ಬೆಂಗಳೂರು: ಜಮೀರ್ ಅಹ್ಮದ್(Zameer Ahmed Khan) ಆಸ್ತಿಪಾಸ್ತಿ ಸಂಬಂಧಿಸಿ ಇ.ಡಿ ಅಧಿಕಾರಿಗಳು ಜಮೀರ್ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು ಮತ್ತಷ್ಟು ದಾಖಲೆ ಕೇಳಿದ್ದಾರೆ. ಆದಷ್ಟು ಬೇಗ ಮತ್ತಷ್ಟು ಸೂಕ್ತ ದಾಖಲೆಗಳನ್ನು ಒದಗಿಸುವಂತೆ ತಿಳಿಸಿದ್ದಾರೆ. ಇದರಂತೆ ವಿವರ ನೀಡುವುದಕ್ಕೆ ಅಧಿಕಾರಿಗಳ ಬಳಿ 10 ದಿನ ಕಾಲಾವಕಾಶ ಕೇಳಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ತಿಳಿಸಿದ್ದಾರೆ.
ನಮ್ಮ ಮನೆಯ ಮೇಲೆ ಇ.ಡಿ(ED) ದಾಳಿ ಮಾಡಿದೆ, ಐಟಿ(IT) ಅಲ್ಲ ಎಂದು ಸ್ಪಷ್ಟಪಡಿಸಿದ ಜಮೀರ್, ದೂರು ಆಧರಿಸಿ ನಮ್ಮ ಮನೆ ಮೇಲೆ ED ದಾಳಿಯಾಗಿದೆ. ED ಅಧಿಕಾರಿಗಳ ದಾಳಿಯಿಂದ ನನಗೂ ಅಚ್ಚರಿಯಾಗಿದೆ. ED ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮನೆ ಲೆಕ್ಕಾಚಾರ, ಒಳಾಂಗಣ ವಿನ್ಯಾಸದ ಬಗ್ಗೆ ವಿವರ ನೀಡುವುದಕ್ಕೆ 10 ದಿನ ಕಾಲಾವಕಾಶ ಕೇಳಿದ್ದೇನೆ. ED ಅಧಿಕಾರಿಗಳಿಗೆ ಮತ್ತಷ್ಟು ವಿವರಗಳನ್ನು ನೀಡುತ್ತೇನೆ ಎಂದು ಹೇಳಿದರು.
ED ದಾಳಿಗೂ ಐಎಂಎ ಪ್ರಕರಣಕ್ಕೂ ಸಂಬಂಧವಿಲ್ಲ
ED ದಾಳಿಗೂ ಐಎಂಎ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಶಾಸಕ ಜಮೀರ್ ಸ್ಪಷ್ಟನೆ ನೀಡಿದ್ದಾರೆ. ಮನೆ ವಿಚಾರವಾಗಿ ದಾಳಿ ಆಗಲ್ಲ ಎಂದು ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶೀವಕುಮಾರ್ ಹೇಳಿಕೆ ನೀಡಿದ್ದರು. ಇದಕ್ಕೆ ಟಾಂಗ್ ನೀಡಿರುವ ಜಮೀರ್ ಡಿ.ಕೆ.ಶಿವಕುಮಾರ್ ಹೇಳಿಕೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆ ಮೇಲೂ ED ದಾಳಿ ಆಗಿತ್ತು. ಹಾಗಾದರೆ ಡಿಕೆಶಿಗೂ ಐಎಂಎಗೂ ಸಂಬಂಧ ಇತ್ತಾ? ಎಂದು ಡಿ.ಕೆ.ಶಿವಕುಮಾರ್‌ಗೆ ಜಮೀರ್ ಪ್ರಶ್ನೆ ಮಾಡಿದ್ದಾರೆ.
ಹೆಚ್‌ಡಿ ಕುಮಾರಸ್ವಾಮಿ ಮೇಲೆ ಜಮೀರ್ ಆರೋಪ
ನನ್ನ ಬೆಳವಣಿಗೆ ಸಹಿಸಲಾಗದೆ ದಾಳಿ ಮಾಡಿಸಿದ್ದಾರೆ. ನಾನು ಈ ಹಿಂದೆ ಇದ್ದ ಪಕ್ಷದವರೇ ದಾಳಿ ಮಾಡಿಸಿದ್ದಾರೆ ಎಂದು ಟಿವಿ9ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಈ ಮಟ್ಟಕ್ಕೆ ಬೆಳೆಯುತ್ತೇನೆಂದು ಅವರು ನಿರೀಕ್ಷಿಸಿರಲಿಲ್ಲ. ಅವಱರು ಎಂದು ನಾನು ಹೆಸರು ಹೇಳಲು ಹೋಗಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.
ನಾನು ರಾಜಕೀಯವಾಗಿ ಬೆಳೆಯಬಾರದೆಂದು ದಾಳಿ ನಡೆಸಿದ್ದಾರೆ. ಅವರೊಬ್ಬರೇ ಬೆಳೆಯಬೇಕು, ಅವರೊಬ್ಬರೇ ಮನೆ ಕಟ್ಟಬೇಕು. ನನ್ನನ್ನು ವೀಕ್ ಮಾಡಬೇಕೆಂದು ED ದಾಳಿ ಮಾಡಿಸಿದ್ದಾರೆ. ಆದರೆ ಈ ದಾಳಿಯಿಂದ ನಾನು ಇನ್ನಷ್ಟು ಬಲಿಷ್ಠನಾಗಿದ್ದೇನೆ. ED ದಾಳಿ ಎದುರಿಸುವ ಶಕ್ತಿ ನನಗಿದೆ. ನನ್ನ ಜೀವನದಲ್ಲಿ ಯಾರಿಗೂ ಹೆದರಲ್ಲ, ಭಯ ಇಲ್ಲವೇ ಇಲ್ಲ. ರಾಜಕೀಯವಾಗಿಯೂ ಮುಂದಿನ ದಿನಗಳಲ್ಲಿ ಎದುರಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ರು.
ಇದನ್ನೂ ಓದಿ: Zameer Ahmed Khan: ಶಾಸಕ ಜಮೀರ್ ಮನೆ ಮೇಲೆ ಇ.ಡಿ. ರೇಡ್ ಆಗಿದ್ದೇಕೆ? ಹೆಚ್‌ಡಿ ಕುಮಾರಸ್ವಾಮಿ ಮೇಲೆ ಜಮೀರ್ ಅನುಮಾನ?
Published On - 1:00 pm, Mon, 9 August 21