ಪ್ರತಿ ಮನೆಯಿಂದ 100ರೂ ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಪ್ಲಾನ್; ಸರ್ಕಾರ ಒಪ್ಪಿದರೆ ಶೀಘ್ರವೇ ಜಾರಿ
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯು ಈಗಾಗಲೇ ದೇಶದ ಇತರೆ ರಾಜ್ಯಗಳ ಘನತ್ಯಾಜ್ಯ ಶುಲ್ಕದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಾಗೂ ಕಡಿಮೆ ಹಣ ವಸೂಲಿಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಇದಕ್ಕೆ ಒಪ್ಪಿದರೆ ಆದಷ್ಟು ಬೇಗ ಬೆಂಗಳೂರಿನಲ್ಲಿ ಪ್ರತಿಯೊಂದು ಮನೆಯಿಂದ 100ರೂ ಘನತ್ಯಾಜ್ಯ ಶುಲ್ಕ ಸಂಗ್ರಹಿಸಲಾಗುತ್ತೆ.
ಬೆಂಗಳೂರು, ಜೂನ್.10: ರಾಜ್ಯಕ್ಕೆ ನೀಡಿರುವ ಪಂಚ ಭಾಗ್ಯಕ್ಕೆ ಹಣ ಸರಿದೂಗಿಸಲು ಸರ್ಕಾರ (Karnataka Government) ಜನರ ಮೇಲೆ ಮತ್ತೊಂದು ತೆರಿಗೆ (Tax) ಭಾಗ್ಯ ವಿಧಿಸಲು ಮುಂದಾಗಿದೆ. ರಾಜಧಾನಿಯ ಪ್ರತಿ ಮನೆಗೂ ಮಾಸಿಕ 100 ರೂ.ರಂತೆ ಘನತ್ಯಾಜ್ಯ ಶುಲ್ಕ ವಿಧಿಸಲು ತಯಾರಿ ನಡೆಯುತ್ತಿದೆ. ಕಳೆದ ವಾರ ರಾಜ್ಯ ಸರ್ಕಾರ “ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ” ಮಾಡಿತ್ತು. ಈಗ ಈ ಕಂಪನಿಯಿಂದ ನೇರವಾಗಿ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸಲು ಪ್ಲಾನ್ ಮಾಡಿದೆ.
ಕಳೆದ ನಾಲ್ಕು ವರ್ಷದಿಂದ ಘನತ್ಯಾಜ್ಯ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಈ ಬಗ್ಗೆ ಸಾರ್ವಜನಿಕರ ವಿರೋಧ ಹಿನ್ನೆಲೆಯಲ್ಲಿ ಈ ವಿಚಾರವನ್ನು ಕೈಬಿಡಲಾಗಿತ್ತು. ಈಗ ಮತ್ತೆ ಮನೆ ಮನೆಗೂ ಘನತ್ಯಾಜ್ಯ ಶುಲ್ಕ ವಿಧಿಸೋದಕ್ಕೆ ಸರ್ಕಾರ ಮುಂದಾಗಿದೆ. ಸರ್ಕಾರ ರಚಿಸಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯು ಬೇರೆ ರಾಜ್ಯಗಳ ವರದಿ ಆಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ದೇಶದ ಬೇರೆ ರಾಜ್ಯಗಳಲ್ಲಿ ಈಗಾಗಲೇ ಈ ತೆರಿಗೆ ಜಾರಿಯಲ್ಲಿದೆ. ಅದೇ ರೀತಿ ಬೆಂಗಳೂರಲ್ಲಿ ಜಾರಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಪಕ್ಷಕ್ಕೆ ಲೀಡ್ ಕೊಡಿಸದೇ ಇರುವ ಸಚಿವರು ರಾಜೀನಾಮೆ ಕೊಡಬೇಕು; ಸ್ವಪಕ್ಷದ ಸಚಿವರ ವಿರುದ್ಧವೇ ಶಾಸಕ ಶಿವಗಂಗಾ ಬಸವರಾಜ್ ಆಕ್ರೋಶ
ವಿದ್ಯುತ್ ಬಿಲ್ ಮೂಲಕ ಸೇವಾ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಗೃಹ ಜ್ಯೋತಿ ಯೋಜನೆ ಹಿನ್ನೆಲೆ ಬಹುತೇಕ ಮಂದಿ ಬಿಲ್ ಪಾವತಿ ಮಾಡಿಲ್ಲ. ಈ ಹಿನ್ನೆಲೆ ಆಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಮೂಲಕ ಹಣ ಸಂಗ್ರಹಕ್ಕೆ ಪ್ಲಾನ್ ನಡೆದಿದೆ. ಸದ್ಯ ವಸತಿ ಕಟ್ಟಡಗಳಿಗೆ ಮಾಸಿಕ 100 ರೂ, ವಾಣಿಜ್ಯ ಕಟ್ಟಡಗಳಿಗೆ 200ರೂ ದರ ನಿಗದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ಕಟ್ಟಡದಲ್ಲಿ 10 ಮನೆ ಇದ್ರೆ, ಪ್ರತಿ ಮನೆಗೂ ಆಸ್ತಿ ತೆರಿಗೆ ಮೂಲಕ ಮಾಸಿಕ 100 ರೂ. ಸಂಗ್ರಹ ಮಾಡಲು ಹಾಗೂ ಆಸ್ತಿ ತೆರಿಗೆ ಮೂಲಕ ಸಂಗ್ರಹವಾದ ಹಣವನ್ನ ಬಿಬಿಎಂಪಿ ಕಂಪನಿಗೆ ವರ್ಗಾವಣೆ ಮಾಡಲು ತಯಾರಿ ನಡೆಯುತ್ತಿದೆ.
ನಗರದಲ್ಲಿ ಎಷ್ಟು ವಸತಿ, ವಾಣಿಜ್ಯ ಕಟ್ಟಡಗಳು ಇದೆ ಎಂಬ ಬಗ್ಗೆ ಈಗಾಗಲೇ ಸರ್ವೆ ನಡೆದಿದೆ. ದರ ನಿಗದಿಯಾದ್ರೆ ವಾರ್ಷಿಕ 800 ಕೋಟಿ ಘನತ್ಯಾಜ್ಯ ಕಂಪನಿಗೆ ಆದಾಯ ಬರಲಿದೆ. ಅಂದುಕೊಂಡಂತೆ ಆದ್ರೆ ಮುಂದಿನ ದಿನಗಳಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ಗ್ಯಾರಂಟಿ ಎನ್ನಲಾಗುತ್ತಿದೆ. ಇನ್ನು ಕಸ ಸಂಗ್ರಹಕ್ಕೆ 100 ರೂಪಾಯಿ ನಿಗದಿ ವಿಚಾರ 2016ರ ರೂಲ್ ಪ್ರಕಾರ ನೋಟಿಫಿಕೇಷನ್ ಆಗಿದೆ. ಆದ್ರೆ ಅದಕ್ಕಿಂತ ಕಡಿಮೆ ಹಣ ವಸೂಲಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ಅನುಮೋದನೆ ಕೊಟ್ಟ ಮೇಲೆ ಅದನ್ನ ನಿಗದಿ ಮಾಡ್ತೀವಿ. ನಮ್ಮ ರಾಜ್ಯದಲ್ಲೇ ಪಂಚಾಯಿತಿಗಳಲ್ಲಿ ಶುಲ್ಕ ವಸೂಲಾತಿ ನಡೀತಿದೆ. ಈಗ ನಾವು ಕಡಿಮೆ ಶುಲ್ಕವನ್ನ ನಿಗದಿಗೆ ಪ್ರಸ್ತಾವನೆ ಕೊಟ್ಟಿದ್ದೇವೆ. ಸರ್ಕಾರ ಅನುಮತಿ ಕೊಟ್ಟರೇ ಶುಲ್ಕ ವಸೂಲಿ ಮಾಡ್ತೀವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ