
ಬೆಂಗಳೂರು, ಮೇ 30: ಈ ಹಿಂದೆ 2020 ರ ಕೊನೆಯಲ್ಲಿ ದೇಶ ಪ್ರವೇಶಿಸಿದ್ದ ಕೊರೊನಾ ವೈರಸ್ (Coronavirus) ಮಹಾಮಾರಿ ಅದೆಷ್ಟೋ ಜನರನ್ನು ಬಲಿ ಪಡೆದಿತ್ತು. ಅದೆಷ್ಟೋ ಜನರನ್ನು ಅನಾಥರನ್ನಾಗಿಸಿತ್ತು. ಇದೀಗ ಕೋವಿಡ್ ಸೋಂಕು ಕರ್ನಾಟಕದಲ್ಲಿ ಮತ್ತೆ ಅತಂಕಕ್ಕೆ ಕಾರಣವಾಗಿದೆ. ಕೊರೊನಾ ವೈರಸ್ನ ಒಮಿಕ್ರಾನ್ ಪ್ರಬೇಧದ ಉಪ ತಳಿಯಾದ ಜೆಎನ್.1 ಆತಂಕ ಈಗ ಕರ್ನಾಟಕ ಆರೋಗ್ಯ ಇಲಾಖೆಯ ತಲೆ ಕೆಡಿಸುತ್ತಿದೆ. ಅದರಲ್ಲೂ ಕೋವಿಡ್ ಸೋಂಕಿಗೆ ರಾಜಧಾನಿ ಬೆಂಗಳೂರೇ (Bengaluru) ಹಾಟ್ಸ್ಪಾಟ್ ಆಗುತ್ತಿರುವುದು ನಿದ್ದೆಗೆಡಿಸಿದೆ.
ರಾಜ್ಯದಲ್ಲಿ ದಾಖಲಾಗುವ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇ 75 ಕ್ಕಿಂತ ಹಚ್ಚು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ. ಸಕ್ರಿಯ ಪ್ರಕಣಗಳಲ್ಲಿಯೂ ಬೆಂಗಳೂರೇ ಸಿಂಹಪಾಲು ಹೊಂದಿದೆ. ಕಳೆದ 20 ದಿನಗಳಲ್ಲಿ ರಾಜ್ಯದಲ್ಲಿ 171ಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, ಪ್ರತಿ ದಿನ 36 ಕ್ಕೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ ಬೆಂಗಳೂರಿನಲ್ಲಿಯೇ 25 ಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ರಾಜಧಾನಿಯಲ್ಲಿಯೇ ಗರಿಷ್ಠ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿಗರು ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.
ಗರ್ಭಿಣಿಯರು , ಮಕ್ಕಳು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಹಾಗೂ ವೃದ್ಧರು ಕೊಂಚ ಎಚ್ಚರವಹಿಸಬೇಕಿದೆ. ಸ್ವಯಂ ಪ್ರೇರಿತರಾಗಿ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಪತ್ತಯಾಗುತ್ತಿರುವ ಕಾರಣ ನಗರದ ಕೆಲವು ಆಸ್ಪತ್ರೆಗಳಲ್ಲಿ ಫಿವರ್ ಕ್ಲಿನಿಕ್ ಕೂಡಾ ಆರಂಭ ಮಾಡಲಾಗಿದೆ. ಶೀತ, ಕೆಮ್ಮು, ಜ್ವರ, ಮೈಕೈ ನೋವು ಇರುವವರಿಗೆ ಫಿವರ್ ಕ್ಲಿನಿಕಗಳಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಮಾಕ್ ಡ್ರಿಲ್ ಮಾಡಿಕೊಂಡು ಕೋವಿಡ್ ಎದುರಿಸಲು ಆಸ್ಪತ್ರೆಗಳಲ್ಲಿ ಸಿದ್ಧತೆ ಶುರು ಮಾಡಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಕೊರೋನಾ ಮಧ್ಯೆ ಡೆಂಘಿ, ಚಿಕುನ್ ಗುನ್ಯಾ ಟೆನ್ಷನ್: ಸೈಲೆಂಟ್ ಆಗಿ ಹೆಚ್ಚಳವಾಗುತ್ತಿವೆ ಪ್ರಕರಣಗಳು
ಒಟ್ಟಿನಲ್ಲಿ, ಮತ್ತೆ ಕೋವಿಡ್ ಆತಂಕ ಹೆಚ್ಚಾಗಿದೆ. ಜನರು ಮತ್ತಷ್ಟು ದಿನಗಳ ಕಾಲ ಆರೋಗ್ಯದ ಕಡೆ ಗಮನ ಕೊಡಬೇಕಿದೆ.