Corona Meet: ಕರ್ನಾಟಕದಲ್ಲಿ ಕೊರೊನಾ ನಿರ್ವಹಣೆಗೆ ಇಂದು ಮಾರ್ಗಸೂಚಿ ಬಿಡುಗಡೆ ಸಾಧ್ಯತೆ, ರಾಜ್ಯ ಸರ್ಕಾರದಿಂದ ಮಹತ್ವದ ಸಭೆ
ಇಂದು ನಡೆಯುವ ಸಭೆಯ ಬಗ್ಗೆ, ಹೊರಬೀಳಬಹುದಾದ ನಿರ್ಬಂಧ ಆದೇಶಗಳ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಕುತೂಹಲ ವ್ಯಕ್ತವಾಗಿದೆ.
ಬೆಂಗಳೂರು / ಬೆಳಗಾವಿ: ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವ್ಯಾಪಕವಾಗಿ ಕೊವಿಡ್ (Covid-19) ಹರಡುತ್ತಿರುವುದು ಭಾರತದ ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿಯೂ (Bengaluru) ತಲ್ಲಣ ಮೂಡಿಸಿದೆ. ಒಂದೆಡೆ ಕೊವಿಡ್ ಹರಡುವಿಕೆಯ ಆರ್ಥಿಕ ಪರಿಣಾಮಗಳ ಬಗ್ಗೆ ಚರ್ಚೆ ಆರಂಭವಾಗಿದ್ದರೆ, ಮತ್ತೊಂದೆಡೆ ಸೋಂಕು ಹರಡದಂತೆ ತಡೆಯುವುದು ಹೇಗೆ ಎಂಬ ಚಿಂತನಮಂಥನಗಳು ನಡೆಯುತ್ತಿವೆ. ರಾಜ್ಯದಲ್ಲಿ ಮಾರ್ಗಸೂಚಿ ಹೊರಡಿಸುವ ಸಂಬಂಧ ಮಹತ್ವದ ಸಭೆ ನಡೆಯುವ ಬಗ್ಗೆ ಕಳೆದ ಎರಡು ಮೂರು ದಿನಗಳಿಂದ ಕೇಳಿಬರುತ್ತಿದೆ. ಆದರೆ ಈವರೆಗೆ ಅಂಥದ್ದೊಂದು ಸಭೆ ನಡೆಯಲಿಲ್ಲ. ವರ್ಷಾಂತ್ಯ, ವಾರಾಂತ್ಯ ಹಿನ್ನೆಲೆಯಲ್ಲಿ ಸಾಕಷ್ಟು ಸಿಬ್ಬಂದಿ ರಜೆ ಇದ್ದಾರೆ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವರು ಬೆಳಗಾವಿಯಲ್ಲಿಯೇ ಇದ್ದಾರೆ. ಹೀಗಾಗಿ ಸೋಮವಾರ (ಡಿ 26) ಸಭೆ ನಡೆಯಬಹುದು ಎಂದು ಹೇಳಲಾಗಿತ್ತು. ಇಂದು ನಡೆಯುವ ಸಭೆಯ ಬಗ್ಗೆ, ಹೊರಬೀಳಬಹುದಾದ ನಿರ್ಬಂಧ ಆದೇಶಗಳ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಕುತೂಹಲ ವ್ಯಕ್ತವಾಗಿದೆ.
ಕೊರೊನಾ ನಿರ್ವಹಣೆ ಕುರಿತು ಇಂದು ವಿಪತ್ತು ನಿರ್ವಹಣಾ ಇಲಾಖೆಯ ಸಚಿವರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ವಿಸ್ತೃತ ಚರ್ಚೆಯ ನಂತರ ಜನಸಂದಣಿ ಹೆಚ್ಚಾಗಿರುವ ಬೆಂಗಳೂರು ಮಹಾನಗರ ಹಾಗೂ ಸಮಗ್ರ ಕರ್ನಾಟಕಕ್ಕೆ ಎರಡು ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆಯಿದೆ. ವಿದೇಶಗಳಲ್ಲಿ ಕೊರೊನಾ ಪಿಡುಗಿನ ಸ್ಥಿತಿಗತಿ ಮತ್ತು ಪರಿಣಾಮಗಳ ಬಗ್ಗೆ ಈಗಾಗಲೇ ಸಚಿವರು ಮತ್ತು ಉನ್ನತ ಅಧಿಕಾರಿಗಳು ವರದಿ ಸಂಗ್ರಹಿಸಿದ್ದಾರೆ. ಈ ವರದಿಯೊಂದಿಗೆ ರಾಜ್ಯದ ಸ್ಥಿತಿಗತಿ ಪರಿಶೀಲಿಸಿ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಮಾಸ್ಕ್ ಕಡ್ಡಾಯಗೊಳಿಸುವುದುರಿಂದ ಕೊವಿಡ್ ಹರಡುವ ಸಾಧ್ಯತೆ ಶೇ 90ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಸಲಹೆ ಮಾಡಿದ್ದಾರೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಹೆಚ್ಚು ಜನರು ಒಂದೆಡೆ ಸೇರಲಿದ್ದಾರೆ. ಹೀಗಾಗಿ ಇದು ಕೊರೊನಾ ಹರಡಲು ಪೂರಕ ವಾತಾವರಣ ನಿರ್ಮಿಸಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡುವ ಬಗ್ಗೆ ಸರ್ಕಾರ ತನ್ನ ಚಿಂತನೆಯನ್ನು ಈಗಾಗಲೇ ಪ್ರಕಟಿಸಿದೆ.
ಸಾರ್ವಜನಿಕರು ಸೇರುವ ಸ್ಥಳಗಳಾದ ಪಬ್, ಬಾರ್, ಮಾಲ್, ಕ್ಲಬ್, ಮೆಟ್ರೊ, ರೈಲು, ಬಸ್, ಹೋಟೆಲ್, ಚಿತ್ರಮಂದಿರಗಳ ಪ್ರವೇಶಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಫಾಲನೆ ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಈಗಾಗಲೇ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಿಲ್ಲ. ಸಾಮಾಜಿಕ ಅಂತರ ಪಾಲನೆಗೆ ಯಾವುದೇ ನಿಯಮ ಪ್ರಕಟಿಸಿಲ್ಲ. ಜನಸಂದಣಿಗೆ ನಿರ್ಬಂಧ ಹೇರಿಲ್ಲ. ಬೆಂಗಳೂರಿಗೆ ಹೊರಡಿಸುವ ಮಾರ್ಗಸೂಚಿಯಲ್ಲಿಯೂ ಮಾಸ್ಕ್ ಹೊರತಾಗಿ ಬೇರೆ ನಿಯಮಗಳ ಮಾರ್ಗಸೂಚಿ ಬಿಡುಗಡೆ ಮಾಡುವ ಬಗ್ಗೆ ಅನುಮಾನಗಳಿವೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಸರ್ಕಾರಿ ನೌಕರರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸುವ ಬಗ್ಗೆ ಮತ್ತು ಕನಿಷ್ಠ ಪ್ರಮಾಣದಲ್ಲಿಯಾದರೂ ಕೊವಿಡ್ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ.
ಹೊಸ ವರ್ಷಾಚರಣೆ ಮತ್ತು ಬೆಂಗಳೂರಿಗೆ ಏನು ನಿಯಮ?
ಬೆಂಗಳೂರು ನಗರ ಹಾಗೂ ಗ್ರಾಮಂತರ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆಯಿದೆ. ಈ ಪೈಕಿ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸುವುದರೊಂದಿಗೆ ಸಾಮಾಜಿಕ ಅಂತರ ಕಾಪಾಡಲು ಸೂಚನೆ, ಹೆಚ್ಚಿನ ಜನಸಂದಣಿಗೆ ನಿರ್ಬಂಧ ವಿಧಿಸುವ ಸಾಧ್ಯತೆಯಿದೆ. ಥಿಯೇಟರ್, ಪಾರ್ಕ್, ದೇವಸ್ಥಾನ, ಮಾಲ್, ಕ್ಲಬ್, ಹೋಟೆಲ್, ಮೆಟ್ರೊ, ಬಸ್, ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು.
ಹೊಸ ವರ್ಷಾಚರಣೆಗೆ ಷರತ್ತುಬದ್ಧ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಸಂಭ್ರಮಾಚರಣೆಯ ಸಮಯಾವಕಾಶ ಕಡಿಮೆ ಮಾಡುವ ಸಾಧ್ಯತೆಯಿದೆ. ಕೊವಿಡ್ ನಿರ್ಬಂಧಗಳೊಂದಿಗೆ ರಾತ್ರಿ 1 ಗಂಟೆಯವರೆಗೂ ಹೊಸ ವರ್ಷಾಚರಣೆಗೆ ಅವಕಾಶ ಸಿಗಬಹುದು. ಹೊಟೆಲ್, ಮಾಲ್, ಚಿತ್ರಮಂದಿರ, ದೇವಸ್ಥಾನ ಸೇರಿದಂತೆ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಸ್ಯಾನಿಟೈಜರ್ ಅಳವಡಿಸಲು ಸರ್ಕಾರ ಸೂಚನೆ ನೀಡಬಹುದು.
ಸಭೆಯಲ್ಲಿ ಯಾರೆಲ್ಲಾ ಭಾಗಿ?
ಬೆಳಗಾವಿಯ ಸುವರ್ಣಸೌಧದಲ್ಲಿ ಕೊವಿಡ್ ನಿಯಂತ್ರಣಕ್ಕಾಗಿ ನಡೆಯಲಿರುವ ಮಹತ್ವದ ಸಭೆಯ ಅಧ್ಯಕ್ಷತೆಯನ್ನು ಕಂದಾಯ ಸಚಿವ ಆರ್.ಅಶೋಕ್ ವಹಿಸಲಿದ್ದಾರೆ. ಸಭೆಯಲ್ಲಿ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ವಿದೇಶಗಳಲ್ಲಿ ಕೊರೊನಾ ರೂಪಾಂತರಿ ವೈರಸ್ ಪತ್ತೆ ಬೆನ್ನಲ್ಲೇ ಕರ್ನಾಟಕದಲ್ಲಿ ಹೀಗಿದೆ ನೋಡಿ ಸಿದ್ದತೆ
ಆರೋಗ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:28 am, Mon, 26 December 22