
ಬೆಂಗಳೂರು, ನವೆಂಬರ್ 28: ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಬಿಲ್ ಮಂಡನೆಯಾಗಲಿದೆ. ಆ ಮೂಲಕ ಕರ್ನಾಟಕದ ಪಾಲಿಗೆ ರಾಜಕೀಯವಾಗಿ ಸೂಕ್ಷ್ಮವಾಗಿರುವ ಪ್ರಶ್ನೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಕ್ಷೇತ್ರ ಮರುವಿಂಗಡಣೆಯಿಂದ ಸಂಸತ್ತು ಹಾಗೂ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಬದಲಾಗಲಿದೆಯೇ ಎಂಬ ಚರ್ಚೆ ಆರಂಭವಾಗಿದೆ.
ಈ ಬದಲಾವಣೆಯ ಪರಿಣಾಮ ಕೇವಲ ಸಂಸತ್ತಿನ ಸದಸ್ಯರ ಸಂಖ್ಯೆಗೆ ಸೀಮಿತವಾಗಿರುವುದಿಲ್ಲ. ಕ್ಷೇತ್ರಗಳ ಗಡಿಗಳು, ಪ್ರಾದೇಶಿಕ ಪ್ರಭಾವ ಹಾಗೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ರಾಜಕೀಯ ಸಮೀಕರಣಗಳ ಮೇಲೂ ಪರಿಣಾಮ ಬೀರಬಹುದು. ಮಹಿಳಾ ಮತದಾರರು ಮತ್ತು ರಾಜಕೀಯ ಕ್ಷೇತ್ರದ ಮೇಲೆ ಇದರ ಪರಿಣಾಮ ಅತ್ಯಂತ ಸ್ಪಷ್ಟವಾಗಿ ಗೋಚರಿಸಬಹುದು. ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಯಾದರೆ, 336 ಸದಸ್ಯ ಬಲ ಹೊಂದಲಿರುವ ಕರ್ನಾಟಕ ವಿಧಾನಸಭೆಯಲ್ಲಿ ಸುಮಾರು 112 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಅದೇ ರೀತಿ, ಲೋಕಸಭೆಯ 42 ಸ್ಥಾನಗಳಲ್ಲಿ 14 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ.
ಇದನ್ನೂ ಓದಿ: ‘ಕರ್ನಾಟಕದ ಲೋಕಸಭಾ ಕ್ಷೇತ್ರಗಳು 56ಕ್ಕೆ ಏರಲಿವೆ’; ಕ್ಷೇತ್ರ ಮರುವಿಂಗಡಣೆಗೆ ಜೆಡಿಎಸ್ ಸಂಪೂರ್ಣ ಬೆಂಬಲ
2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕೇವಲ 10 ಮಹಿಳೆಯರು ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮೀಸಲಾತಿ ಅಡಿಯಲ್ಲಿ ಲಭ್ಯವಾಗುವ ಸ್ಥಾನಗಳ ಸಂಖ್ಯೆ, ಪ್ರಸ್ತುತ ಆಯ್ಕೆಯಾಗಿರುವ ಮಹಿಳಾ ಶಾಸಕರ ಸಂಖ್ಯೆಯ 11 ಪಟ್ಟು ಹೆಚ್ಚು ಇರಲಿದೆ. ಇದು ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದು. ಮೀಸಲಾತಿಯಿಂದ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಅವಕಾಶಗಳು ದೊರೆಯಲಿವೆ. ಅಲ್ಲದೆ, ಮೀಸಲು ಕ್ಷೇತ್ರಗಳ ಆವರ್ತನೆ ವ್ಯವಸ್ಥೆಯು ಹಾಲಿ ಶಾಸಕರ ಭವಿಷ್ಯ ಹಾಗೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯ ಮೇಲೂ ಪರಿಣಾಮ ಬೀರಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿರುವುದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.