Putani Express: ಪುಟಾಣಿ ರೈಲಿಗೆ ಸಿಎಂ ಬೊಮ್ಮಾಯಿ ಚಾಲನೆ: ಮಕ್ಕಳ ಮುಖದಲ್ಲಿ ಮೂಡಿದ ಸಂತಸ
Cubbon Park: 2019ರಿಂದ ತಾಂತ್ರಿಕ ಕಾರಣದಿಂದ ನಿಂತಿದ್ದ ಪುಟಾಣಿ ರೈಲನ್ನು ರಿಪೇರಿ ಮಾಡಲಾಗಿದ್ದು, 5 ವರ್ಷಗಳ ನಂತರ ಮತ್ತೆ ಕಾರ್ಯಾರಂಭಿಸಿದೆ. ನಿನ್ನೆ (ಮಾ.25) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗರ ಅಚ್ಚುಮೆಚ್ಚಿನ ತಾಣ ಕಬ್ಬನ್ ಪಾರ್ಕ್ (Cubbon Park). ಪ್ರೇಮಿಗಳ ಹಾಟ್ ಸ್ಪಾಟ್. ಈಗ ಬಾಲಕರಿಗೂ ಪ್ರಿಯವಾದ ತಾಣವಾಗಿದೆ. ಹೌದು ಮಕ್ಕಳು ಆಡವಾಡಲೆಂದೇ ಬಾಲಭವನವನ್ನು ನವೀಕರಣ ಮಾಡಲಾಗಿದೆ. ಈ ಬಾಲಭವನದಲ್ಲಿ ಮಕ್ಕಳು ಆಟವಾಡಲು ಪುಟಾಣಿ ರೈಲು (Putani Express) ಮತ್ತೆ ಕಾರ್ಯಾರಂಭ ಮಾಡಿದೆ. 2019ರಿಂದ ತಾಂತ್ರಿಕ ಕಾರಣದಿಂದ ನಿಂತಿದ್ದ ಪುಟಾಣಿ ರೈಲನ್ನು ರಿಪೇರಿ ಮಾಡಲಾಗಿದ್ದು, 5 ವರ್ಷಗಳ ನಂತರ ಮತ್ತೆ ಸಂಚಾರ ಆರಂಭಿಸಿದೆ. ನಿನ್ನೆ (ಮಾ.25) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (CM Basavaraj Bommai) ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.
2019ರಲ್ಲಿ ಹಳಿಗಳಿಗೆ ಹಾನಿಯಾದ ಕಾರಣ ಪುಟಾಣಿ ರೈಲು ಸವಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಪುಟಾಣಿ ರೈಲನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನವೀಕರಿಸಿದೆ. ನಿನ್ನೆಯಿಂದ ಕಾರ್ಯಾರಂಭ ಮಾಡಿದ ಪುಟಾಣಿ ರೈಲಿನಲ್ಲಿ ಆಟವಾಡಲು ಅನೇಕ ಪುಟಾಣಿಗಳು ಬರುತ್ತಿದ್ದಾರೆ. ವಾರಾಂತ್ಯವಾದ ಹಿನ್ನೆಲೆ ಕುಟುಂಬ ಸಮೇತ ಜನರು ಆಗಮಿಸಿದ್ದು, ಮಕ್ಕಳನ್ನು ಪುಟಾಣಿ ರೈಲಿನಲ್ಲಿ ಕೂಡಿಸಿ ಆಟವಾಡಿಸುತ್ತಿದ್ದಾರೆ. ಪುಟಾಣಿ ರೈಲು ನಗರವಾಸಿಗಳನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ @BLRSmartCity ವತಿಯಿಂದ ನವೀಕರಣಗೊಂಡ ನೂತನ ಬಾಲಭವನವನ್ನು @CMofKarnataka ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ BenSCL ಎಂಡಿ ಶ್ರೀ ಕೆ ಶ್ರೀನಿವಾಸ್ ಅವರು ಉಪಸ್ಥಿತರಿದ್ದರು@CMofKarnataka @BLRSmartCity @SmartCities_HUA @Secretary_MoHUA pic.twitter.com/Vu9QithNYR
— Bengaluru Smart City Limited (@BLRSmartCity) March 25, 2023
ಇದನ್ನೂ ಓದಿ: ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಯ ಝಲಕ್ ಇಲ್ಲಿದೆ ನೋಡಿ
ರಾಮಕೃಷ್ಣ ಹೆಗಡೆ ಪತ್ನಿ ಶಕುಂತಳಾ ಹೆಗಡೆ ಉದ್ಘಾಟಿಸಿದ ಪುಟಾಣಿ ರೈಲು
ಪುಟಾಣಿ ಎಕ್ಸ್ಪ್ರೆಸ್ನ್ನು 1968ರಲ್ಲಿ ಅಂದಿನ ಸಚಿವ ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಳಾ ಹೆಗಡೆ ಅವರು ಉದ್ಘಾಟಿಸಿದ್ದರು. ಜೈವಿಕ ಇಂಧನದಲ್ಲಿ ಚಲಿಸುವ ಈ ಪುಟಾಣಿ ರೈಲು, ಚಿಕ್ಕ ಇಂಜಿನ್ ಇರುವ ಐದು ತೆರೆದ ಬೋಗಿಗಳನ್ನು ಹೊಂದಿದ್ದು, 900 ಮೀಟರ್ ಉದ್ದದ ಟ್ರ್ಯಾಕ್ ಇದೆ. ಮಕ್ಕಳು ಮತ್ತು ವಯಸ್ಕರಿಗೆ ವಿಶೇಷವಾಗಿದೆ. ಈ ಪುಟಾಣಿ ಎಕ್ಸಪ್ರೆಸ್ ಹಳೆಯ ಬೆಂಗಳೂರಿನ ಒಂದು ಭಾಗವಾಗಿತ್ತು. ಇತರೆ ರಾಜ್ಯಗಳಿಂದಲೂ ಜನರು ಪುಟಾಣಿ ರೈಲು ಸವಾರಿ ಮಾಡಲು ಬರುತ್ತಿದ್ದರು. ಯಾವಾಗ ಬಂದರೂ, ಜವಾಹರ್ ಬಾಲಭವನದಲ್ಲಿ ಸರತಿ ಸಾಲು ಕಾಣಬೇಕಿತ್ತು. ಸದ್ಯ ಪುಟಾಣಿ ಎಕ್ಸ್‌ಪ್ರೆಸ್ ಮತ್ತೆ ಆರಂಭವಾಗುತ್ತಿರುವುದು ಮಕ್ಕಳಲ್ಲಿ ಖುಷಿ ತಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Sun, 26 March 23