BMTC Guidelines: ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಲು ಗುರುತಿನ ಚೀಟಿ ಕಡ್ಡಾಯ: ಹೊಸ ಮಾರ್ಗಸೂಚಿ ಪ್ರಕಟ
ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಜೊತೆಗೆ ಇರಿಸಿಕೊಂಡಿರಬೇಕು. ಬಸ್ನಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ನಿಯಮಾವಳಿಗಳಿಗೆ ಅನುಗುಣವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ. ಕರ್ಫ್ಯೂ ವೇಳೆ ಬಸ್ಗಳಲ್ಲಿ ಯಾರೆಲ್ಲಾ ಸಂಚರಿಸಬಹುದು? ಯಾರಿಗೆ ಅವಕಾಶವಿಲ್ಲ ಎಂಬುದನ್ನು ಮಾರ್ಗಸೂಚಿಯು ಸ್ಪಷ್ಟಪಡಿಸಿದೆ. ವಾರಾಂತ್ಯ ಕರ್ಫ್ಯೂ ಇರುವ ದಿನಗಳಲ್ಲಿಯೂ ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಬಸ್‌ಗಳ ಸಂಚಾರ ಇರುತ್ತದೆ. ಅಗತ್ಯ ಸೇವೆಗಳಡಿ ಕೆಲಸ ಮಾಡುವ ಸಿಬ್ಬಂದಿಗೆ ಮಾತ್ರ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ.
ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಾರಿಗೆ ನಿಗಮದ ಬಸ್ಗಳಲ್ಲಿ ಸಂಚರಿಸಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಸರ್ಕಾರದ ಆದೇಶದ ಅನ್ವಯ ಅನುಮತಿ ಪಡೆದ ಇತರ ವಲಯಗಳ ಸಿಬ್ಬಂದಿಗೂ ಪ್ರಯಾಣಕ್ಕೆ ಅವಕಾಶವಿದೆ. ಪ್ರಯಾಣದ ವೇಳೆ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತಮ್ಮೊಡನೆ ಇರಿಸಿಕೊಂಡಿರಬೇಕು. ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೂ ಪ್ರವೇಶ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಬಸ್ನಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆಸ್ಪತ್ರೆಗೆ ತರಳುವ ರೋಗಿ ಮತ್ತು ಸಹಾಯಕರ ಪ್ರಯಾಣಕ್ಕೆ ಅವಕಾಶವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ, ಸರ್ಕಾರಿ, ಖಾಸಗಿ ಬ್ಯಾಂಕ್, ವಿಮಾ ಇಲಾಖೆ ಸಿಬ್ಬಂದಿಗೂ ಅವಕಾಶವಿದೆ.
‘ವೀಕೆಂಡ್ ಕರ್ಫ್ಯೂ ವೇಳೆ ಜನಸಾಮಾನ್ಯರಿಗೆ ಬಿಎಂಟಿಸಿ ಬಸ್‌ಗಳ ಸಂಚಾರ ಇರುವುದಿಲ್ಲ. ಅಗತ್ಯ ಸೇವೆಗಳಿಗೆ ಮಾತ್ರ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ. ಶನಿವಾರ, ಭಾನುವಾರ ಪ್ರಯಾಣಕ್ಕೆ ಬಿಎಂಟಿಸಿ ಬಸ್ ಸಿಗುವುದಿಲ್ಲ. ತುರ್ತು, ಅಗತ್ಯ ಸೇವೆಗಳಿಗೆ ಮಾತ್ರ ವಿಶೇಷ ಬಸ್‌ಗಳ ಸೇವೆ ಇರಲಿದೆ’ ಎಂದು ಟಿವಿ9 ಕನ್ನಡ ಡಿಜಿಟಲ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ಮಾಹಿತಿ ನೀಡಿದರು.
ನಮ್ಮ ಮೆಟ್ರೋ: ವೀಕೆಂಡ್ ಕರ್ಫ್ಯೂ ವೇಳೆ ನಮ್ಮ ಮೆಟ್ರೋ ಸಂಚಾರಕ್ಕೆ ಅಡ್ಡಿಯಿಲ್ಲ. ಶನಿವಾರ ಮತ್ತು ಭಾನುವಾರ ಎಂದಿನಂತೆ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ. ನಮ್ಮ ಮೆಟ್ರೋ ಹಸಿರು, ನೇರಳೆ ಮಾರ್ಗದಲ್ಲಿ ಯಾವುದೇ ಬದಲಾವಣೆಯಿಲ್ಲ. ನಮ್ಮ ಮೆಟ್ರೋದಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ ಇರಲಿದೆ.
ಕೆಎಸ್‌ಆರ್‌ಟಿಸಿ ಬಸ್ ಸಂಚಾರ: ಮುಂದಿನ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಇರಲಿದ್ದು, ಈ ವೇಳೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ (Bus) ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಮಾಜಿ ಸಚಿವ ಸುರೇಶ್ ಕುಮಾರ್ ಬಿಎಂಟಿಸಿ ಬಸ್ನಲ್ಲಿ ಸಂಚಾರ; ಸರಳತೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಇದನ್ನೂ ಓದಿ: ಚಿತ್ರಮಂದಿರ, ಮಾಲ್, ಬಾರ್, ಪಬ್ಗಳಿಗೆ 50:50 ನಿಯಮ ಜಾರಿ; ಕೊರೊನಾ ಮಾರ್ಗಸೂಚಿಯ ವಿವರ ಇಲ್ಲಿದೆ
Published On - 3:15 pm, Wed, 5 January 22