ಡೆಂಗ್ಯೂ ಪರೀಕ್ಷೆಯಲ್ಲ ಸುಲಿಗೆ! ರೋಗಿಗಳಿಂದ 15 ಪಟ್ಟು ಹೆಚ್ಚು ದರ ವಸೂಲಿ ಮಾಡುತ್ತಿವೆ ಬೆಂಗಳೂರಿನ ಲ್ಯಾಬ್​ಗಳು

|

Updated on: Aug 07, 2024 | 7:03 AM

ಬೆಂಗಳೂರಿನಲ್ಲಿ ಡೆಂಗ್ಯೂ ಹಾವಳಿ ಮಿತಿ ಮೀರಿರುವುದು ಒಂದೆಡೆಯಾದರೆ, ಡೆಂಗ್ಯೂ ಪತ್ತೆ ಪರೀಕ್ಷೆ ನೆಪದಲ್ಲಿ ರೋಗಿಗಳ ಜೇಬು ದೋಚುವ ಕಾಟ ಮತ್ತಷ್ಟು ಹೆಚ್ಚಾಗಿದೆ. ಡೆಂಗ್ಯೂ ಪತ್ತೆ ಪರೀಕ್ಷೆಗೆ ಸರ್ಕಾರ ದರ ನಿಗದಿಪಡಿಸಿದ್ದರೂ ಆಸ್ಪತ್ರೆಗಳು, ಲ್ಯಾಬ್​ಗಳು, ವೈದ್ಯಕೀಯ ಕೇಂದ್ರಗಳು ಸುಮಾರು 15 ಪಟ್ಟು ಹೆಚ್ಚು ದರ ವಸೂಲಿ ಮಾಡುತ್ತಿರುವ ಬಗ್ಗೆ ವರದಿಯಾಗಿದೆ.

ಡೆಂಗ್ಯೂ ಪರೀಕ್ಷೆಯಲ್ಲ ಸುಲಿಗೆ! ರೋಗಿಗಳಿಂದ 15 ಪಟ್ಟು ಹೆಚ್ಚು ದರ ವಸೂಲಿ ಮಾಡುತ್ತಿವೆ ಬೆಂಗಳೂರಿನ ಲ್ಯಾಬ್​ಗಳು
ಡೆಂಗ್ಯೂ ಪರೀಕ್ಷೆ (ಸಾಂದರ್ಭಿಕ ಚಿತ್ರ)
Image Credit source: Getty Images
Follow us on

ಬೆಂಗಳೂರು, ಆಗಸ್ಟ್ 7: ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವುದರಿಂದ ಸೋಂಕು ಪತ್ತೆ ಪರೀಕ್ಷೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಜುಲೈ 3 ರಂದು ಸರ್ಕಾರವು ಎರಡು ಮಾದರಿಯ ಡೆಂಗ್ಯೂ ಪರೀಕ್ಷೆಗಳಿಗೆ 250 ರೂ. ಮತ್ತು 300 ರೂ. (ಕ್ರಮವಾಗಿ ರ‍್ಯಾಪಿಡ್ ಮತ್ತು ಎಲಿಸಾ) ನಿಗದಿಪಡಿಸಿತ್ತು. ಆದರೆ, ನಗರ ಆರೋಗ್ಯ ಕೇಂದ್ರಗಳು ಶಿಫಾರಸು ಮಾಡಿದ ದರಕ್ಕಿಂತ 3 ರಿಂದ 15 ಪಟ್ಟು ಹೆಚ್ಚು ವಸೂಲಿ ಮಾಡುತ್ತಿರುವುದನ್ನು ಮುಂದುವರೆಸಿವೆ ಎಂಬ ಆರೋಪಗಳು ಕೇಳಿಬಂದಿವೆ.

ದರಗಳನ್ನು ಮಿತಿಗೊಳಿಸಿದ ಒಂದು ತಿಂಗಳ ನಂತರ, ಪ್ರಸ್ತುತ ಡೆಂಗ್ಯೂ ಪರೀಕ್ಷೆಗೆ ವಿಧಿಸುತ್ತಿರುವ ದರಗಳನ್ನು ಖಚಿತಪಡಿಸಿಕೊಳ್ಳಲು ಡಯಾಗ್ನೋಸ್ಟಿಕ್, ವೈದ್ಯಕೀಯ ಕೇಂದ್ರಗಳು ಮತ್ತು ಆಸ್ಪತ್ರೆಗಳು ಸೇರಿದಂತೆ 25 ಸ್ಥಳಗಳನ್ನು ಸಂಪರ್ಕಿಸಲಾಯಿತು. ಕಮ್ಮನಹಳ್ಳಿ, ಕಸ್ತೂರಿ ನಗರ, ಇಂದಿರಾನಗರ, ವಿಲ್ಸನ್ ಗಾರ್ಡನ್, ರಾಜಾಜಿನಗರ, ಜಯನಗರ, ನಾಗರಭಾವಿ, ಸಂಪಂಗಿರಾಮ್ ನಗರ, ಕುಮಾರಸ್ವಾಮಿ ಲೇಔಟ್, ಆರ್‌ಟಿ ನಗರ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿನ ಕೇಂದ್ರಗಳಿಗೆ ಕರೆ ಮಾಡಿ ದರಗಳನ್ನು ವಿಚಾರಿಸಲಾಗಿತ್ತು. ಈ ವೇಳೆ ಹೆಚ್ಚು ದರ ವಸೂಲಿ ಮಾಡುತ್ತಿರುವುದು ಗೊತ್ತಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

25 ವೈದ್ಯಕೀಯ ಸಂಸ್ಥೆಗಳ ಪೈಕಿ 12 ರಲ್ಲಿ ರ‍್ಯಾಪಿಡ್ ವಿಧಾನದ ಪರೀಕ್ಷೆಗೆ 250 ರೂ. ಮತ್ತು 4 ಕೇಂದ್ರಗಳು ಎಲಿಸಾ ವಿಧಾನದ ಪರೀಕ್ಷೆಗೆ 300 ರೂ. ವಿಧಿಸುತ್ತಿರುವುದು ತಿಳಿದುಬಂದಿದೆ. ಉಳಿದ ಕೇಂದ್ರಗಳು ರ‍್ಯಾಪಿಡ್ ವಿಧಾನಕ್ಕೆ 600 ರಿಂದ 1,250 ರೂ.ವರೆಗೆ ಶುಲ್ಕ ವಿಧಿಸುತ್ತಿದ್ದರೆ, ಎಲಿಸಾ ಪರೀಕ್ಷೆಗೆ 900 ರಿಂದ 4,750 ರೂ. ವಿಧಿಸುತ್ತಿವೆ ಎಂದು ವರದಿ ತಿಳಿಸಿದೆ.

15 ಪಟ್ಟು ಹೆಚ್ಚು ದರ ವಸೂಲಿ

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಐಟಿಪಿಎಲ್ ರಸ್ತೆಯಲ್ಲಿರುವ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ರ‍್ಯಾಪಿಡ್ ಪರೀಕ್ಷೆಗೆ 1,250 ರೂ. ಮತ್ತು ಎಲಿಸಾ ವಿಧಾನಕ್ಕೆ 4,750 ರೂ. (ಕ್ಯಾಪ್ಡ್ ದರಕ್ಕಿಂತ 15 ಪಟ್ಟು) ಶುಲ್ಕ ವಿಧಿಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿಗೆ ಐದು ದಿನ ಮಳೆ ಅಲರ್ಟ್, ಆಗಸ್ಟ್ ತಿಂಗಳಲ್ಲಿ ರಾಜಧಾನಿಗೆ ಕಾದಿದ್ಯಾ ವರುಣನ ಗಂಡಾಂತರ?

ವಿಲ್ಸನ್ ಗಾರ್ಡನ್‌ನಲ್ಲಿರುವ ಮತ್ತೊಂದು ಆಸ್ಪತ್ರೆಯಲ್ಲಿ ರ‍್ಯಾಪಿಡ್ ಪರೀಕ್ಷೆಗೆ 720 ರೂ. ವಿಧಿಸಲಾಗುತ್ತಿದೆ. ಆದರೆ, ಸಂಪಂಗಿರಾಮ್ ನಗರದ ಆಸ್ಪತ್ರೆಯೊಂದು ಮಿತಿಗೊಳಿಸಿದ ದರವನ್ನೇ ವಿಧಿಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:01 am, Wed, 7 August 24