ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 61 ವರ್ಷದ ವ್ಯಕ್ತಿಯಿಂದ 2.07 ಕೋಟಿ ರೂ. ಸುಲಿಗೆ

ಬೆಂಗಳೂರಿನ 61 ವರ್ಷದ ವ್ಯಕ್ತಿಯೊಬ್ಬರು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 2.07 ಕೋಟಿ ರೂ. ಕಳೆದುಕೊಂಡಿದ್ದಾರೆ. ವಂಚಕರು ಎನ್‌ಐಎ ಮತ್ತು ಇಡಿ ಅಧಿಕಾರಿಗಳೆಂದು ನಟಿಸಿ, ಸಿಮ್ ಕಾರ್ಡ್ ದುರುಪಯೋಗ ಮತ್ತು ಡ್ರಗ್ ಟ್ರಾಫಿಕಿಂಗ್ ಆರೋಪದಡಿ ಬೆದರಿಸಿ, ಪರಿಶೀಲನೆಯ ಹೆಸರಿನಲ್ಲಿ ಹಣ ವರ್ಗಾಯಿಸಲು ಒತ್ತಾಯಿಸಿದ್ದಾರೆ. ಇಂತಹ ಸೈಬರ್ ವಂಚನೆಗಳಿಂದ ಎಚ್ಚರದಿಂದಿರಲು ಪೊಲೀಸರು ಜನರಿಗೆ ಸೂಚಿಸಿದ್ದಾರೆ.

ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 61 ವರ್ಷದ ವ್ಯಕ್ತಿಯಿಂದ 2.07 ಕೋಟಿ ರೂ. ಸುಲಿಗೆ
ಸಾಂದರ್ಭಿಕ ಚಿತ್ರ
Image Credit source: shutterstock.com

Updated on: Apr 26, 2026 | 8:58 AM

ಬೆಂಗಳೂರು, ಏಪ್ರಿಲ್​​ 26: ಪೊಲೀಸರಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವಂಚಕರು ಬೀಸುವ ಬಲೆಗೆ ಸಿಲುಕಿ ಹಣ ಕಳೆದುಕೊಳ್ಳುವ ಪ್ರಕರಣಗಳ ಸರಣಿ ರಾಜ್ಯದಲ್ಲಿ ಮುಂದುವರಿದಿದೆ. ಇದೇ ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 61 ವರ್ಷದ ವ್ಯಕ್ತಿಯೋರ್ವರಿಂದ ಆರೋಪಿಗಳು ಕೋಟ್ಯಾಂತರ ಹಣ ಪೀಕಿರುವ ಘಟನೆ ರಾಜ್ಯದಲ್ಲಿ ನಡೆದಿದೆ. ನಿಮ್ಮನ್ನು ಡಿಜಿಟಲ್​​ ಅರೆಸ್ಟ್​​ ಮಾಡಿದ್ದೇವೆ ಎಂದು ಸಂತ್ರಸ್ತ ವ್ಯಕ್ತಿಯನ್ನು ನಂಬಿಸಿದ್ದ ಆರೋಪಿಗಳು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳಂತೆ ನಟನೆ ಮಾಡಿ 2 ಕೋಟಿ ರೂಪಾಯಿಗೂ ಅಧಿಕ ಹಣ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಮಾರ್ಚ್‌ನಲ್ಲಿ ‘ನ್ಯಾಷನಲ್ ಡೇಟಾ ಪ್ರೊಟೆಕ್ಷನ್ ಸೆಂಟರ್’ ಅಧಿಕಾರಿಯೆಂದು ಹೇಳಿಕೊಂಡ ವ್ಯಕ್ತಿಯಿಂದ ಕರೆ ಬಂದಿದೆ. ಮುಂಬೈ ಮೂಲದ ವ್ಯಕ್ತಿಯೊಬ್ಬರು ಸಿಮ್ ಕಾರ್ಡ್ ಪಡೆಯಲು ನಿಮ್ಮ ಗುರುತಿನ ದಾಖಲೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಆ ಸಿಮ್​​ನ ಬೆದರಿಕೆ ಕರೆಗಳು, ಅಸಭ್ಯ ಫೋಟೋ-ವೀಡಿಯೋಗಳ ಕಳುಹಿಸುವಿಕೆ ಹಾಗೂ ಡ್ರಗ್ ಟ್ರಾಫಿಕಿಂಗ್‌ಗೆ ಬಳಸಲಾಗಿದೆ. ಈ ಸಂಬಂಧ ಮುಂಬೈನ ಕೋಲಾಬಾ ಪೊಲೀಸ್ ಠಾಣೆಯಲ್ಲಿ 30-50 ಎಫ್‌ಐಆರ್‌ಗಳು ದಾಖಲಾಗಿವೆ. NIA ಮತ್ತು ED ತನಿಖೆ ನಡೆಸಲಿವೆ ಎಂದು ಹೇಳಿ ಸಂತ್ರಸ್ತನನ್ನು ಬೆದರಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ವ್ಯಕ್ತಿಗೆ 14 ದಿನ ಡಿಜಿಟಲ್ ಅರೆಸ್ಟ್, ₹1.62 ಕೋಟಿ ವಂಚನೆ

ನಂತರ NIA ಮತ್ತು ED ಅಧಿಕಾರಿಗಳಂತೆ ನಟಿಸಿದವರು ಕರೆ ಮಾಡಿ, ಸಂತ್ರಸ್ತ ವ್ಯಕ್ತಿಯ ವೈಯಕ್ತಿಕ ಮಾಹಿತಿ ಸಂಗ್ರಹಿಸಿ, ವಿಲಾಸ್ ರಾವ್ ಪಟೇಲ್ ಎಂಬ ಹೆಸರಿನ ED ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಂದಿಗೆ ಮಾತನಾಡಲು ಸೂಚಿಸಿದ್ದಾರೆ. ವಂಚಕರು ವ್ಯಕ್ತಿಯನ್ನು ಭಯಭೀತಗೊಳಿಸಿ, ಆತಂಕಕಾರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಿ ಪರಿಶೀಲನೆ ಮತ್ತು ಪ್ರಕರಣ ಕ್ಲಿಯರೆನ್ಸ್ ಹೆಸರಿನಲ್ಲಿ ಹಣ ವರ್ಗಾಯಿಸಲು ಒತ್ತಾಯಿಸಿದ್ದಾರೆ. ಅದರಂತೆ ಏಪ್ರಿಲ್ 7ರಿಂದ ಏಪ್ರಿಲ್ 18ರವರೆಗೆ, 61 ವರ್ಷದ ಸಂತ್ರಸ್ತ ವ್ಯಕ್ತಿ RTGS ಮೂಲಕ ಆರೋಪಿಗಳು ಸೂಚಿಸಿರುವ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 2,07,04,600 ವರ್ಗಾಯಿಸಿದ್ದಾರೆ ಎಂಬುದು ಗೊತ್ತಾಗಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us