Coffee Tea Price in Bangalore: ಸಾಕಾ, ಬೇಕಾ… ಹಾಲಿನ ದರ 4 ರೂ. ಹೆಚ್ಚಾದ್ರೆ ಕಾಫಿ, ಚಹಾ ಬೆಲೆ 5 ರೂ.ವರೆಗೆ ದುಬಾರಿ

ಬೆಂಗಳೂರಿನಲ್ಲಿ ಕಾಫಿ ಟೀ ಬೆಲೆ ಏರಿಕೆ: ನಂದಿನಿ ಹಾಲಿನ ದರ 4 ರೂಪಾಯಿ ಹೆಚ್ಚಾಗಿದ್ದಾಯ್ತು. ಇದೀಗ ಕಾಫಿ, ಚಹಾದ ಸರದಿ. ಹಾಲಿನ ದರ 4 ರೂ. ಹೆಚ್ಚಾದರೆ ಇದೀಗ ಕಾಫಿ, ಚಹಾ ಬೆಲೆ 5 ರೂ. ಏರಿಕೆಯಾಗಿದೆ! ಆ ಮೂಲಕ ಗ್ರಾಹಕರಿಗೆ ಶಾಕ್ ಎದುರಾಗಿದೆ. ಬೆಂಗಳೂರಿನ ಅನೇಕ ದರ್ಶಿನಿಗಳಲ್ಲಿ, ಹೋಟೆಲ್​ಗಳಲ್ಲಿ ಹಾಗೂ ಅಂಗಡಿಗಳಲ್ಲಿ ಕಾಫಿ ಮತ್ತು ಚಹಾ ದರ ಏರಿಕೆಯಾಗಿದೆ. 2, 3 ಹಾಗೂ 5 ರೂಪಾಯಿವರೆಗೆ ದರ ಏರಿಕೆ ಮಾಡಲಾಗಿದೆ.

Coffee Tea Price in Bangalore: ಸಾಕಾ, ಬೇಕಾ... ಹಾಲಿನ ದರ 4 ರೂ. ಹೆಚ್ಚಾದ್ರೆ ಕಾಫಿ, ಚಹಾ ಬೆಲೆ 5 ರೂ.ವರೆಗೆ ದುಬಾರಿ
ಕಾಫಿ, ಚಹಾ ದರ 5 ರೂ. ಹೆಚ್ಚಳ

Updated on: Apr 03, 2025 | 12:09 PM

ಬೆಂಗಳೂರು, ಏಪ್ರಿಲ್ 3: ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಳ ಮಾಡಿ ಕರ್ನಾಟಕ ಸರ್ಕಾರ (Karnataka Govt) ಕೆಲವು ದಿನಗಳ ಹಿಂದೆ ಅಧಿಸೂಚನೆ ಹೊರಡಿಸಿತ್ತು. ಏಪ್ರಿಲ್ ಒಂದರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಅನೇಕ ಹೋಟೆಲ್​​ಗಳು (Bengaluru Hotels) ಮತ್ತು ದರ್ಶಿನಿಗಳು ಕಾಫಿ ಮತ್ತು ಚಹಾ ದರವನ್ನು (Coffee, Tea Price)  ಏರಿಕೆ ಮಾಡಿವೆ. 3 ರೂಪಾಯಿಯಿಂದ ತೊಡಗಿ 5 ರೂಪಾಯಿವರೆಗೆ ದರ ಹೆಚ್ಚಳವಾಗಿದೆ. ಆದರೆ, ಕಾಫಿ ಮತ್ತು ಚಹಾ ದರ ಏರಿಕೆ ವಿಚಾರವಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಈವರಿಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ನಂದಿನಿ ಹಾಲಿನ ದರ ಪ್ರತಿ ಲೀಟರ್​​ಗೆ ನಾಲ್ಕು ರೂಪಾಯಿ ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾಫಿ ಮತ್ತು ಚಹಾದ ದರ ಹೆಚ್ಚಳ ಮಾಡಬೇಕಾಗಿದೆ. ಅದೇ ರೀತಿ ಇತರ ಹಾಲಿನ ಉತ್ಪನ್ನಗಳ ದರ ಕೂಡ ಏರಿಕೆ ಮಾಡಬೇಕಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.

ಹಾಲಿನ ಉತ್ಪನ್ನಗಳ ಬೆಲೆಯೂ ಏರಿಕೆ

ಕಾಫಿ, ಚಹಾ ಮಾತ್ರವಲ್ಲದೆ ಹಾಲಿನಿಂದ ತಯಾರಿಸುವ ಇತರ ಉತ್ಪನ್ನಗಳ ಬೆಲೆಯೂ ಏರಿಕೆಯಾಗಲಿದೆ. ಹಾಲಿನ ಉತ್ಪನ್ನಗಳಾದ ಫೇಡಾ, ಪನ್ನೀರ್ ಇತ್ಯಾದಿಗಳ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಹಾಲಿನ ದರ ಹೆಚ್ಚಳದಿಂದ ಇತರ ಉತ್ಪನ್ನಗಳ ತಯಾರಿಕಾ ವೆಚ್ಚವೂ ಹೆಚ್ಚಾಗುತ್ತಿದೆ. ಹೀಗಾಗಿ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಿಸುತ್ತೇವೆ ಎಂದು ಬೆಂಗಳೂರಿನ ಹೋಟೆಲ್ ಮಾಲೀಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ
ಕಲ್ಯಾಣ ಕರ್ನಾಟಕ ರೈತರ 7 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ
ಹಾಲಿನ ಬೆಲೇಲಿ ರೈತರಿಗೆ ಸಿಗೋದೆಷ್ಟು, ಸರ್ಕಾರದ ಪಾಲೆಷ್ಟು? ಇಲ್ಲಿದೆ ವಿವರ
ಮತ್ತೆ ಬೆಲೆ ಏರಿಕೆ ಬರೆ:ನಂದಿನಿ ಹಾಲಿನ ದರ ಏರಿಕೆಗೆ ಸಂಪುಟ ಗ್ರೀನ್ ಸಿಗ್ನಲ್
ಜೇಬಿಗೆ ಬೀಳಲಿದೆ ಕತ್ತರಿ: ಒಂದು ಕಪ್ ಕಾಫಿ ಬೆಲೆ 5 ರೂ. ಏರಿಕೆ ಸಾಧ್ಯತೆ

ಕಾಫಿ ಪುಡಿ ದರವೂ ಏರಿಕೆ

ಕಾಫಿ ಪುಡಿಯ ದರ ಕೂಡ ಕೆಲವು ವಾರಗಳ ಹಿಂದೆ ಹೆಚ್ಚಾಗಿತ್ತು. ಇದು ಕೂಡ ಕಾಫಿ ದರ ಏರಿಕೆಗೆ ಕಾರಣವಾಗಿದೆ. ಫೆಬ್ರವರಿ ಕೊನೆಯ ವಾರದ ವೇಳೆಗೆ ಹುರಿದ ಕಾಫಿ ಪುಡಿಯ ಬೆಲೆ ಪ್ರತಿ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗಿತ್ತು. ಇದು ಮತ್ತೆ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಇತ್ತೀಚೆಗೆ ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿಯ ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ: ನಂದಿನಿ ಹಾಲಿನ ಬೆಲೆ ಏರಿಕೆ: ರೈತರಿಗೆ ಸಿಗೋದೆಷ್ಟು, ಲಾಭದಲ್ಲಿ ಸರ್ಕಾರದ ಪಾಲೆಷ್ಟು? ಇಲ್ಲಿದೆ ಮಾಹಿತಿ

ಕಾಫಿ ಪುಡಿ ದರ ಹೆಚ್ಚಳವಾದ ಕಾರಣ ಮಾರಾಟಗಾರರು ಒಂದು ಕಪ್ ಕಾಫಿಯ ಬೆಲೆಯನ್ನು ಸುಮಾರು 5 ರೂ.ಗಳಷ್ಟು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಚಿಕೋರಿ ಮಿಶ್ರಣವು ಗುಣಮಟ್ಟ ಮತ್ತು ಸುವಾಸನೆಯ ಮೇಲೆ ಪರಿಣಾಮ ಬೀರುವುದರಿಂದ ನಾವು ಅದರ ಪ್ರಮಾಣ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷರು ಕೆಲವು ದಿನಗಳ ಹಿಂದೆ ತಿಳಿಸಿದ್ದರು. ಅದೀಗ ನಿಜವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:48 am, Thu, 3 April 25