ಕಲ್ಯಾಣ ಕರ್ನಾಟಕ ರೈತರ 7 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ ಕೆಎಂಎಫ್
ಕರ್ನಾಟಕ ಸರ್ಕಾರ ನಂದಿನಿ ಹಾಲಿನ ದರವನ್ನು ಲೀಟರ್‌ಗೆ 4 ರೂಪಾಯಿ ಹೆಚ್ಚಿಸಿದೆ. ಕೆಎಂಎಫ್‌ನ ರಬಕೊವಿ ಒಕ್ಕೂಟ 7 ಕೋಟಿ ರೂಪಾಯಿ ಬಾಕಿ ಹಣವನ್ನು ಹಾಲು ಉತ್ಪಾದಕರಿಗೆ ನೀಡದ ಕಾರಣ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆದಿದೆ. ರಬಕೊವಿ ಅಧಿಕಾರಿಗಳು ಲೀಟರ್‌ಗೆ 1.50 ರೂಪಾಯಿ ಕಡಿತಗೊಳಿಸಿದ್ದಾರೆ. ರೈತರ ಮುತ್ತಿಗೆಯ ನಂತರ, ಅಧಿಕಾರಿಗಳು ಒಂದು ತಿಂಗಳೊಳಗೆ ಹಣ ಪಾವತಿಸುವ ಭರವಸೆ ನೀಡಿದ್ದಾರೆ.

ಬಳ್ಳಾರಿ, ಮಾರ್ಚ್ 29: ಇತ್ತೀಚಿಗಷ್ಟೇ ರಾಜ್ಯ ಸರ್ಕಾರ (Karnataka Government) ನಂದಿನಿ ಹಾಲಿನ (Nandini Milk) ದರವನ್ನು ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆ ಮಾಡಿದೆ. ರಾಜ್ಯದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ, ದರ ಪರಿಷ್ಕರಣೆಯ ಮೊತ್ತವನ್ನು ಹಾಲು ಉತ್ಪಾದಕರಿಗೆ ನೇರವಾಗಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಕೆಎಂಎಫ್‌ನ ರಾಬಕೊವಿ (ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಒಕ್ಕೂಟ) ರೈತರಿಗೆ ನೀಡಬೇಕಾದ 7 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹಾಲು ಉತ್ಪಾದಕರು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ರಬಕೊವಿಗೆ ಭೇಟಿ ನೀಡಿದ್ದ ವೇಳೆ ಮುತ್ತಿಗೆ ಹಾಕಿದರು.
ನಷ್ಟದ ಮಾಹಿತಿ ನೀಡಿ ರಾಬಕೊವಿ ಅಧಿಕಾರಿಗಳು ಹಾಲು ಉತ್ಪಾದಕರಿಗೆ ನೀಡಬೇಕಿದ್ದ ಪ್ರತಿ ಲೀಟರ್ನ ಮೇಲಿನ 1. 50 ರೂಪಾಯಿಯನ್ನು ಕಡಿತ ಮಾಡಿದ್ದಾರೆ. ಒಕ್ಕೂಟ ಕಳೆದ 7 ತಿಂಗಳಿಂದ 7 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ. ರೈತರು ಮುತ್ತಿಗೆ ಹಾಕುತ್ತಿದ್ದಂತೆ ತಿಂಗಳೊಳಗೆ ಹಣ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಇನ್ನು, ರೈತರನ್ನು ಸಮಾಧಾನಿಪಡಿಸಲು ಭೀಮಾ ನಾಯ್ಕ್ ಹರಸಾಹಸಪಟ್ಟರು. ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಈಗಾಗಲೇ ತೀರ್ಮಾನಿಸಿದಂತೆ ಏ.1ರಿಂದ 4 ರೂ. ರೈತರಿಗೆ ಕೊಡುತ್ತೇವೆ ಎಂದರು.
ಇದನ್ನೂ ಓದಿ: ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ ಸರ್ಕಾರ
ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ಬರೋಬ್ಬರಿ 656.07 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿರುವುದಾಗಿ ಬಜೆಟ್ ಅಧಿವೇಶನದಲ್ಲಿ ಸರ್ಕಾರ ಉತ್ತರ ನೀಡಿತ್ತು. ಒಟ್ಟು 9,04,547 ಫಲಾನುಭವಿ ರೈತರಿಗೆ ಹಾಲು ಉತ್ಪಾದನಾ ಪ್ರೋತ್ಸಾಹಧನ ಬಾಕಿ ಇದೆ ಎಂದು ಹೇಳಿತ್ತು.
ಆರ್ಥಿಕ ಇಲಾಖೆ ಹಣ ಬಿಡುಗಡೆ ಮಾಡಬೇಕಿದೆ. ಹಾಲು ಉತ್ಪಾದನೆ ಜಾಸ್ತಿ ಆಗುತ್ತಿದೆ, ಉತ್ಪಾದನೆಗೆ ತಕ್ಕಂತೆ ಬಜೆಟ್ ಅಲೋಕೇಷನ್ ಇಲ್ಲ. 1300-1500 ಕೋಟಿ ರೂ ಮಾತ್ರ ಬಜೆಟ್ ಹಂಚಿಕೆ ಇದೆ ಎಂದು ಪಶುಸಂಗೋಪನಾ ಸಚಿವ ಉತ್ತರ ನೀಡಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Sat, 29 March 25