ಹಿಜಾಬ್ ವಿವಾದದಲ್ಲಿ ಸ್ವಾಮೀಜಿಗಳ ದಿರಿಸು ಪ್ರಸ್ತಾಪ: ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಖಂಡನೆ

‘ಜೈನ್ ಹೆಣ್ಣುಮಕ್ಕಳು ತಲೆ ಮೇಲೆ ಸೆರಗು ಹಾಕಿಕೊಳ್ಳುವುದಿಲ್ಲವೇ? ಸ್ವಾಮೀಜಿ ಹಾಕಿಕೊಳ್ಳುವುದಿಲ್ಲವೇ ನಿಮಗೇನು ತೊಂದರೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.

ಹಿಜಾಬ್ ವಿವಾದದಲ್ಲಿ ಸ್ವಾಮೀಜಿಗಳ ದಿರಿಸು ಪ್ರಸ್ತಾಪ: ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಖಂಡನೆ
ವಿಪಕ್ಷ ನಾಯಕ ಸಿದ್ದರಾಮಯ್ಯ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 25, 2022 | 3:26 PM

ಬೆಂಗಳೂರು: ಹಿಜಾಬ್ ಧರಿಸುವುದು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಹಕ್ಕು ಎಂದು ಸಮರ್ಥಿಸಿಕೊಳ್ಳುವ ಭರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಚರ್ಚೆಗೀಡಾಗಿದೆ. ‘ಹೆಣ್ಣುಮಕ್ಕಳು ಶಾಲಾ ಸಮವಸ್ತ್ರ ಹಾಕಿಕೊಳ್ಳಲು ತಯಾರಿದ್ದಾರೆ. ಅವರು ದುಪ್ಪಟಾ ಹಾಕಿಕೊಳ್ಳಲು ಅವಕಾಶ ಕೇಳುತ್ತಿದ್ದಾರೆ ಅಷ್ಟೇ. ಜೈನ್ ಹೆಣ್ಣುಮಕ್ಕಳು ತಲೆ ಮೇಲೆ ಸೆರಗು ಹಾಕಿಕೊಳ್ಳುವುದಿಲ್ಲವೇ? ಸ್ವಾಮೀಜಿ ಹಾಕಿಕೊಳ್ಳುವುದಿಲ್ಲವೇ ನಿಮಗೇನು ತೊಂದರೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.

ಇದು ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ‘ಸಿದ್ದರಾಮಯ್ಯ ಮಠಾಧೀಶರ ಸಮೂಹವನ್ನೇ ಅವಮಾನಿಸಿದ್ದಾರೆ. ಅವರು ಕೂಡಲೇ ಮಠಾಧೀಶರ ಕ್ಷಮೆ ಕೋರಬೇಕು. ಹಿಂದೂ ಧರ್ಮ, ಸಂಸ್ಕೃತಿಯನ್ನು ಹೀಯಾಳಿಸುವುದು ಸಿದ್ದರಾಮಯ್ಯ ಅವರ ಚಟ’ ಎಂದು ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಚೋದನಾತ್ಮಕ ಹೇಳಿಕೆಗಳಿಂದ ಹಿಜಾಬ್ ವಿವಾದ ಸೃಷ್ಟಿಯಾಗಿದೆ. ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಸಮಾಜದಲ್ಲಿ ಸಹಬಾಳ್ವೆ ಇಲ್ಲದಂತಾಗುತ್ತಿದೆ. ಸ್ವಾಮೀಜಿಗಳು ಮತ್ತು ಮಹಿಳೆಯರು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುವುದು ದೇಶದ ಸಂಸ್ಕೃತಿಯ ಪ್ರತೀಕ’ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ.

ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಕಾರಣ: ಅಶೋಕ್

ಹಿಜಾಬ್ ವಿವಾದ ಕಾಂಗ್ರೆಸ್ ಪಕ್ಷದ ಕೂಸು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಹಿಜಾಬ್ ವಿವಾದ ಸೃಷ್ಟಿಮಾಡಿದ್ದೇ ಕಾಂಗ್ರೆಸ್ ನಾಯಕರು. ಮತಬ್ಯಾಂಕ್​ಗಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಬಳಸಿಕೊಳ್ಳುತ್ತಿದೆ. ಅಲ್ಪಸಂಖ್ಯಾತರಿಗೆ ಅವರು ಯಾವುದೇ ಅನುಕೂಲ ಮಾಡುವುದಿಲ್ಲ. ಶಾಲೆಗೆ ಯಾರೇ ಬಂದರೂ ಹಿಜಾಬ್ ತೆಗೆದಿಟ್ಟು ಬರಬೇಕು. ಎಲ್ಲರಿಗೂ ಒಂದೇ ನ್ಯಾಯ ಎಂದು ಹೇಳಿದರು. ಸಲ್ಲದ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಕ್ಷಮೆ ಕೋರಬೇಕು ಎಂದು ಒತ್ತಾಯ ಮಾಡಿದರು.

ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ನಾಯಕರು

ಹಿಜಾಬ್ ವಿಚಾರ ಸಮರ್ಥಿಸಿಕೊಳ್ಳಲು ಸಿದ್ದರಾಮಯ್ಯ ಸ್ವಾಮೀಜಿಗಳನ್ನು ಪ್ರಸ್ತಾಪಿಸಿರುವುದಕ್ಕೆ ಕಾಂಗ್ರೆಸ್ ವಲಯದಲ್ಲಿಯೇ ಆಕ್ಷೇಪಗಳು ವ್ಯಕ್ತವಾಗಿವೆ. ಸಿದ್ದರಾಮಯ್ಯ ನೀಡಿರುವ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳುತ್ತಿರುವ ಹಲವು ನಾಯಕರು, ಈ ವಿಚಾರ ಸದ್ಯಕ್ಕೆ ಅನಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳ ಬದಲು ಬೇರೆ ಉದಾಹರಣೆ ನೀಡಬಹುದಿತ್ತು ಎಂದು ಕೆಲವರು ಹೇಳಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಬಿಜೆಪಿ

ಸುಳ್ಳುಗಳ ಹೊರತಾಗಿ ನಿಮ್ಮ ರಾಜಕೀಯ ನಡೆಯುವುದಿಲ್ಲವೇ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಟ್ವೀಟ್ ಮೂಲಕ ಕಟುವಾಗಿ ಪ್ರಶ್ನಿಸಿದೆ. ‘ಹಿಜಾಬ್ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು. ಕೋರ್ಟ್ ಇವರ ಹೇಳಿಕೆಗೆ ವಿರುದ್ಧವಾಗಿ ತೀರ್ಪು ನೀಡಿತು. ರಾಷ್ಟ್ರಧ್ವಜವೇ ಇರದ ಸ್ತಂಭದಲ್ಲಿ ರಾಷ್ಟ್ರಧ್ವಜ ತೆಗೆದಿದ್ದಾರೆ ಎಂದರು. ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕಿದ್ದಾಗಿ ಸುಳ್ಳು ಹೇಳಿದರು’ ಎಂದು ಬಿಜೆಪಿ ಆರೋಪ ಮಾಡಿದೆ.

ಓಲೈಕೆಗೂ ಒಂದು ಮಿತಿ ಇರುತ್ತದೆ, ಅದನ್ನೂ ನೀವು ದಾಟಿದ್ದೀರಿ. ಮೊದಲು ಹಿಜಾಬ್, ದುಪಟ್ಟಾ, ಪೇಟ ಬಗ್ಗೆ ವ್ಯತ್ಯಾಸ ತಿಳಿಯಿರಿ. ಹಿಜಾಬ್ ನಿಷೇಧಿಸಿಲ್ಲ, ತರಗತಿಗೆ ಮಾತ್ರ ಅನುಮತಿ ನೀಡಿಲ್ಲವಷ್ಟೇ. ಹಿಜಾಬ್ ವಿಚಾರವಾಗಿ ಸಿದ್ದರಾಮಯ್ಯಗೆ ಗೊಂದಲವಿದೆ. ಹಾದಿಬೀದಿಯಲ್ಲಿ, ಕಾಲೇಜಿನ ಆವರಣದಲ್ಲಿ ಹಿಜಾಬ್‌ ನಿಷೇಧಿಸಿಲ್ಲ. ವಸ್ತ್ರಸಂಹಿತೆಯ ಪ್ರಕಾರ ತರಗತಿಯಲ್ಲಿ ಅವಕಾಶ ನೀಡಿಲ್ಲ. ಹಿಜಾಬ್‌ ಒಳಗೆ ಅಡಗಿರುವ ‘ಅಲ್ಪ’ಮತಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ’ ಎಂದು ಬಿಜೆಪಿ ದೂರಿದೆ.

ಇದನ್ನೂ ಓದಿ: ಶಲ್ಯವನ್ನೇ ದುಪ್ಪಟ್ಟಾ ಮಾಡಿದ ಸಿದ್ದರಾಮಯ್ಯ! ಹಿಜಾಬ್​ಗೆ ಅವಕಾಶ ಕೊಡಿ ಎಂದು ನಾಟಕೀಯವಾಗಿ ಕೇಳಿದ್ದಕ್ಕೆ ಶಿಕ್ಷಣ ಸಚಿವರು ಕೊಟ್ಟ ಉತ್ತರವೇನು?

ಇದನ್ನೂ ಓದಿ: ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ ಪ್ರಕರಣ; ಮತ್ತೊಬ್ಬ ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada