ಬೆಂಗಳೂರು: ನಗರದಲ್ಲಿ ಸೇಂಟ್ ಮಾರ್ಥಾಸ್ ಆಸ್ಪತ್ರೆ (Saint Marthas Hospital) ಬಳಿ ನಿರ್ಮಾಣ ಹಂತ ಕಟ್ಟಡದ ರೂಫ್ ಟಾಪ್ (Roof Top) ಕುಸಿತವಾಗಿ ಕಾರ್ಮಿಕರು ಗಾಯಗೊಂಡಿದ್ದಾರೆ. ಕುಸಿಯುವ ಶಬ್ದ ಕೇಳಿ ಬರುತ್ತಿದ್ದಂತೆ ಮೂವರು ಕಾರ್ಮಿಕರು ಹೊರಗೆ ಓಡಿ ಬಂದಿದ್ದಾರೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೇಲ್ಚಾವಣಿಯಲ್ಲಿ ಇಬ್ಬರು ಕಾರ್ಮಿಕರಾದ ರಫಿಸಾಬ್, ಬಸವರಾಜು ಸಿಲುಕಿದ್ದಾರೆ. ಕಾರ್ಮಿಕರ ರಕ್ಷಣೆಗಾಗಿ ಅಗ್ನಿಶಾಮಕ ದಳ, ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಡಿಸಿಪಿ ಶರಣಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮೂವರನ್ನು ರಕ್ಷಿಸಲಾಗಿದೆ. ಮೊಯಿದ್ದೀನ್, ಚಾಂದ್ ಪಾಷಾ, ರಫೀಸಾಬ್ ರಕ್ಷಣೆ ಮಾಡಲಾಗಿದೆ. ಮತ್ತೊಬ್ಬರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದರು.
ಕುಟುಂಬಸ್ಥರ ಆಕ್ರಂದನ:
ಸದ್ಯ ಅವಶೇಷದಡಿ ಸಿಲುಕಿರುವ ರಫಿಸಾಬ್ ಅಕ್ಕ ಮುಮ್ತಾಜ್ ಕಣ್ಣೀರು ಹಾಕುತ್ತಿದ್ದಾರೆ. ರಫಿಗೆ ಮದುವೆ ಆಗಿ 7 ವರ್ಷ ಆಗಿದೆ. ಮದುವೆ ಆಗಿ 9 ತಿಂಗಳ ಮಗು ಇದೆ. ಮಡಿವಾಳದಲ್ಲಿ ಗಂಡ, ಹೆಂಡತಿ, ಮಗು ಇದ್ದರು. ಬೆಳಗ್ಗೆ 5 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದಾರೆ. ಈಗ ಹೀಗಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ಕಳಪೆ ಕಾಮಗಾರಿ ಕಾರಣ:
ಕಳಪೆ ಕಾಮಗಾರಿಯಿಂದಲೇ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಸಣ್ಣದೊಂದು ಪಿಲ್ಲರ್ ಹಾಕಿ ಅದರ ಮೇಲೆ ಗ್ರಿಲ್ ಹಾಕಿದ್ದರು. ಅತಿಯಾದ ಭಾರದಿಂದ ಕಟ್ಟಡದ ಮೇಲ್ಚಾವಣಿ ಕುಸಿದುಬಿದ್ದಿದೆ.
ಇದನ್ನೂ ಓದಿ: Railway Recruitment 2022: SSLC ಪಾಸಾದವರಿಗೆ ಸುರ್ವಣಾವಕಾಶ: ರೈಲ್ವೆಯಲ್ಲಿದೆ ಉದ್ಯೋಗಾವಕಾಶ
ಪ್ರಕರಣದ ಬಗ್ಗೆ ಮಾತನಾಡಿದ ಸೆಂಟ್ ಮಾರ್ಥಸ್ ಆಸ್ಪತ್ರೆ ಪಿಆರ್ಓ ಆ್ಯಂಟೊ ಡಿಯೋಲ್, ಬೆಳಗ್ಗೆ 6.20 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ತಿಂಗಳಿನಿಂದ ಮೇಲ್ಚಾವಣಿ ಕೆಲಸ ನಡೆಯುತ್ತಿತ್ತು. ರಾತ್ರಿ ಸಮಯದಲ್ಲಿ ಕಾಮಗಾರಿ ನಡೆಯುತ್ತಿತ್ತು. ಇಂದು ಕ್ಯೂರಿಂಗ್ ವೇಳೆ ದುರ್ಘಟನೆ ನಡೆದಿದೆ. ನಾಲ್ವರಲ್ಲಿ ಇಬ್ಬರಿಗೆ ಚಿಕ್ಕ ಪುಟ್ಟ ಗಾಯವಾಗಿದೆ, ಉಳಿದ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಸದ್ಯ ಆ ಇಬ್ಬರಿಗೂ ಚಿಕಿತ್ಸೆ ಮುಂದುವರೆದಿದೆ. ಘಟನೆಗೆ ಕಾರಣ ಏನು ಅನ್ನೋದು ನಮಗೂ ಗೊತ್ತಿಲ್ಲ. ಹೊರಗಿನವರಿಗೆ ಕಂಟ್ರಾಕ್ಟ್ ಕೊಟ್ಟಿದ್ದೆವು. ಸಂಬಂಧಿಸಿದ ಇಂಜಿನಿಯರ್, ಕಂಟ್ರಾಕ್ಟರ್ ಏನ್ ಹೇಳುತ್ತಾರೆ ನೊಡಬೇಕು ಎಂದರು.
ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಪ್ರತ್ಯಕ್ಷದರ್ಶಿ ರಾಜಪಕ್ಷ ಪ್ರತಿಕ್ರಿಯೆ ನೀಡಿ, ಬೆಳಗ್ಗೆ ನಾವು ಐದು ಜನ ಕೆಲಸಕ್ಕೆ ಬಂದಿದ್ದೆವು. ಮೊಯಿದ್ದೀನ್, ಚಾಂದ್ ಪಾಷ, ರಫಿಸಾಬ್, ಬಸವರಾಜ ಸೇರಿ ಐವರು ಬಂದಿದ್ದೆವು. ಆ ನಾಲ್ಕು ಜನ ಸಿಮೆಂಟ್ ಮೂಟೆ ಹೊತ್ತು ಮೇಲೆ ಹೋಗುತ್ತಿದ್ದರು. ನಾನು ಕೆಳಗಿನಿಂದ ಸಿಮೆಂಟ್ ಮೂಟೆ ಹೊರಿಸುತ್ತಿದ್ದೆ. 16ನೇ ಮೂಟೆ ಕೊಂಡೊಯ್ಯುವಾಗ ಘಟನೆ ನಡೆದಿದೆ. ನಾನು ಆ ಕೂಡಲೇ ಹೊರಗೆ ಓಡಿ ಬಂದೆ ಎಂದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:16 am, Tue, 31 May 22