ಬೆಂಗಳೂರಿನ ರೈತ ಸಮಾವೇಶ ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್; ರೈತರ ಮನ ಗೆಲ್ಲಲು ಆಮ್ ಆದ್ಮಿ ಪಾರ್ಟಿ ಪ್ಲ್ಯಾನ್
ರೈತ ಸಮಾವೇಶದಲ್ಲಿ ಕೇಜ್ರಿವಾಲ್ ರಾಗಿ ತೂರಿದ್ದಾರೆ. 40% ಸರ್ಕಾರ, ರೈತ ವಿರೋಧಿ ಸರ್ಕಾರ, ಕಣ್ಣೀರು ಹಾಕಿಸುವ ಸರ್ಕಾರ ಎಂದು ಬರೆದ ಮೂರು ಚೀಟಿಗಳನ್ನೂ ರಾಗಿಯಲ್ಲಿಟ್ಟು ಕೇಜ್ರಿವಾಲ್ ತೂರಿದ್ದಾರೆ.
ಬೆಂಗಳೂರು: ಇಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರೈತ ಸಮಾವೇಶ ಕಾರ್ಯಕ್ರಮ ನಡೆಯುತ್ತಿದ್ದು ದೆಹಲಿ ಸಿಎಂ ಕೇಜ್ರಿವಾಲ್ ನಗರಕ್ಕೆ ಆಗಮಿಸಿದ್ದಾರೆ. ರಾಗಿ ಹಾಗೂ ತರಕಾರಿ ರಾಶಿ ಪೂಜೆಯನ್ನ ಮಾಡುವ ಮೂಲಕ ಅರವಿಂದ್ ಕೇಜ್ರಿವಾಲ್ ಕಾರ್ಯಕ್ರಮವನ್ನ ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ರೈತರ ಧ್ವನಿಗಾಗಿ ಚಳುವಳಿ ಎಂಬ ನೂತನ ವಾಹಿನಿ ಲಾಂಛನವನ್ನು ಅರವಿಂದ್ ಕೇಜ್ರಿವಾಲ್ ಲಾಂಚ್ ಮಾಡಿದ್ದಾರೆ.
ರೈತ ಸಮಾವೇಶದಲ್ಲಿ ಕೇಜ್ರಿವಾಲ್ ರಾಗಿ ತೂರಿದ್ದಾರೆ. 40% ಸರ್ಕಾರ, ರೈತ ವಿರೋಧಿ ಸರ್ಕಾರ, ಕಣ್ಣೀರು ಹಾಕಿಸುವ ಸರ್ಕಾರ ಎಂದು ಬರೆದ ಮೂರು ಚೀಟಿಗಳನ್ನೂ ರಾಗಿಯಲ್ಲಿಟ್ಟು ಕೇಜ್ರಿವಾಲ್ ತೂರಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಬಾಸ್ಕರ್ ರಾವ್ ಮಾತನಾಡಿದ್ದು, ವಿವಿಧ ಭಾಗಗಳಿಂದ ಆಗಮಿಸಿರುವ ರೈತ ಪ್ರಭುಗಳಿಗೆ ಸ್ವಾಗತ. ಆಮ್ ಆದ್ಮಿ ಪಾರ್ಟಿವತಿಯಿಂದ, ಅರವಿಂದ್ ಕೇಜ್ರಿವಾಲ್ ವತಿಯಿಂದ ಎಲ್ಲರಿಗೂ ಸ್ವಾಗತ ಬಯಸುತ್ತೇನೆ. ಇವತ್ತು ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗ್ತಿದ್ದೀರಿ. ಇಷ್ಟು ದಿನ ಹೋರಾಟಗಳಲ್ಲಿ ಭಾಗವಹಿಸಿ ರೈತರು, ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ಮಾಡ್ತಿದ್ದರು. ಆದ್ರೆ ಇವತ್ತಿನಿಂದ ನೇರವಾಗಿ ವಿಧಾನ ಸೌಧಕ್ಕೆ ಹೋಗಲು ಕೋಡಿಹಳ್ಳಿ ಚಂದ್ರಶೇಖರ್ ಮುಂದಾಗಿದ್ದಾರೆ. ರೈತರ ಬದುಕಲ್ಲಿ ಸುಧಾರಣೆ ಬಂದಿಲ್ಲ. ರೈತರ ಮಕ್ಕಳಿಗೆ ಒಳ್ಳೇ ಶಿಕ್ಷಣ, ಆರೋಗ್ಯ ಇಲ್ಲ. ಬಡತನದಿಂದ ಹೊರಬರೋಕೆ ಆಗಲಿಲ್ಲ. ಕಳೆದ 30 ವರ್ಷಗಳಿಂದ ನಾನೊಬ್ಬ ಪೊಲೀಸ್ ಆಗಿ ಅವರ ಕಷ್ಟ ನೋಡಿದ್ದೇನೆ. ನಮ್ಮ ಕಂದಾಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 2497 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾಭಿಮಾನಕ್ಕೆ ಕಟ್ಟುಬಿದ್ದು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಆದ್ರೆ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ನೀತಿಗಳಲ್ಲಿ ಬದಲಾವಣೆ ತಂದಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ಉದ್ಯೋಗ ಸೃಷ್ಟಿ ಹೀಗೆ ಸಾಕಷ್ಟು ಬದಲಾವಣೆಗಳನ್ನ ತಂದಿದ್ದಾರೆ. ಆಮ್ ಆದ್ಮಿ ಪಕ್ಷಕ್ಕೆ ಹಣವಲ್ಲ, ಜಾತಿ ಬಲ, ಧರ್ಮ ಬಲವಿಲ್ಲ. ನಮ್ಮಲ್ಲಿ ಜನಸಾಮಾನ್ಯರ ಬಲವಿದೆ. ನಮ್ಮ ನೀತಿ ಬದಲಾವಣೆಯ ಬಲವಿದೆ.
ಜನಸಾಮಾನ್ಯರಲ್ಲಿ ಒಂದು ಸುಧಾರಣೆ ತರಲಿದ್ದಾರೆ. ದುಡ್ಡು ಕೊಟ್ಟು ವೋಟ್ ಪಡೆಯೋದಿಲ್ಲ. ನಮ್ಮ ನೀತಿಗಳಿಂದ ಇವತ್ತು ದೆಹಲಿ, ಪಂಜಾಬ್ ನಲ್ಲಿ ಜನ ನಂಬಿ ಕೈ ಹಿಡಿದಿದ್ದಾರೆ. ನಮ್ಮ ರಾಜ್ಯದಲ್ಲಿ ಏಳೂವರೆ ಲಕ್ಷ ಕೋಟಿ ಸಾಲದಲ್ಲಿದೆ. ಈ ಪರಿಸ್ಥಿತಿ ಸಧ್ಯ ನಮ್ಮ ರಾಜ್ಯಕ್ಕಿದೆ. ಬಡತನ ಒಂದು ಶಾಪವಿರಬಹುದು ಆದ್ರೆ ಅದರಿಂದ ಹೊರಬರೋಕೆ ನಮ್ಮ ಪಕ್ಷದಿಂದ ಸಾಧ್ಯವಿದೆ. ಎಲ್ಲಾ ವರ್ಗದವರು ನೇರವಾಗಿ ರಾಜಕಾರಣದಲ್ಲಿ ಭಾಗವಹಿಸಬೇಕು. ಇಷ್ಟುದಿನ ಕೆಲವರು ಗೆದ್ದು ಬಂದು ಭ್ರಷ್ಟಾಚಾರಗಳಿದ್ದಾರೆ. ಸರ್ದಾರ್ ಗಳಾಗಿ ಮೆರೆಯುತ್ತಿದ್ದಾರೆ. 40 ಪರ್ಸೆಂಟ್ ಭ್ರಷ್ಟಾಚಾರ ಮಾಡಿ ಮೊಮ್ಮಕ್ಕಳಿಗೆ ಎಲ್ಲರಿಗೂ ಮಾಡಿರ್ತಾರೆ. ಆದ್ರೆ ಹಳ್ಳಿ ಕಡೆ ನೀರು ಇಲ್ಲದೇ ಆಸ್ಪತ್ರೆ ವ್ಯವಸ್ಥೆ ಇಲ್ಲದೇ ಜನ ಸಾಯ್ತಿದ್ದಾರೆ. ಸರ್ಕಾರದಲ್ಲಿ ದುಡ್ಡು ತುಳುಕ್ತಿದೆ ಆದ್ರೆ ಈ ಭ್ರಷ್ಟಾಚಾರದಿಂದ ಸೋರಿಕೆಯಾಗ್ತಿದೆ. ಕಾಂಗ್ರೆಸ್ ನವರು ಭ್ರಷ್ಟಾಚಾರ ಉಳಿಸಿ ಬೆಳೆಸಿದರು ಇವತ್ತು ಬಿಜೆಪಿ ಮುಂದುವರಿಸುತ್ತಿದೆ ಎಂದರು.
ಕನ್ನಡ ಬರಲ್ಲ ಕ್ಷಮಿಸಿ ಕನ್ನಡ ಬರಲ್ಲ ಕ್ಷಮಿಸಿ ಹಿಂದಿಯಲ್ಲಿ ಮಾತಾಡ್ತೀನಿ ಎಂದು ಭಾಷಣ ಆರಂಭಿಸಿದ ಕೇಜ್ರಿವಾಲ್, ಎರಡು ದಿನಗಳಿಂದ ನನಗೆ ತೀವ್ರ ಹಲ್ಲು ನೋವು, ನಾನು ಪೇನ್ ಕಿಲ್ಲರ್ ಸೇವಿಸಿ ಇಲ್ಲಿಗೆ ಬಂದಿದ್ದೇನೆ. ಆಪ್ ಪಕ್ಷಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ಮನುಷ್ಯ ಅಹಂಕಾರ ಪಡಬಾರದು. ರಾವಣನೂ ಅಹಂಕಾರ ಮೆರೆದಿದ್ದ. ಸೀತೆ ಅಪಹರಣ ವೇಳೆ ರಾಮನ ಜತೆ ಸಂಘರ್ಷ ಬೇಡ ಅಂದ ವಿಭೀಷಣ. ರಾವಣ ಒಪ್ಲಿಲ್ಲ, ಅಂತ್ಯ ಏನಾಯಿತು ಅಂತ ಎಲ್ರಿಗೂ ಗೊತ್ತಿದೆ. ಇದೇ ರೀತಿ ಕೇಂದ್ರಕ್ಕೂ ಅಹಂಕಾರ ಇತ್ತು. ಮೂರು ರೈತ ವಿರೋಧಿ ಕಾನೂನು ತಂದ್ರು. ಎಷ್ಟೇ ಹೇಳಿದ್ರೂ ಕೇಂದ್ರ ಕೇಳಲಿಲ್ಲ. ರೈತರ ವಿರುದ್ಧ ನಡೆ ಬೇಡ ಅಂದ್ರೂ ಕೇಂದ್ರ ಕೇಳಿರಲಿಲ್ಲ. ಕೊನೆಗೂ 13 ತಿಂಗಳ ಬಳಿಕ ಕೇಂದ್ರದ ಅಹಂಕಾರ ಭಂಗವಾಯ್ತು. ಮೂರು ಕಾಯ್ದೆ ಕೇಂದ್ರ ವಾಪಸ್ ಪಡೀತು ಎಂದರು.
ಸ್ವಾತಂತ್ರ್ಯ ಬಂದಾಗಿಂದಲೂ ರೈತರ ಸ್ಥಿತಿ ಉತ್ತಮ ಆಗಿಲ್ಲ. ನಾನು ಅಣ್ಣಾ ಹಜಾರೆ ಜೊತೆ ಹೋರಾಟ ಮಾಡ್ಕೊಂಡಿದ್ದೆ. ಭ್ರಷ್ಟಾಚಾರ ತೊಲಗಿಸಿ ಅಂತ ಅಣ್ಣಾಗೆ ಹೇಳಿದ್ದೆ ನಾನು. ಆಗ ಅವ್ರು ನೀನು ಚುನಾವಣೆ ಗೆದ್ದು ಭ್ರಷ್ಟಾಚಾರ ಓಡಿಸು ಅಂದ್ರು. ನಾನು, ಸಾಮಾನ್ಯ ಮನುಷ್ಯನನ್ನ ಕೆಣಕಬೇಡಿ ಅಂದೆ. ಅದರ ಪರಿಣಾಮ ಮೊದಲು ದೆಹಲಿಯಲ್ಲಿ ನಂತರ ಪಂಜಾಬ್ ನಲ್ಲಿ ಆಪ್ ಸರ್ಕಾರ ರಚಿಸಿಲಾಯಿತು. ಈಗ ನಮ್ಮ ಆಧ್ಯತೆ ಕರ್ನಾಟಕ. ಕಾಂಗ್ರೆಸ್ ನಲ್ಲಿ 20% ಸರ್ಕಾರ ಇತ್ತು. ಈಗ 40% ಸರ್ಕಾರ ಇದೆ ಇಲ್ಲಿ. ದೆಹಲಿಯಲ್ಲಿ 0% ಸರ್ಕಾರ ಇದೆ ಎಂದರು.
ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ನಿವೃತ್ತಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಅವರಿಂದ ಆಪ್ ಟೋಪಿ ಪಡೆದು ಆಮ್ ಆದ್ಮಿ ಪಕ್ಷಕ್ಕೆ ನಿವೃತ್ತಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಗುಲ್ಬರ್ಗಾ ಬಿಜೆಪಿ ಮುಖಂಡ ಸಿದ್ದು, ಕಾಂಗ್ರೆಸ್ ಕಿಸಾನ್ ಘಟಕದ ಕಾರ್ಯದರ್ಶಿ ದೇಸಾಯಿ ಸೇರಿದಂತೆ ಹಲವರು ಸೇರ್ಪಡೆಯಾಗಿದ್ದಾರೆ.
2023ಕ್ಕೆ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷವನ್ನ ಅಧಿಕಾರಕ್ಕೆ ತರಬೇಕು. 2024ರಲ್ಲಿ ಅರವಿಂದ್ ಕೇಜ್ರಿವಾಲ್ ದೇಶದ ಪ್ರಧಾನಿಯಾಗಬೇಕು. ಅದಕ್ಕಾಗಿ ನಾವೆಲ್ಲ ಪ್ರಮಾಣ ಮಾಡಬೇಕು ಅಂತಾ ನೆರದಿದ್ದವರಿಗೆ ಕೋಡಿಹಳ್ಳಿ ಚಂದ್ರಶೇಖರ್ ಪ್ರಮಾಣವಚನ ಬೋಧಿಸಿದ್ದಾರೆ.
ಇದನ್ನೂ ಓದಿ: ಮಾರಿಯುಪೋಲ್ನ ಯಶಸ್ವಿ ವಿಮೋಚನೆಯನ್ನು ಶ್ಲಾಘಿಸಿದ ವ್ಲಾಡಿಮಿರ್ ಪುಟಿನ್: ವರದಿ
ಇಫ್ತಾರ್ ಕೂಟದಲ್ಲಿ ಭಾಗಿಯಾಗಿದವರು ಹಿಂದೂ ದ್ರೋಹಿಗಳು, ನಿಮಗೆ ನಾಚಿಕೆ ಮಾನ ಮಾರ್ಯದೆ ಏನು ಇಲ್ವಾ? ಮುತಾಲಿಕ್ ಆಕ್ರೋಶ
Published On - 1:58 pm, Thu, 21 April 22