ಸಿಎಂ ಬದಲಾವಣೆ ಗೊಂದಲದ ಮಧ್ಯೆಯೇ ಸಂಪುಟ ಸಭೆ ಕರೆದ ಸಿಎಂ ಬಿಎಸ್‌ ಯಡಿಯೂರಪ್ಪ

ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ಇಂದು ಸಂಪುಟ ಸಭೆ ಕರೆಯಲಾಗಿದೆ. ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಿಗದಿ ಮಾಡಲಾಗಿದೆ. ತಮ್ಮ ಮುಂದಿನ ನಡೆ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸುವ ಸಾಧ್ಯತೆ ಇದೆ.

ಸಿಎಂ ಬದಲಾವಣೆ ಗೊಂದಲದ ಮಧ್ಯೆಯೇ ಸಂಪುಟ ಸಭೆ ಕರೆದ ಸಿಎಂ ಬಿಎಸ್‌ ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು:ಸಿಎಂ ಬಿಎಸ್ ಯಡಿಯೂರಪ್ಪ ಕಳೆದ ಶುಕ್ರವಾರ ದೆಹಲಿಗೆ ಹಾರಿದ ಬಳಿಕ.. ಬಿಜೆಪಿಯಲ್ಲಿನ ಸಿಎಂ ಬದಲಾವಣೆ ಬಡಿದಾಟ ಮುಕ್ತಾಯವಾಯ್ತು ಅಂತಲೇ ಎಲ್ಲರೂ ಭಾವಿಸಿದ್ರು. ಅದ್ರಲ್ಲೂ.. ಪ್ರಧಾನಿ ಮೋದಿ ಜೊತೆಗೆ ಸಿಎಂ ಬಿಎಸ್ವೈ ನಗುಮುಖದೊಂದಿಗೆ ನೀಡಿದ್ದ ಪೋಸ್.. ಜೆ.ಪಿ.ನಡ್ಡಾ ಸುಲಭವಾಗಿ ಸಿಕ್ಕಿದ್ದು. ಬೆಂಗಳೂರಿಗೆ ವಾಪಸ್ ಆಗ್ತಿದ್ದ ಬಿಎಸ್ವೈರನ್ನ ಗೃಹ ಸಚಿವ ಅಮಿತ್ ಶಾ ಅರ್ಧ ದಾರಿಯಿಂದ ವಾಪಸ್ ಕರೆಸಿಕೊಂಡು ಮಾತನಾಡಿಸಿದ್ದರಿಂದ.. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಪರ ನಿಂತಿದೆ. ಅವರ ಕುರ್ಚಿಯನ್ನ ಯಾರೂ ಅಲುಗಾಡಿಸಲು ಸಾಧ್ಯವೇ ಇಲ್ಲ ಅಂದುಕೊಂಡಿದ್ರು.

ಆದ್ರೆ, ಯಡಿಯೂರಪ್ಪ ಬೆಂಗಳೂರಿಗೆ ಬಂದ ಬಳಿಕ ಆರಿ ಹೋಗಿದೆ ಅಂತಾ ತಿಳಿದುಕೊಂಡಿದ್ದ ಬದಲಾವಣೆ ಬೆಂಕಿ ಧಗಧಗ ಹೊತ್ತಿ ಉರೀತಿದೆ. ಬೆಂಗಳೂರಿಗೆ ಬಂದ ಬಳಿಕ ಸಿಎಂ ಮೌನಕ್ಕೆ ಶರಣಾಗಿದ್ದು ಸಿಎಂ ಬದಲಾವಣೆ ಇಲ್ಲ ಅಂತಾ ಹೇಳುತ್ತಲೇ ಒಳಗೊಳಗೆ ರೂಪಿಸಿದ ರಣತಂತ್ರಗಳು ಬೆಂಕಿ ಹೊತ್ತಿ ಉರಿಯಲು ತುಪ್ಪ ಸುರಿದಿದ್ವು. ದಿನದಿಂದ ದಿನಕ್ಕೆ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಲೇ ಇವೆ. ನಾಯಕತ್ವದ ಬದಲಾವಣೆಯ ಕಾವು ಹೆಚ್ಚಾಗುತ್ತಲೇ ಇದೆ.

ಇದೆಲ್ಲದರ ನಡುವೆಯೇ ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ಇಂದು ಸಂಪುಟ ಸಭೆ ಕರೆಯಲಾಗಿದೆ. ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಿಗದಿ ಮಾಡಲಾಗಿದೆ. ತಮ್ಮ ಮುಂದಿನ ನಡೆ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸುವ ಸಾಧ್ಯತೆ ಇದೆ. ದೆಹಲಿಯಿಂದ ವಾಪಸ್ ಬಂದ ಮೇಲೆ ಎಲ್ಲ ಸಚಿವರನ್ನು ಏಕಕಾಲಕ್ಕೆ ಸಿಎಂ ಭೇಟಿ ಮಾಡಿರಲಿಲ್ಲ. ಹೀಗಾಗಿ ಇಂದು ನಡೆಯುವ ಸಂಪುಟ ಸಭೆ ಸಿಎಂಗೆ ಅತ್ಯಂತ ಮಹತ್ವದ್ದಾಗಿದೆ.

ಜೊತೆಗೆ ಸಭೆಯಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ ನೇಮಕ, ಇತರೆ ಇಲಾಖೆ ಅಧಿಕಾರಿಗಳನ್ನು ನೇಮಿಸುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಅಡಿನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ ಬಗ್ಗೆ, ನಗರ, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ವಸತಿ ಇಲಾಖೆ ಮೂಲಕ 6 ಲಕ್ಷ ಮನೆಗಳ ನಿರ್ಮಾಣ, ರಾಜ್ಯ ನಾಗರಿಕ ಸೇವಾ ನಿಯಮಗಳ ವಿಧೇಯಕ ತಿದ್ದುಪಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇವಾ ನಿಯಮ ವಿಧೇಯಕ ತಿದ್ದುಪಡಿ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಹಾಗೂ ಕೃಷಿ ವಿವಿಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರ ಅಳವಡಿಕೆ, ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಕೇಂದ್ರ ಸ್ಥಾಪನೆ? ಕುರಿತು ಚರ್ಚಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ರಾಜಕೀಯ ಬೆಳವಣಿಗೆ ಆಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗೆ ಯಾರೂ ಮುಂದಾಗಬಾರದು: ಬಿಎಸ್ ಯಡಿಯೂರಪ್ಪ ಮನವಿ