಕ್ಕೆ ಬರಬೇಕು. ಉತ್ತರ ಪ್ರದೇಶದಲ್ಲಿ ಆದಂತೆ ನಮ್ಮ ರಾಜ್ಯದಲ್ಲೂ ಆಗಬೇಕು. ಬಿಬಿಎಂಪಿ, ಜಿ.ಪಂ, ತಾ.ಪಂ. ಚುನಾವಣೆ ಹತ್ತಿರ ಬರುತ್ತಿವೆ. ಎಲ್ಲಾ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಇನ್ನು ಸಂಪುಟ ಸಭೆಯಲ್ಲಿ ಪ್ರಮುಖ ಯೋಜನೆಗೆ ಅನುಮೋದನೆ ನೀಡಲಾಗಿದೆ.
-ಪಿಎಂ ಕುಸುಮ ಯೋಜನೆಯಡಿ ಜಾಲಮುಕ್ತ ಸೌರಚಾಲಿತ ಕೃಷಿ ಪಂಪ್ ಸೆಟ್ ಯೋಜನೆ 30,723 ಕೋಟಿ ವೆಚ್ಚದಲ್ಲಿ ಅನುಷ್ಠಾನ ಮಾಡಲಾಗಿದೆ.
-ಕೆಪಿಸಿಎಲ್‌ಗೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯಿಂದ 2,500 ಕೋಟಿ ಸಾಲ ಪಡೆಯಲು ಸರ್ಕಾರ ಖಾತ್ರಿ ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
-ಜಿಲ್ಲಾ ಮಟ್ಟದ 3 ಆಸ್ಪತ್ರೆಗಳು, 157 ಸಮುದಾಯದ ಆರೋಗ್ಯ ಕೇಂದ್ರಗಳಲ್ಲಿ(ಇ-ಆಸ್ಪತ್ರೆ) ತಂತ್ರಾಂಶ ಅನುಷ್ಠಾನಕ್ಕೆ ತರಲು ಅಗತ್ಯವಿರುವ ICT ಸಲಕರಣೆಗಳು ಮತ್ತು 9 ಜಿಲ್ಲಾಸ್ಪತ್ರೆ, 143 ತಾಲೂಕು ಆಸ್ಪತ್ರೆಗಳಿಗೆ 701 ಕಂಪ್ಯೂಟರ್‌ಗಳನ್ನ 28.55 ಕೋಟಿ ವೆಚ್ಚದಲ್ಲಿ ಖರೀದಿಸಲು ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
-ಚಾಮರಾಜನಗರದ ಮಲೆಮಹದೇಶ್ವರ ವನ್ಯಜೀವಿ ಧಾಮವನ್ನ ಮಲೆಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಯಿತು.
-ಜಲಜೀವನ್ ಮಿಷನ್ ಅಡಿ ಕುಡಿಯುವ ನೀರಿನ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು 658 ಕೋಟಿ ವೆಚ್ಚದಲ್ಲಿ ನಲ್ಲಿ ನೀರಿನ ಸಂಪರ್ಕಕ್ಕೆ ಅಸ್ತು ಎನ್ನಲಾಗಿದೆ.41 ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸಚಿವ ಸಂಪುಟ ಅಸ್ತು. ವಿವಿಧ ಇಲಾಖೆಗಳ ಒಟ್ಟು 43 ಪ್ರಸ್ತಾವನೆಗಳಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ಮಾ.14ರಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಳ್ಳುವ ಸಿಎಂ
ಸಿಎಂ ಬಸವರಾಜ ಬೊಮ್ಮಾಯಿ ಮಾ.14ರಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 6ಕ್ಕೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸಲಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮೇಲುಕೋಟೆಯಲ್ಲಿ ಚಲುವನಾರಣಯಸ್ವಾಮಿ ದರ್ಶನ ಪಡೆದು, ವೈರಮುಡಿ ಬ್ರಹ್ಮೋತ್ಸವದಲ್ಲಿ ಭಾಗಿಯಾಗಿ ಬಳಿಕ ಬೆಳಗ್ಗೆ 11.30ಕ್ಕೆ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಮಂಡ್ಯದಿಂದ ಬಂದು ಸದನದ ಕಲಾಪಗಳಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
ಗೌರಿಬಿದನೂರು ತಾಲೂಕಿನ 41 ಗ್ರಾಮಗಳ ಕುಡಿಯುವ ನೀರು ಯೋಜನೆಗೆ ಅಸ್ತು
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ (Gauribidanur) 41 ಗ್ರಾಮಗಳಿಗೆ ನೀರೊದಗಿಸುವ ಯೋಜನೆಗೆ ಅನುಮೋದನೆ ದೊರೆತಿದೆ. ಕೇಂದ್ರ ಸರ್ಕಾರ ಪ್ರತಿ ಮನೆಗೆ ಕೊಳಾಯಿ ನೀರಿನ ಸೌಲಭ್ಯ (Drinking Water Project) ಕಲ್ಪಿಸುವ ಉದ್ದೇಶದೊಂದಿಗೆ, ಜಲ ಜೀವನ್ ಮಿಷನ್ ಜಾರಿ (Jal Jeevan Mission) ಮಾಡಿದೆ. ಈ ಯೋಜನೆಯಡಿ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹಾಗೂ ಇತರೆ 41 ಗ್ರಾಮಗಳಿಗೆ 55 ಎಲ್‍ಪಿಸಿಡಿ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೂ ತ್ವರಿತವಾಗಿ ಅನುಮೋದನೆ ನೀಡಿ ಗ್ರಾಮೀಣ ಭಾಗದ ಜನರಿಗೆ ಜೀವಜಲದ ಭರವಸೆಯನ್ನು ಖಾತರಿಪಡಿಸಲಾಗಿದೆ.
ದಂಡಿಗಾನಹಳ್ಳಿ ಗ್ರಾಮದ ಬಳಿ ಇರುವ ದಂಡಿಗಾನಹಳ್ಳಿ ಜಲಾಶಯದಿಂದ ನೀರು:
ಮಂಚೇನಹಳ್ಳಿ ಹಾಗೂ ಇತರೆ 41 ಗ್ರಾಮಗಳಲ್ಲಿ 10,289 ಮನೆಗಳಿವೆ. 2011 ರ ಜನಗಣತಿ ಪ್ರಕಾರ ಈ ಭಾಗದ ಜನಸಂಖ್ಯೆ 40,516. 2023 ರ ವೇಳೆಗೆ 40,988 ಹಾಗೂ 2053 ರ ವೇಳೆಗೆ ಈ ಜನಸಂಖ್ಯೆ 42,302 ಆಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈ ಗ್ರಾಮಗಳ ಜನರು ಕೊಳವೆಬಾವಿ ಹಾಗೂ ಇತರೆ ಸಣ್ಣ ಜಲ ಮೂಲಗಳನ್ನು ಅವಲಂಬಿಸಿದ್ದಾರೆ. ಇದರಿಂದಾಗಿ ಪ್ರತಿ ದಿನ ದೂರದ ಪ್ರದೇಶಗಳಿಗೆ ನಡೆದು ನೀರನ್ನು ಹೊತ್ತು ತರುವ ಪರಿಸ್ಥಿತಿ ಇದೆ. ಈ ಸಂಕಷ್ಟವನ್ನು ತಪ್ಪಿಸಿ ಜನರ ಮನೆಗಳಿಗೆ ನೇರವಾಗಿ ಕೊಳಾಯಿ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ಈ ಭಾಗದಲ್ಲಿ 0.036 ಟಿಎಂಸಿ ನೀರಿನ ಬೇಡಿಕೆ ಇದೆ.
ಈ ಯೋಜನೆಯ ಹಂತ-1 ರಲ್ಲಿ, ದಂಡಿಗಾನಹಳ್ಳಿ ಕೆರೆಯಿಂದ 55 ಎಲ್‍ಪಿಸಿಡಿ ನೀರನ್ನು ಸರಬರಾಜು ಮಾಡಲಾಗುತ್ತದೆ. ದಿನಕ್ಕೆ 16 ಗಂಟೆ ನೀರು ಪಂಪ್ ಮಾಡುವ ಸಾಮರ್ಥ್ಯದ ಮೂಲಸೌಕರ್ಯವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಒಟ್ಟು 44 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಯಾಗಲಿದೆ. ರಾಜ್ಯ ಸರ್ಕಾರದಿಂದ 26.48 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದಿಂದ 17.52 ಕೋಟಿ ರೂ. ಅನುದಾನ ದೊರೆಯಲಿದೆ. ಹಂತ-2 ರಲ್ಲಿ 23 ಗ್ರಾಮಗಳಿಗೆ ನೀರು ಪೂರೈಸಲು ಉದ್ದೇಶಿಸಲಾಗಿದೆ.
ದಂಡಿಗಾನಹಳ್ಳಿ ಕೆರೆ ಗರಿಷ್ಠ 90.36 ಎಂಸಿಫೀಟ್ ಸಾಮರ್ಥ್ಯ ಹೊಂದಿದ್ದು, ಇಲ್ಲಿಂದ ಗ್ರಾಮಗಳಿಗೆ 2.91 ಎಂಎಲ್‍ಡಿ ನೀರು ಪೂರೈಸಲಾಗುತ್ತದೆ. ಯೋಜನೆಗೆ ಬೇಕಾದ ಮೂಲಸೌಕರ್ಯದ ಕಾಮಗಾರಿಗೆ 15 ತಿಂಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಖಾತೆ ಸಚಿವ ಡಾ. ಕೆ. ಸುಧಾಕರ್ ಅವರು (Minister Dr K Sudhakar) ತಿಳಿಸಿದರು.
ಇದನ್ನೂ ಓದಿ: ಗ್ರ್ಯಾಂಡ್ ಲುಕ್ನಲ್ಲಿ ಬಂದ ವಧುವನ್ನು ನೋಡಿ ಭಾವುಕನಾದ ವರ : ವಿಡಿಯೋ ವೈರಲ್
Published On - 5:47 pm, Fri, 11 March 22