ಉಕ್ರೇನ್​ನಲ್ಲಿ ನೆಲೆ ನಿಂತವರ ಸಮಸ್ಯೆ ಕೇಂದ್ರ ಸರ್ಕಾರ ಮುಂಗಾಣಲಿಲ್ಲವೇಕೆ: ರಾಮಲಿಂಗಾ ರೆಡ್ಡಿ ಪ್ರಶ್ನೆ

ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಭಾರತೀಯರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರಕ್ಕೆ ಈ ಸಮಸ್ಯೆಯ ತೀವ್ರತೆ ಅರ್ಥವಾಗುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಉಕ್ರೇನ್​ನಲ್ಲಿ ನೆಲೆ ನಿಂತವರ ಸಮಸ್ಯೆ ಕೇಂದ್ರ ಸರ್ಕಾರ ಮುಂಗಾಣಲಿಲ್ಲವೇಕೆ: ರಾಮಲಿಂಗಾ ರೆಡ್ಡಿ ಪ್ರಶ್ನೆ
ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಮತ್ತು ಪ್ರಧಾನಿ ನರೇಂದ್ರ ಮೋದಿ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 02, 2022 | 11:53 AM

ಬೆಂಗಳೂರು: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಮಂಗಳವಾರ ಹಲವು ಪ್ರಮುಖ ವಿಚಾರಗಳನ್ನು ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿದರು. ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯ ಕುರಿತು ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ (Congress Leader Ramalingareddy) ಪ್ರಸ್ತಾಪಿಸಿದರು. ‘ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಭಾರತೀಯರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರಕ್ಕೆ ಈ ಸಮಸ್ಯೆಯ ತೀವ್ರತೆ ಅರ್ಥವಾಗುತ್ತಿಲ್ಲ. ಉಕ್ರೇನ್‌ನಲ್ಲಿ 4 ಸಾವಿರ ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ. ಕೇಂದ್ರ ಸರ್ಕಾರ ಈಗ ಉತ್ತರ ಪ್ರದೇಶ ಚುನಾವಣೆಯಲ್ಲಿ ಮಗ್ನವಾಗಿದೆ’ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಪ್ರಿಯರು. ಅವರಿಗೆ ಅದೇ ಮುಖ್ಯ. ಇದುವರೆಗೂ 500 ವಿದ್ಯಾರ್ಥಿಗಳು ಮಾತ್ರ ಕರೆತಂದಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನು ಏರ್​ಲಿಫ್ಟ್ ಮಾಡುತ್ತೇವೆ ಎಂದು ಹೇಳಿ ಸುಮ್ಮನಾಗಿದ್ದಾರೆ. ನವೀನ್ ಸಾವಿಗೆ ಕಾರಣ ಯಾರು? 4000 ಸಾವಿರ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿದ್ದಾರೆ. ಕರ್ನಾಟಕ ವಿದ್ಯಾರ್ಥಿಗಳನ್ನ ಕರೆತರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇದ್ದಂತೆ ಕಾಣಿಸುವುದಿಲ್ಲ. ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಉಕ್ರೇನ್ ಆಗುಹೋಗುಗಗಳ ಬಗ್ಗೆ ಮೊದಲೇ ಗುಪ್ತಚರ ಇಲಾಖೆಗೆ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಉಕ್ರೇನ್‌ನಲ್ಲಿ ಆದ ಕನ್ನಡಿಗನ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ. ಬಿಜೆಪಿ ನಾಯಕರು ಉತ್ತರ ಕುಮಾರರಿದ್ದಂತೆ. ಈಗಲಾದರೂ ಎಚ್ಚೆತ್ತು ಕೊಡಲಿ ಎಂದು ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಡಬಲ್ ಎಂಜಿನ್ ಸರ್ಕಾರವಲ್ಲ, ಡಬ್ಬಾ ಎಂಜಿನ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಎಂಜಿನ್ ಎರಡೂ ಕಡೆ ಕೆಟ್ಟು ಹೋಗಿದೆ ಎಂದು ಲೇವಡಿ ಮಾಡಿದರು.

ಕರ್ನಾಟಕದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಅವರನ್ನು ಕರೆದುಕೊಂಡು ಕೇಂದ್ರಕ್ಕೆ ಹೋಗಿ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆಯಿಂದ ನಿರಾಕ್ಷೇಪಣ ಪತ್ರ (NOC) ಕೊಡಿಸಲಿ. ಪಾದಯಾತ್ರೆ ತಡೆಯಲು ಇವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಫ್ಲೆಕ್ಸ್ ಹಾಕೋದು ತಪ್ಪು ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಇದು ಎಲ್ಲರಿಗೂ ಅನ್ವಯ ಆಗಬೇಕೆಲ್ಲವೇ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ಇತ್ತೀಚೆಗೆ ಬೊಮ್ಮನಹಳ್ಳಿಗೆ ಬಂದಿದ್ದಾಗ ಅಲ್ಲಿ ನೂರಾರು ಫ್ಲೆಕ್ಸ್ ಹಾಕಲಾಗಿತ್ತು. ಸಚಿವರಾದ ಮುನಿರತ್ನ, ವಿ.ಸೋಮಣ್ಣ, ಗೋಪಾಲಯ್ಯ ಅವರ ಫ್ಲೆಕ್ಸ್​ಗಳೂ ರಾರಾಜಿಸುತ್ತಿದ್ದವು. ಅವರೂ ಕೂಡ ಫ್ಲೆಕ್ಸ್​ಗಳನ್ನು ಹಾಕಿಸಿದ್ದು ತಪ್ಪಲ್ಲವೇ? ಬೆಂಗಳೂರು ಕಾಂಗ್ರೆಸ್​ ಪಕ್ಷ ಫ್ಲೆಕ್ಸ್ ಹಾಕಿರಲಿಲ್ಲ. ಇಲ್ಲಿ ಫ್ಲೆಕ್ಸ್ ಹಾಕಿದ್ದು ಬೇರೆ ಸಂಘಸಂಸ್ಥೆಗಳು. ಇವರು ಪ್ರಕರಣ ದಾಖಲಿಸುವುದಿದ್ದರೆ ಎಲ್ಲರ ಮೇಲೆಯೂ ದಾಖಲಿಸಬೇಕು. ಬಿಜೆಪಿಗೆ ಅಂತ ವಿಶೇಷ ಕಾನೂನು ಇಲ್ಲ ಎಂದು ಹೇಳಿದರು.

ಬೆಂಗಳೂರಿನ ಜನರಲ್ಲಿ ನಾನು ಮನವಿ ಮಾಡುತ್ತೇನೆ. ಇಲ್ಲಿನ ಜನರಿಗೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಪಾದಯಾತ್ರೆಯಿಂದ ಎರಡು ದಿನ ಟ್ರಾಫಿಕ್ ಸಮಸ್ಯೆ ಆಗಬಹುದು. ಆದರೆ ನಮ್ಮ ಈ ಹೋರಾಟದಿಂದ ನಗರಕ್ಕೆ ನೀರು ಸಿಗುತ್ತದೆ. ನಮ್ಮ ಪ್ರಯತ್ನ ನಿಮಗೆ ತಪ್ಪು ಎನಿಸಿದರೆ ದಯವಿಟ್ಟು ದೊಡ್ಡ ಮನಸ್ಸು ಮಾಡಿ ಅನುಸರಿಸಿಕೊಳ್ಳಿ. ನಮ್ಮ ತಪ್ಪನ್ನು ಹೊಟ್ಟೆಗೆ ಹಾಕಿಕೊಳ್ಳಿ ಎಂದು ಮನವಿ ಮಾಡಿದರು.

ಉಕ್ರೇನ್​ನಲ್ಲಿ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವಿನ ಹೊಣೆಯನ್ನು ಸರ್ಕಾರವೇ ಹೊರಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ಗುಂಗಿನಿಂದ ಈಗಲಾದರೂ ಹೊರಗೆ ಬರಬೇಕು. ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಡಿಯುತ್ತಿರುವ ನೀರನ್ನು ನಗರಕ್ಕೆ ತಂದವರು ನಾವೇ. ಈಗ ಮುಖ್ಯಮಂತ್ರಿಗಳು ರಾಜಕೀಯವಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ಬಂದರೆ ಅದರ ಶ್ರೇಯಸ್ಸೆಲ್ಲ ಬಿಜೆಪಿ ತೆಗೆದುಕೊಳ್ಳಲಿ, ನಮಗ್ಯಾವುದೇ ಕ್ರೆಡಿಟ್ ಬೇಡ: ಡಿಕೆ ಶಿವಕುಮಾರ

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಹಿನ್ನೆಲೆ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ಅಳವಡಿಕೆ; ತೆರವುಗೊಳಿಸುವಂತೆ ಬಿಬಿಎಂಪಿ ಸೂಚನೆ