ಮಾರಿಯುಪೋಲ್ ವಿಮೋಚನೆಗೊಂಡಿದೆ: ರಷ್ಯಾದ ಪಡೆಗಳನ್ನು ಶ್ಲಾಘಿಸಿದ ಪುಟಿನ್
ದೈತ್ಯ ಅಜೋವ್‌ಸ್ಟಲ್ ಉಕ್ಕಿನ ಸ್ಥಾವರವನ್ನು ಹೊರತುಪಡಿಸಿ ಉಕ್ರೇನಿಯನ್ ಬಂದರು ನಗರವನ್ನು ಮಾಸ್ಕೋ ನಿಯಂತ್ರಿಸುತ್ತದೆ ಎಂದು ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ತಿಳಿಸಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಮಾರಿಯುಪೋಲ್‌ನ "ವಿಮೋಚನೆ" ಯನ್ನು ಶ್ಲಾಘಿಸಿದರು.
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಮಾರಿಯುಪೋಲ್‌ನ (Mariupol) “ಯಶಸ್ವಿ ವಿಮೋಚನೆ” ಯನ್ನು ಶ್ಲಾಘಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ದೈತ್ಯ ಅಜೋವ್‌ಸ್ಟಲ್ ಉಕ್ಕಿನ ಸ್ಥಾವರವನ್ನು ಹೊರತುಪಡಿಸಿ ಉಕ್ರೇನಿಯನ್ ಬಂದರು ನಗರವನ್ನು ಮಾಸ್ಕೋ ನಿಯಂತ್ರಿಸುತ್ತದೆ ಎಂದು ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು (Sergei Shoigu) ತಿಳಿಸಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಮಾರಿಯುಪೋಲ್‌ನ “ವಿಮೋಚನೆ” ಯನ್ನು ಶ್ಲಾಘಿಸಿದರು. ಅಜೋವ್ ಸಮುದ್ರದ ಮೇಲೆ ಮಾರಿಯುಪೋಲ್‌ನ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುವುದು ರಷ್ಯಾಕ್ಕೆ ಪ್ರಮುಖ ಕಾರ್ಯತಂತ್ರದ ವಿಜಯವಾಗಿದೆ. ಇದು ಪೂರ್ವ ಉಕ್ರೇನ್‌ನಲ್ಲಿರುವ ರಷ್ಯಾದ ಪರ ಪ್ರತ್ಯೇಕತಾವಾದಿಗಳ ಪ್ರದೇಶಗಳಿಗೆ ಸ್ವಾಧೀನಪಡಿಸಿಕೊಂಡ ಕ್ರೈಮಿಯಾವನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. “ಮಾರಿಯುಪೋಲ್ನ್ನು ವಿಮೋಚನೆಗೊಳಿಸಲಾಗಿದೆ” ಎಂದು ವರ್ಚುವಲ್ ಸಭೆಯಲ್ಲಿ ಶೋಯಿಗು ಪುಟಿನ್ಗೆ ಹೇಳಿದರು. “ಉಳಿದ ರಾಷ್ಟ್ರೀಯತಾವಾದಿ ಸಂಘಟನೆಗಳು ಅಜೋವ್‌ಸ್ಟಲ್ ಸ್ಥಾವರದ ಕೈಗಾರಿಕಾ ವಲಯದಲ್ಲಿ ಆಶ್ರಯ ಪಡೆದವು. ಸುಮಾರು 2,000 ಉಕ್ರೇನಿಯನ್ ಸೈನಿಕರು ಸ್ಥಾವರದೊಳಗೆ ಉಳಿದಿದ್ದಾರೆ ಎಂದು ಶೋಯಿಗು ಹೇಳಿದರು. ಅಲ್ಲಿ ಸೌಲಭ್ಯದ ಭೂಗತ ಸುರಂಗಗಳ ಜಾಲವನ್ನು ಬಳಸಿ ಉಕ್ರೇನಿಯನ್ ಪ್ರತಿರೋಧದ ಕೊನೆಯ ತುಕಡಿ ಆಶ್ರಯ ಪಡೆದಿದೆ. ಈ ಕೈಗಾರಿಕಾ ಪ್ರದೇಶವನ್ನು ನಿರ್ಬಂಧಿಸಿ ಇದರಿಂದ ನೊಣ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪುಟಿನ್ ಹೇಳಿದರು. ಒಂದು ತಿಂಗಳಿಗೂ ಹೆಚ್ಚು ಕಾಲ ರಷ್ಯಾದ ಪಡೆಗಳು ಮುತ್ತಿಗೆ ಹಾಕಿದ ನಗರದಲ್ಲಿ ಆಹಾರ, ನೀರು ಮತ್ತು ವಿದ್ಯುತ್ ಸಂಪರ್ಕವಿಲ್ಲದೆ ಸಾವಿರಾರು ನಾಗರಿಕರು ಸತ್ತಿದ್ದಾರೆ ಎಂದು ನಂಬಲಾಗಿದೆ.
ಮಾರಿಯುಪೋಲ್‌ನಿಂದ ಸ್ಥಳಾಂತರಿಸುವವರನ್ನು ಸಾಗಿಸುವ ನಾಲ್ಕು ಬಸ್‌ಗಳು ಮುತ್ತಿಗೆ ಹಾಕಿದ ಮತ್ತು ನಾಶವಾದ ಬಂದರು ನಗರವನ್ನು ತೊರೆದಿವೆ. ಅಲ್ಲಿ ಉಕ್ರೇನಿಯನ್ ಪಡೆಗಳು ನಿಯಂತ್ರಣವನ್ನು ಉಳಿಸಿಕೊಳ್ಳಲು ಹೋರಾಡುತ್ತಿವೆ ಎಂದು ಸರ್ಕಾರ ಗುರುವಾರ ತಿಳಿಸಿದೆ. “ಮಾನವೀಯ ಕಾರಿಡಾರ್ ಮೂಲಕ ನಾಲ್ಕು ಸ್ಥಳಾಂತರಿಸುವ ಬಸ್‌ಗಳು ನಿನ್ನೆ ನಗರದಿಂದ ಹೊರಡುವಲ್ಲಿ ಯಶಸ್ವಿಯಾದವು” ಎಂದು ಉಪ ಪ್ರಧಾನ ಮಂತ್ರಿ ಐರಿನಾ ವೆರೆಶ್‌ಚುಕ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಸ್ಥಳಾಂತರಿಸುವುದು ಗುರುವಾರ ಮುಂದುವರಿಯುತ್ತದೆ. “ಭದ್ರತಾ ಪರಿಸ್ಥಿತಿ ಕಷ್ಟಕರವಾಗಿದೆ. ಪರಿಸ್ಥಿತಿ ಬದಲಾಗಬಹುದು ಎಂದು ಅವರು ಹೇಳಿದರು. ಮಾರಿಯುಪೋಲ್ ಯುದ್ಧವು ಸುಮಾರು ಎರಡು ತಿಂಗಳ ವಿನಾಶಕಾರಿ ಹೋರಾಟದ ನಂತರ ಒಂದು ಹಂತಕ್ಕೆ ಬಂದಿದ್ದು ಅಸಂಖ್ಯಾತ ನಾಗರಿಕರ ಪ್ರಾಣ ತೆಗೆದುಕೊಂಡಿದೆ. ಮಾರಿಯುಪೋಲ್ ಮತ್ತು ಪ್ರತ್ಯೇಕತಾವಾದಿ ನಿಯಂತ್ರಿತ ಪೂರ್ವ ಡೊನ್ಬಾಸ್ ಪ್ರದೇಶದ ನಿಯಂತ್ರಣವು ಕ್ರಿಮಿಯನ್ ಪರ್ಯಾಯ ದ್ವೀಪಕ್ಕೆ ದಕ್ಷಿಣದ ಕಾರಿಡಾರ್ ಅನ್ನು ಪೂರ್ಣಗೊಳಿಸಲು ಮಾಸ್ಕೋಗೆ ಅವಕಾಶ ನೀಡುತ್ತದೆ.
ಬುಧವಾರ, ಹಿರಿಯ ಉಕ್ರೇನ್ ಸಮಾಲೋಚಕ ಮತ್ತು ಅಧ್ಯಕ್ಷೀಯ ಸಹಾಯಕ ಮೈಖೈಲೊ ಪೊಡೊಲ್ಯಾಕ್ ಅವರು “ನಮ್ಮ ನಾಗರಿಕರನ್ನು ಉಳಿಸಲು” ನಗರದಲ್ಲಿ “ವಿಶೇಷ ಸುತ್ತಿನ” ಮಾತುಕತೆಗಳನ್ನು ಪ್ರಸ್ತಾಪಿಸಿದರು.
ಇದನ್ನೂ ಓದಿ: Watch ರಷ್ಯಾ- ಉಕ್ರೇನ್ ಸಂಘರ್ಷದಲ್ಲಿ ಬುಲೆಟ್ ತಡೆದು ಉಕ್ರೇನ್ ಯೋಧನ ಪ್ರಾಣ ಉಳಿಸಿದ ಮೊಬೈಲ್ ಫೋನ್
Published On - 1:13 pm, Thu, 21 April 22