899.35 ಕೋಟಿ ವಂಚನೆ ಕೇಸ್​: ದೀಪಕ್ ಕೇಬಲ್ ಕಂಪನಿಯ 150 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ

SBI Fraud Case: ಎಸ್​​​ಬಿಐ ಬ್ಯಾಂಕ್ ಒಕ್ಕೂಟಕ್ಕೆ 899.35 ಕೋಟಿ ರೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ವಲಯ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೀಪಕ್ ಕೇಬಲ್ಸ್ ಲಿಮಿಟೆಡ್ ನಿರ್ದೇಶಕರಾದ ಕೆ. ವೆಂಕಟೇಶ್ವರ ರಾವ್ ಮತ್ತು ಸತ್ಯವತಿ ಬಾಲ್ ಅವರ 150 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.

899.35 ಕೋಟಿ ವಂಚನೆ ಕೇಸ್​: ದೀಪಕ್ ಕೇಬಲ್ ಕಂಪನಿಯ 150 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ
ಇ.ಡಿ
Image Credit source: x.com/dir_ed
Edited By:

Updated on: Aug 06, 2026 | 7:29 PM

ಮುಖ್ಯಾಂಶಗಳು

  • ಎಸ್​​​ಬಿಐ ಬ್ಯಾಂಕ್ ಒಕ್ಕೂಟಕ್ಕೆ 899.35 ಕೋಟಿ ವಂಚನೆ ಪ್ರಕರಣ
  • ಇಡಿಯಿಂದ ದೀಪಕ್ ಕೇಬಲ್ಸ್ ಲಿಮಿಟೆಡ್ ನಿರ್ದೇಶಕರ ಆಸ್ತಿ ಜಪ್ತಿ
  • ಮಾರುಕಟ್ಟೆ ಮೌಲ್ಯದ ಸುಮಾರು 150 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರು, ಆಗಸ್ಟ್​​ 06: ಎಸ್​ಬಿಐ ಬ್ಯಾಂಕ್ ಒಕ್ಕೂಟಕ್ಕೆ ವಂಚನೆ, ಸಾಲದ ಹಣದ ದುರುಪಯೋಗ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕೇಬಲ್ (ಇಂಡಿಯಾ) ಲಿಮಿಟೆಡ್ (Deepak Cables (India) Limited) ವ್ಯವಸ್ಥಾಪಕ ನಿರ್ದೇಶಕ ಕೆ. ವೆಂಕಟೇಶ್ವರ ರಾವ್, ನಿರ್ದೇಶಕಿ ಸತ್ಯವತಿ ಬಾಲ್​​ ಹಾಗೂ ಅವರ ಸಹವರ್ತಿ ಸಂಸ್ಥೆಗಳಿಗೆ ಸೇರಿದ ಮಾರುಕಟ್ಟೆ ಮೌಲ್ಯದ ಸುಮಾರು 150 ಕೋಟಿಗೂ ಹೆಚ್ಚು ಸ್ಥಿರಾಸ್ತಿನ್ನು ಬೆಂಗಳೂರು ವಲಯದ ಇಡಿ (ED) ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಅಡಿಯಲ್ಲಿ ಜಪ್ತಿ ಮಾಡಿದ್ದಾರೆ.

150 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಅಕ್ರಮ ಹಣದ ಬಹುಪಾಲು ಭಾಗವನ್ನು ಬೇರೆಡೆಗೆ ವರ್ಗಾಯಿಸಲಾಗಿದ್ದು, ನೇರವಾಗಿ ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ, ಮುಟ್ಟುಗೋಲು ಪ್ರಕ್ರಿಯೆಗೆ ಯಾವುದೇ ಅಡಚಣೆಯಾಗದಂತೆ ತಡೆಯಲು ಸಮಾನ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

ಪ್ರಕರಣ ಹಿನ್ನೆಲೆ 

ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಆ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು. ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆಗಳ ಸೃಷ್ಟಿ ಹಾಗೂ ದುರ್ವರ್ತನೆಯ ಮೂಲಕ ಬ್ಯಾಂಕ್ ಒಕ್ಕೂಟಕ್ಕೆ ಭಾರೀ ಪ್ರಮಾಣದ ನಷ್ಟ ಉಂಟುಮಾಡಿರುವ ಆರೋಪವಿದೆ.

ಇದನ್ನೂ ಓದಿ: ಬೆಂಗಳೂರು: ಎಸ್​​ಬಿಐ ಬ್ಯಾಂಕ್ ಒಕ್ಕೂಟಕ್ಕೆ ಕೋಟ್ಯಂತರ ರೂ ವಂಚನೆ; ದೀಪಕ್ ಕೇಬಲ್ಸ್ ಲಿಮಿಟೆಡ್ ನಿರ್ದೇಶಕ ಅರೆಸ್ಟ್​

ದೀಪಕ್ ಕೇಬಲ್ ಕಂಪನಿ ಮತ್ತು ಅದರ ಪ್ರವರ್ತಕರು ಆರ್ಥಿಕ ವರದಿಗಳನ್ನು ತಿರಿಚಿರುವುದು, ಹೆಚ್ಚಿನ ಸ್ಟಾಕ್ ವರದಿಗಳು ಹಾಗೂ ಸುಳ್ಳು ಸಾಲಗಾರರ ವರದಿಗಳನ್ನು ಸಲ್ಲಿಸಿ ಬ್ಯಾಂಕ್ ಒಕ್ಕೂಟಗಳಿಂದ ವಿವಿಧ ಸಾಲ ಸೌಲಭ್ಯಗಳನ್ನು ಅಕ್ರಮವಾಗಿ ಪಡೆದುಕೊಂಡಿರುವುದು ತನಿಖೆಯಲ್ಲಿ ಈಗಾಗಲೇ ಬಯಲಾಗಿದೆ. ಯಾವುದೇ ಸರಕುಗಳ ನಿಜವಾದ ವ್ಯವಹಾರ ನಡೆಯದಿದ್ದರೂ, ಕೇವಲ ನಕಲಿ ಖರೀದಿ ಮತ್ತು ಮಾರಾಟದ ದಾಖಲೆಗಳನ್ನು ಸೃಷ್ಟಿಸಿ ಸಾಲದ ಹಣವನ್ನು ತಮ್ಮದೇ ಸಹವರ್ತಿ ಸಂಸ್ಥೆಗಳಾದ ಮೆಸರ್ಸ್ ಸೂರ್ಯ ಟ್ರಾನ್ಸ್‌ಮಿಷನ್ ಲಿಮಿಟೆಡ್, ಮೆಸರ್ಸ್ ಆಧುನಿಕ್ ಪವರ್ ಟ್ರಾನ್ಸ್‌ಮಿಷನ್ ಲಿಮಿಟೆಡ್, ಮೆಸರ್ಸ್ ದಾಂಡೇಲಿ ಫೆರೊ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಶರಾವತಿ ಕಂಡಕ್ಟರ್ಸ್ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ವೆಂಕಟೇಶ್ವರ ಇಂಡಸ್ಟ್ರೀಸ್, ಮೆಸರ್ಸ್ ಮಾರುತಿ ಇಂಜಿನಿಯರಿಂಗ್ ವರ್ಕ್ಸ್, ಮೆಸರ್ಸ್ ಯುನಿವರ್ಸಲ್ ಟ್ರಾನ್ಸ್‌ಮಿಷನ್ ಲೈನ್ ಪ್ರಾಡಕ್ಟ್ಸ್, ಮೆಸರ್ಸ್ ಕೆಜಿಎನ್ ಎಲೆಕ್ಟ್ರಿಕಲ್ಸ್ ಹಾಗೂ ಇತರ ಸಂಸ್ಥೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿರುವುದು ಸಾಬೀತಾಗಿದೆ.

ಇದನ್ನೂ ಓದಿ: ಬೆಂಗಳೂರಿನ ದೀಪಕ್ ಕೇಬಲ್ಸ್ ಲಿಮಿಟೆಡ್ ಮೇಲೆ ಇಡಿ ದಾಳಿ: ನಗದು, ಚಿನ್ನಾಭರಣ ಸೇರಿದಂತೆ 18 ಕೋಟಿ ರೂ ಫ್ರೀಜ್

ಸಾಲವಾಗಿ ಪಡೆದ ಹಣವನ್ನು ಉದ್ದೇಶಿತ ಕಾರ್ಯಗಳಿಗೆ ಬಳಸದೆ, ಖಾಸಗಿ ಈಕ್ವಿಟಿ ಹೂಡಿಕೆದಾರರಿಂದ ಈಕ್ವಿಟಿ ಶೇರ್‌ಗಳನ್ನು ಮರುಖರೀದಿಸಲು ಹಾಗೂ ಇತರ ಆಸ್ತಿಗಳನ್ನು ಖರೀದಿಸಲು ತಮ್ಮ ಸಹವರ್ತಿ ಸಂಸ್ಥೆಗಳ ಮೂಲಕ ದುರುಪಯೋಗಪಡಿಸಿಕೊಳ್ಳಲಾಗಿದೆ.

ಕೆ. ವೆಂಕಟೇಶ್ವರ ರಾವ್​  ಬಂಧನ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಆರೋಪಿಗಳು ಹಾಗೂ ಸಹವರ್ತಿಗಳಿಗೆ ಸೇರಿದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ, ಪ್ರಮುಖ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ರೆಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು. ಇನ್ನು ಇತ್ತೀಚೆಗೆ ಅಂದರೆ ಜೂನ್ 02ರಂದು ಕೆ. ವೆಂಕಟೇಶ್ವರ ರಾವ್​ರನ್ನ ಇ.ಡಿ ಅಧಿಕಾರಿಗಳು ಬಂಧಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us