ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಸಿಎಂ ಖಡಕ್ ಸೂಚನೆ

|

Updated on: Aug 16, 2024 | 8:59 PM

ಬೆಂಗಳೂರು ಮಳೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ (Siddaramaiah) ಅವರು, ‘ಬೆಂಗಳೂರು ನಗರದಲ್ಲಿ ಕಂಟ್ರೋಲ್‌ ರೂಂ ಗಳನ್ನು ಗುರುತಿಸಲಾಗಿದೆ. ರಾಜಕಾಲುವೆಗಳ ಒತ್ತುವರಿ ತೆರವು ಮಾಡಬೇಕು. ಜೊತೆಗೆ ಕೋಡಿಗೆ ಗೇಟ್‌ ಅಳವಡಿಸುವ ಮೂಲಕ ಮಳೆಗಾಲದಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ನಿಯಂತ್ರಿಸಿ ಪ್ರವಾಹ ತಡೆಗಟ್ಟಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ  ಸಿಎಂ ಖಡಕ್ ಸೂಚನೆ
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಸಿಎಂ ಖಡಕ್ ಸೂಚನೆ
Follow us on

ಬೆಂಗಳೂರು, ಆ.16: ಬೆಂಗಳೂರು ಮಳೆ(Bengaluru Rain) ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ (Siddaramaiah) ಅವರು, ‘ ಬೆಂಗಳೂರು ನಗರದಲ್ಲಿ ಕಂಟ್ರೋಲ್‌ ರೂಂ ಗಳನ್ನು ಗುರುತಿಸಲಾಗಿದೆ. ದೊಡ್ಡ ಚರಂಡಿಗಳು ಓಪನ್‌ ಇರುವ ಸ್ಥಳಗಳನ್ನು ಗುರುತಿಸಿ ಮೊದಲೇ ಬಂದೋಬಸ್ತ್‌ ಮಾಡಲಾಗಿದೆ. ಇದರಿಂದ ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ರಾಜಕಾಲುವೆಗಳ ಒತ್ತುವರಿ ತೆರವು ಮಾಡಬೇಕು. ಜೊತೆಗೆ ಕೋಡಿಗೆ ಗೇಟ್‌ ಅಳವಡಿಸುವ ಮೂಲಕ ಮಳೆಗಾಲದಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ನಿಯಂತ್ರಿಸಿ ಪ್ರವಾಹ ತಡೆಗಟ್ಟಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು, ಪ್ರತಿದಿನ ನಗರದ ಪರಿಸ್ಥಿತಿ ಕುರಿತು ಸಭೆ ನಡೆಸಿ ಪರಿಶೀಲಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿದರು. ಇದೇ ವೇಳೆ ವಲಯ ಆಯುಕ್ತರ ಸಭೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹಾಗೂ ಎಂಜಿನಿಯರ್​ಗಳಿಗೆ ಜವಾಬ್ದಾರಿ ನಿಗದಿ ಪಡಿಸಿ. ಕರ್ತವ್ಯಲೋಪ ಎಸಗಿದರೆ, ಮುಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ಕೊಟ್ಟರು. ಅಲ್ಲದೆ, ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಸಂಸ್ಥೆಗಳಾದ ಬಿಡಿಎ, ಬಿಡಬ್ಲ್ಯುಎಸ್​ಎಸ್​ಬಿ, ಬಿಎಂಆರ್​ಸಿಎಲ್‌, ಬಿಬಿಎಂಪಿ ಮೊದಲಾದವುಗಳ ನಡುವೆ ಸಮನ್ವಯ ವಹಿಸಲು ಹೇಳಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ: ವಾಹನ ಸವಾರರು ಪರದಾಟ, ಆಟೋ ಮೇಲೆ ಬಿದ್ದ ಮರ

ಇನ್ನು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಅಧೀನದಲ್ಲಿರುವ ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ನಗರ ಮತ್ತು ಪಟ್ಟಣಗಳಲ್ಲಿ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಚರಂಡಿಗಳ ಸ್ವಚ್ಚತೆಯನ್ನು ನಿರಂತರವಾಗಿ ಮಾಡಬೇಕು. 210 ಕೋಟಿ ರೂಪಾಯಿಯನ್ನು ರಾಜ್ಯ ಹೆದ್ದಾರಿಗಳ ದುರಸ್ತಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.

ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ

ಪ್ರವಾಹದ ವೇಳೆ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಈಗಾಗಲೇ ಡೆಂಗ್ಯು ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಚಿಕುನ್‌ಗುನ್ಯಾ, ಮಲೇರಿಯಾ ರೋಗ ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸಿ ಎಂದರು. ಜೊತೆಗೆ ಪ್ರವಾಹ, ಭಾರಿ ಮಳೆ ಸಂದರ್ಭದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡರೆ, ಕೂಡಲೇ ಸರಿಪಡಿಸಲು ಸಿದ್ಧತೆ ಮಾಡಿಕೊಳ್ಳಲು ಅಗತ್ಯವಿರುವ ಟ್ರಾನ್ಸ್‌ಫಾರ್ಮರ್‌ಗಳು, ಕಂಬಗಳನ್ನು ಲಭ್ಯಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Fri, 16 August 24