ಇದೆಂತಾ ಅಭಿಮಾನ; ದರ್ಶನ್ ರೀತಿಯೇ ಇರುತ್ತೀನಿ ಎಂದು ಪತ್ನಿ ಸಾವಿಗೆ ಕಾರಣನಾದ ದಾಸನ ಫ್ಯಾನ್
ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಂಡನಿಗೆ ಕೈ ತುಂಬಾ ಸಂಬಳ. ಹೆಂಡತಿ ಮಗುವನ್ನ ನೋಡಿಕೊಂಡು ಮನೆಯಲ್ಲೇ ಇದ್ದಳು. ಆದ್ರೆ ಆವತ್ತು ಬಾತ್ ರೂಮ್ಗೆ ಹೋದ ಹೆಂಡತಿ ಇದ್ದಕ್ಕಿದ್ದಂತೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಳು. ನೋಡ ನೋಡ್ತಿದ್ದಂತೆ ಆ ಹೆಣ್ಣುಮಗಳು ಬೆಂಕಿಯಲ್ಲಿ ಬೆಂದು ಹೋದಳು. ಆದ್ರೆ ಮನೆಯಲ್ಲೇ ಇದ್ದ ಗಂಡ ಶಾಕ್ ಆಗಿ ಕೂತುಬಿಟ್ಟಿದ್ದ. ಇನ್ಫ್ಯಾಕ್ಟ್ ಹೆಂಡತಿ ಬೆಂಕಿ ಹಚ್ಚಿಕೊಳ್ಳಲು ಕಾರಣನೇ ಗಂಡ. ಗಂಡ ತನ್ನ ಬಾಸ್ ದರ್ಶನ್ ರೀತಿ ಮಾಡ್ತೀನಿ ಅಂತ ಹೋಗಿ ಇವತ್ತು ಹೆಂಡತಿಯ ಸಾವಿಗೆ ಕಾರಣನಾಗಿದ್ದಾನೆ.
ಬೆಂಗಳೂರು, ಸೆ.10: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa), ರೇಣುಕಾಸ್ವಾಮಿ ಕೊಲೆ (Murder) ಕೇಸ್ನಲ್ಲಿ ಜೈಲು ಸೇರಿದ್ದಾರೆ. ಈ ಹಿಂದೆ ಹೆಂಡತಿಯ ಮೇಲೆ ಹಲ್ಲೆ ಮಾಡಿ ಜೈಲಿಗೆ ಹೋಗಿದ್ದ ದರ್ಶನ್ ಈಗ ಮತ್ತೆ ರೇಣುಕಾಸ್ವಾಮಿ ಅನ್ನೋನ ಕೊಲೆ ಮಾಡಿ ಜೈಲಿಗೆ ಹೋಗಿದ್ದಾರೆ. ದರ್ಶನ್ಗೆ ಲಕ್ಷಾಂತರ ಅಭಿಮಾನಿಗಳಿದ್ದು ಅದರಲ್ಲೊಬ್ಬ ಮುರ್ಖ ಅಭಿಮಾನಿ (Darshan Fan) ಇದೀಗ ಹೆಂಡತಿಯ ಸಾವಿಗೆ ಕಾರಣನಾಗಿದ್ದಾನೆ. ಅನುಷಾ ಮೃತ ಮಹಿಳೆ. ಶ್ರೀ ಹರಿ ಆರೋಪಿ ಗಂಡ.
ನಾನು ದರ್ಶನ್ ರೀತಿಯೇ ಇರ್ತೀನಿ ಅಂತ ಹೇಳುತ್ತಿದ್ದ ಶ್ರೀ ಹರಿ ಇದೀಗ ಒಂದು ಸಾವಿಗೆ ಕಾರಣನ್ನಾಗಿದ್ದಾನೆ. ಬಾತ್ ರೂಮ್ಗೆ ಹೋಗಿದ್ದ ಅನುಷಾ ಪೆಟ್ರೋಲ್ ಸುರಿದುಕೊಂಡು ಮೃತಪಟ್ಟಿದ್ದಾರೆ. ಸೆ. 7ರಂದು ಚಿಕಿತ್ಸೆ ಫಲಿಸದೆ ಅನುಷಾ ಮೃತಪಟ್ಟಿದ್ದಾರೆ. ಮೃತ ಅನುಷಾ ತಾಯಿ ತನ್ನ ಅಳಿಯನೇ ತನ್ನ ಮಗಳನ್ನ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ಶ್ರೀ ಹರಿಯನ್ನು ಬಂಧಿಸಿದ್ದಾರೆ.
ಶಿರಸಿ ಮೂಲದ ಶ್ರೀ ಹರಿ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಇನ್ನು ಬಸವನಗುಡಿಯಲ್ಲಿ ಹೆತ್ತವರ ಜೊತೆ ವಾಸವಿದ್ದ ಅನುಷಾಳಿಗೆ ಹೆತ್ತವರು 5 ವರ್ಷದ ಹಿಂದೆಯೇ ಮಗಳಿಗೆ ಮದುವೆ ಮಾಡಬೇಕು ಅಂತ ಹುಡುಗನನ್ನ ಹುಡುಕುವಾಗ ಶ್ರೀಹರಿ ಸಿಕ್ಕಿದ್ದ. ಈ ಶ್ರೀ ಹರಿ ಅನುಷಾಳ ತಾಯಿಯ ಕೆಡೆಯ ಸಂಬಂಧಿ. ಹೇಗೂ ಒಳ್ಳೆ ಕೆಲಸದಲ್ಲಿದ್ದಾನೆ. ಒಳ್ಳೆ ಸಂಬಳ ಅಂತೆಲ್ಲಾ ಅಂದುಕೊಂಡು 5 ವರ್ಷದ ಹಿಂದೆ ಇಬ್ಬರಿಗೂ ಮದುವೆ ಮಾಡಲಾಗಿತ್ತು. ನಂತರ ಹುಳಿಮಾವುವಿನ ಅಕ್ಷಯನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ಫ್ಲಾಟ್ ಖರೀದಿಸಿ ಗಂಡ ಹೆಂಡತಿ ವಾಸವಾಗಿದ್ರು. ಎಲ್ಲವೂ ಚೆನ್ನಾಗೇ ಇತ್ತು. ಎರಡು ವರ್ಷಗಳ ನಂತರ ಮಗು ಕೂಡ ಆಯ್ತು.
ಇದನ್ನೂ ಓದಿ: ದರ್ಶನ್ ಅಲ್ಲ, ರೇಣುಕಾ ಸ್ವಾಮಿ ಕೊಲೆಯಲ್ಲಿ ಪ್ರಮುಖ ಪಾತ್ರ ಇವನದ್ದೇ..
5 ವರ್ಷದ ಹಿಂದೆ ಅನುಷಾಳನ್ನ ಮದುವೆಯಾದ ಹರಿ ಆಕೆಯ ಕೈಗೆ ಒಂದು ಮಗುವನ್ನೂ ಕೊಟ್ಟ. ಆದ್ರೆ ಯಾವತ್ತೂ ಆ ಮಗುವನ್ನ ತಂದೆಯ ರೀತಿ ನೋಡಲೇ ಇಲ್ಲ. ಮಗುವನ್ನ ನೋಡಿಕೊಳ್ಳೋಕೆ ಅಂತಾನೇ ಅನುಷಾ ಹೆತ್ತವರನ್ನ ತನ್ನ ಮನೆಗೆ ಕರೆದುಕೊಂಡು ಬಂದು ಇರಿಸಿಕೊಂಡಿದ್ದಳು.
ದರ್ಶನ್ ಇಬ್ಬರನ್ನು ಮೇಂಟೇನ್ ಮಾಡ್ತಿದ್ದರು, ನಾನೂ ಮಾಡ್ತೀನಿ ಎಂದಿದ್ದ ಶ್ರೀ ಹರಿ
ಮಗುವಾದ ಬಳಿಕ ಅನುಷಾಗೆ ಕಿರುಕುಳ ಶುರು ಆಗಿತ್ತು. ನನಗೆ ಇನ್ನೊಂದು ಅಫೈರ್ ಇದೆ. ಅವಳನ್ನ ನಾನು ಮದುವೆಯಾಗಬೇಕು ಎಂದು ಅನುಷಾಳಿಗೆ ಶ್ರೀ ಹರಿ ಹಿಂಸೆ ಮಾಡುತ್ತಿದ್ದ. ಆದ್ರೆ ಇದಕ್ಕೆ ಅನುಷಾ ಒಪ್ಪಲಿಲ್ಲ. ಆಗ ಈತ ದರ್ಶನ್ ಇಬ್ಬಿಬ್ಬರನ್ನ ಮೇಂಟೇನ್ ಮಾಡ್ತಿಲ್ವಾ? ನಾನು ಹಾಗೇ ಮಾಡ್ತಿನೀ ಎಂದು ಕಿರುಕುಳ ನೀಡುತ್ತಿದ್ದ. ಜೊತೆಗೆ ಕೆಲಸ ಮಾಡ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದಕ್ಕೆ ಆತನನ್ನ ಕಂಪನಿಯಿಂದ ಹೊರಹಾಕಿದ್ದರು. ಆದ್ರೆ ಯಾವಾಗ ಕೆಲಸದಿಂದ ಹೊರದಬ್ಬಿಸಿಕೊಂಡು ಮನೆಯಲ್ಲಿ ಕೂತನೋ ಆಗ ಈತನಿಂದ ಹೆಂಡತಿಗೆ ಮತ್ತಷ್ಟು ಟಾರ್ಚರ್ ಹೆಚ್ಚಾಗಿತ್ತು.
ಪ್ರತಿ ನಿತ್ಯ ನೀನ್ ನನಗೆ ಬೇಡ. ಬಿಟ್ಟು ಹೋಗು. ನಾನು ಇನ್ನೊಂದು ಮದುವೆಯಾಗಬೇಕು ಇಷ್ಟೇ ಆತ ಹೇಳುತ್ತಿದ್ದನಂತೆ. ಅಷ್ಟೇ ಅಲ್ಲಾ ಅಶ್ಲೀಲ ವಿಡಿಯೋ ತೋರಿಸಿ ಇದರಂತೆ ಸೆಕ್ಸ್ ಗೆ ಸಹಕರಿಸು ಅಂತಿದ್ನಂತೆ. ಒಪ್ಪದಿದ್ದಕ್ಕೆ ಬೇರೆಯವಳ ಬಳಿ ಹೋಗ್ತೀನಿ. ಅವಳು ಒಳ್ಳೆ ಸುಖ ಕೊಡ್ತಾಳೆ ಎಂದಿದ್ದನಂತೆ. ಇದರಿಂದ ಬೇಸತ್ತ ಅನುಷಾ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗಂಡನಿಗೆ ವಿಡಿಯೋ ಕಾಲ್ ಮಾಡಿ ಬೆಂಕಿ ಹಚ್ಚಿಕೊಂಡ ಅನುಷಾ
ಸೆ. 5ರಂದು ಗೌರಿ ಹಬ್ಬಕ್ಕೆ ಅನುಷಾ ತಯಾರಿ ಮಾಡಿಕೊಳ್ತಿದ್ದಳು. ಈ ವೇಳೆ ಶ್ರೀ ಹರಿ ಹಾಗೂ ಅನುಷಾ ನಡುವೆ ಜಗಳ ಶುರುವಾಗಿತ್ತು. ಇದರಿಂದ ರೋಸಿ ಹೋಗಿ ಅನುಷಾ ಸೀದಾ ಪೆಟ್ರೋಲ್ ತೆಗೆದುಕೊಂಡು ಬಾತ್ ರೂಮ್ ಗೆ ಹೋಗಿ ಬಾಥ್ರೂಮ್ನಿಂದಲೇ ಗಂಡನಿಗೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಇದನ್ನೆಲ್ಲಾ ಬಿಟ್ಟುಬಿಡು. ಮಗು ಮುಖ ನೋಡಿ ಆದ್ರೂ ಬದಲಾಗು ಅಂತ ಕೇಳಿಕೊಂಡಿದ್ದಾಳೆ. ಆಗಲೂ ಶ್ರೀ ಹರಿ ಆಕೆಯ ಮಾತನ್ನ ಕೇಳಲಿಲ್ಲ. ಆಗ ಅನುಷಾ ನಾನು ಸಾಯುತ್ತೇನೆ ಅಂತ ಹೇಳಿದ್ದಾಳೆ. ಆಗ ಈ ಪಾಪಿ ಗಂಡ ನೀನು ಮೊದಲು ಸಾಯಿ ಆ ಮೇಲೆ ನಾನು ನೆಮ್ಮದಿಯಾಗಿ ಮತ್ತೊಂದು ಮದುವೆಯಾಗಬಹುದು ಅಂದಿದ್ದಾನೆ. ಇದರಿಂದ ನೊಂದ ಅನುಷಾ ಪೆಟ್ರೋಲ್ ಅನ್ನ ಸುರಿದುಕೊಂಡಿದ್ದಾಳೆ. ವಿಡಿಯೋ ಕಾಲ್ನಲ್ಲಿ ಗಂಡ ನೋಡುತ್ತಿರುವಾಗ್ಲೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಆದ್ರೆ ಈ ಟೈಂನಲ್ಲಿ ಗಂಡ ಹರಿ ಒಂದು ಮಾತನ್ನೂ ಆಡಿಲ್ಲ ಆಕೆ ಬೆಂಕಿಯಲ್ಲಿ ಬೇಯುತ್ತಿರೋದನ್ನ ನೋಡುತ್ತಾ ಕೂತುಬಿಟ್ಟಿದ್ದ.
ಇಷ್ಟೆಲ್ಲಾ ಆಗುವಾಗ ಅನುಷಾ ತಾಯಿ ಹೊರಗಡೆ ಮಗುವಿಗೆ ಊಟ ಮಾಡಿಸುತ್ತಿದ್ದರು. ಕೆಲ ಹೊತ್ತಿನ ನಂತರ ಗಂಡನೇ ಬಂದು ಅನು ತಾಯಿಯ ಬಳಿ ನಿಮ್ಮ ಮಗಳು ಏನೋ ಮಾಡಿಕೊಂಡಿದ್ದಾಳೆ ಬಂದು ನೋಡಿ ಅಂತ ಹೇಳಿದ್ದಾನೆ. ಆಗ ಗಾಬರಿಯಿಂದ ಈ ತಾಯಿ ಹೋಗಿ ನೋಡಿದ್ರೆ ಅನುಷಾ ಅರ್ಧ ಬೆಂದು ಹೋಗಿದ್ದಳು. ಅನುಷಾ ತಾಯಿ ಸುತ್ತಿಗೆಯಿಂದ ಬಾಥ್ರೂಮ್ ಬಾಗಿಲು ಹೊಡೆದು ಅಕ್ಕಪಕ್ಕದವರ ಸಹಾಯದಿಂದ ಮಗಳನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಆಗಲೂ ಹರಿ ಅವಳ ಜೊತೆ ಆಸ್ಪತ್ರೆಗೆ ಹೋಗಿಲ್ಲ. ಆದ್ರೆ 2 ದಿನ ಸಾವು ಬದುಕಿನ ನಡುವೆ ಹೋರಾಡಿದ ಅನುಷಾ ಇದೀಗ ಮೃತಪಟ್ಟಿದ್ದಾರೆ.
ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿ ಶ್ರೀಹರಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:47 am, Tue, 10 September 24