ಬೆಂಗಳೂರು, ಆ.13: ಭೋವಿ ಅಭಿವೃದ್ಧಿ ನಿಗಮ(Bhovi Development Corporation)ದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಇಂದು(ಮಂಗಳವಾರ) ವಿಶ್ವೇಶ್ವರಯ್ಯ ಟವರ್‌ನಲ್ಲಿರುವ ನಿಗಮದ ಕಚೇರಿ ಮೇಲೆ ಸಿಐಡಿ(CID) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ 3 ಗಂಟೆ ಕಾಲ ದಾಖಲೆಗಳನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಕೆಲ ಮಹತ್ವದ ಕಡತಗಳನ್ನು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ.
2021-22ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದ್ದು, ಲಕ್ಷಾಂತರ ರೂ. ಸಾಲಕೊಡಿಸುವುದಾಗಿ ಸಾರ್ವಜನಿಕ ದಾಖಲೆ ದುರ್ಬಳಕೆ ಜೊತೆಗೆ 10 ಕೋಟಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ. ಪ್ರಕರಣ ಮುಚ್ಚಿಹಾಕಲು ನಿಗಮದ ಅಧೀಕ್ಷಕ ಸುಬ್ಬಪ್ಪ, ‘ಭೋವಿ ಅಭಿವೃದ್ಧಿ ನಿಗಮದ ಲೆಕ್ಕಪತ್ರ ಕಡತ, ನಗದು ಪುಸ್ತಕಗಳು, ಯೋಜನಾ ಕಡತ, ಬ್ಯಾಂಕ್ ಚೆಕ್ ಸೇರಿ 200ಕ್ಕೂ ಹೆಚ್ಚು ಕಡತಗಳನ್ನು ಕಳವು ಮಾಡಿದ್ದ ಕುರಿತು ಬೆಂಗಳೂರು, ಬೆಂಗಳೂರು ಗ್ರಾ., ಕಲಬುರಗಿ ಜಿಲ್ಲೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಸಿಐಡಿ ಅಧಿಕಾರಿಗಳು ಭೋವಿ ನಿಗಮದ ಅಧೀಕ್ಷಕ ಸುಬ್ಬಪ್ಪನನ್ನ ಬಂಧಿಸಿದ್ದರು.
ಇದನ್ನೂ ಓದಿ:ಬಿಜೆಪಿ ಅವಧಿಯಲ್ಲಿನ 21 ಹಗರಣ ಪಟ್ಟಿ ಬಿಚ್ಚಿಟ್ಟ ಸಿದ್ದರಾಮಯ್ಯ: ಯಾವುವು? ಇಲ್ಲಿದೆ ನೋಡಿ
ಇತ್ತೀಚೆಗೆ ವಿಧಾನಸಭೆಯಲ್ಲಿ ಸಿಎಂ (Siddaramaiah) ಮಾತನಾಡುವ ವೇಳೆ ಬೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಸಂಬಂಧ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೆಸರನ್ನು ಸಿದ್ದರಾಮಯ್ಯ ಉಲ್ಲೇಖಿಸಿದ್ದರು. ಇದರಿಂದ ರೊಚ್ಚಿಗೆದಿದ್ದ ಶ್ರೀನಿವಾಸ ಪೂಜಾರಿ, ‘ಸಿದ್ದರಾಮಯ್ಯಗೆ ಪತ್ರ ಬರೆದು ಅವ್ಯವಹಾರ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು. ಒಂದು ವೇಳೆ ಸಿಬಿಐ ತನಿಖೆಗೆ ಒಪ್ಪಿಸಲು ವಿಳಂಬ ಮಾಡಿದರೆ ವಿಧಾನಸೌಧದಲ್ಲಿ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:58 pm, Tue, 13 August 24