ರಾಜು ಕಾಗೆ NWKRTC ಅಧ್ಯಕ್ಷ ಸ್ಥಾನ ಭದ್ರ: AICC ಪಟ್ಟಿಗೇ ಸಿಎಂ ಸರ್ಜರಿ
ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಅಧಿಕೃತ ಮುದ್ರೆ ಹಾಕಿದ್ದಾರೆ. ಎಐಸಿಸಿ ನೀಡಿದ್ದ ಪಟ್ಟಿಗೆ ತಮ್ಮದೇ ಆದ ಸರ್ಜರಿಯನ್ನ ಮುಖ್ಯಮಂತ್ರಿಗಳು ಮಾಡಿದ್ದು, ಹೈಕಮಾಂಡ್ ಪಟ್ಟಿಯಲ್ಲಿ ಹೆಸರಿರದ ಇಬ್ಬರಿಗೆ ಜವಾಬ್ದಾರಿ ನೀಡಿದ್ದಾರೆ. NWKRTC ಅಧ್ಯಕ್ಷರಾಗಿ ರಾಜು ಕಾಗೆಯವರನ್ನ ಮುಂದುವರಿಸಿದ್ದು, ಅರುಣ್ ಕುಮಾರ್ ಪಾಟೀಲ್ ರನ್ನ KKRTC ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 26: ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತ ಮುದ್ರೆ ಹಾಕುವ ಮೂಲಕ ಎಲ್ಲ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ತೆರೆ ಎಳೆದಿದ್ದಾರೆ. ಎಐಸಿಸಿ ಪಟ್ಟಿಯಲ್ಲಾಗಿದ್ದ ಗೊಂದಲವನ್ನ ಸಿಎಂ ಸರಿಪಡಿಸಿದ್ದು, NWKRTC ಅಧ್ಯಕ್ಷರಾಗಿ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರನ್ನೇ ಮುಂದುವರಿಸಲಾಗಿದೆ. KKRTC ಅಧ್ಯಕ್ಷರಾಗಿ ಅರುಣ್ ಕುಮಾರ್ ಪಾಟೀಲ್ ರನ್ನ ನೇಮಕ ಮಾಡಲಾಗಿದೆ.
AICC ನೀಡಿದ್ದ ಪಟ್ಟಿಗೆ ಸಿಎಂ ಸರ್ಜರಿ
AICC ನೀಡಿದ್ದ ಪಟ್ಟಿ ಪ್ರಕಾರ ನೀಲಕಂಠ ಮುಳಗೆಗೆ ಹಂಚಿಕೆಯಾಗಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಗಮದ ಅಧ್ಯಕ್ಷ ಸ್ಥಾನವನ್ನು ಅರುಣ್ ಕುಮಾರ್ ಪಾಟೀಲ್ ಗೆ ನೀಡಲಾಗಿದೆ. ಮೈಸೂರು ಪೇಂಟ್ಸ್, ವಾರ್ನಿಶ್ ಲಿಮಿಟೆಡ್ ನಿಗಮಕ್ಕೆ ಹೆಚ್.ಡಿ ಗಣೇಶ್ ಮತ್ತು BMTC ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯರನ್ನ ನೇಮಿಸಲಾಗಿದೆ. AICC ಪಟ್ಟಿಯಲ್ಲಿ ಹೆಚ್.ಡಿ. ಗಣೇಶ್ ಮತ್ತು ನಿಕೇತ್ ರಾಜ್ ಇಬ್ಬರ ಹೆಸರು ಇಲ್ಲದಿದ್ದರೂ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಆ ಮೂಲಕ ಎಐಸಿಸಿ ಪಟ್ಟಿಗೆ ಸಿಎಂ ಸಿದ್ದರಾಮಯ್ಯ ತಮ್ಮದೇ ಸರ್ಜರಿ ಮಾಡಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಇಲಾಖೆಗಳಿಗೆ ಪಟ್ಟಿ ರವಾನೆಯಾಗಿದೆ.
ಇದನ್ನೂ ಓದಿ: ಸಿಎಂ ಜಾತಿಗಣತಿ ಸಭೆ:ಈವರೆಗೆ ಎಷ್ಟು ಸಮೀಕ್ಷೆಯಾಗಿದೆ? ಒಟ್ಟು ಎಷ್ಟು ಆಗ್ಬೇಕು? ಇಲ್ಲಿದೆ ವಿವರ
ಕೊಟ್ಟ ಮಾತು ಉಳಿಸಿಕೊಂಡ ಸಿಎಂ
ಎಐಸಿಸಿ ಕಳಿಸಿದ್ದ ಪಟ್ಟಿಯಲ್ಲಿ NWKRTC ಅಧ್ಯಕ್ಷರಾಗಿ ಅರುಣ್ ಪಾಟೀಲ್ ಹೆಸರು ಉಲ್ಲೇಖ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಭೇಟಿಯಾಗಿದ್ದರು. ನಿಮ್ಮನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟಿಲ್ಲ ಎಂದು ಈ ವೇಳೆ ತಿಳಿಸಿದ್ದ ಮುಖ್ಯಮಂತ್ರಿಗಳು, ಪ್ರಿಂಟ್ ಮಿಸ್ಟೇಕ್ ಆಗಿದೆ. ಅದನ್ನು ಹೊರತುಪಡಿಸಿ ಯಾವ ಸಮಸ್ಯೆ ಇಲ್ಲ. ನಿಮ್ಮನ್ನೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸೋದಾಗಿ ರಾಜು ಕಾಗೆ ಅವರಿಗೆ ತಿಳಿಸಿದ್ದರು. ಕೊಟ್ಟ ಮಾತಿನಂತೆಯೇ ರಾಜು ಕಾಗೆ ಅವರನ್ನ NWKRTC ಅಧ್ಯಕ್ಷ ಸ್ಥಾನದಲ್ಲಿ ಮಂದುವರಿಸಲಾಗಿದೆ.
ಎಐಸಿಸಿ ರವಾನಿಸಿದ್ದ ಪಟ್ಟಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಅರುಣ್ ಪಾಟೀಲ್ ಹೆಸರನ್ನು ಉಲ್ಲೇಖಿಸಲಾಗಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸಿಎಂಗೆ ರವಾನಿಸಿದ್ದ ಪಟ್ಟಿಯಲ್ಲಿಯೇ ಮಾಹಿತಿ ಹೀಗಿದ್ದ ಕಾರಣ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರನ್ನ NWKRTC ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂಬ ಸುದ್ದಿ ಹರಿದಾಡಿ ಗೊಂದಲ ಉಂಟಾಗಿತ್ತು. ಅಂತಿಮವಾಗಿ ಅವಕ್ಕೆಲ್ಲ ಈಗ ತೆರೆ ಬಿದ್ದಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




