
ಬೆಂಗಳೂರು, (ಮೇ 13): ಇ-ಖಾತಾ, ನಂಬಿಕೆ ನಕ್ಷೆ ಸೇರಿ ಬೆಂಗಳೂರಿನ (Bengaluru) ಜನರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಅದರ ಜತೆಗೆ ಇದೀಗ ಬೆಂಗಳೂರಿಗೆ ಸೀಮಿತವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಇಂದು(ಮೇ 13) 6ನೇ ಗ್ಯಾರಂಟಿ ಘೋಷಿಸಿದ್ದಾರೆ. ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅಭಿಯಾನ (Property Ownership Drive ಮಾಡುವುದಾಗಿ ಘೋಷಿಸಿದ್ದಾರೆ. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ 16-05-2026 ರಂದು ನಡೆಯುವ ನನ್ನ ಖಾತಾ ನನ್ನ ಹಕ್ಕು ಅಭಿಯಾನ(e-Khatha Open House) ಘೋಷಿಸಿದ್ದು, ಓಸಿ ಇಲ್ಲದೇ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಸಿಗದೇ ಪರದಾಡುತ್ತಾ ಇದ್ದವರಿಗೆ ಅನುಕೂಲವಾಗಲಿದೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅವಕಾಶ ಕೊಡುತ್ತೇವೆ.ಒಟ್ಟು 7 ಲಕ್ಷ ಬಿ ಖಾತೆಗಳಿದ್ದು, ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅಭಿಯಾನ ಮಾಡುತ್ತೇವೆ. ನಗರದಲ್ಲಿ ಕೆಲವರು ಪ್ಲ್ಯಾನ್ ಇಲ್ಲದೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಂತಹವರ ಅನುಕೂಲಕಕ್ಕಾಗಿ ಈ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಶಾಲೆ ಆವರಣದಲ್ಲಿ ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದ 10 ಕಡೆ ಅಭಿಯಾನ ನಡೆಯಲಿದ್ದು, ಮೇ 16ರ ಬಳಿಕ ಪ್ರತಿ ಶನಿವಾರ ಜಾಗ ನಿಗದಿ ಮಾಡಲಾಗುತ್ತದೆ. ಅಧಿಕಾರಿಗಳು ರಜೆ ಇದ್ದರೂ ಕೂಡ ಕೆಲಸ ಮಾಡಬೇಕು. ನಗರದ ನಾಗರಿಕರು ಬಂದು ದಾಖಲೆಗಳನ್ನು ಸರಿ ಮಾಡಿಕೊಳ್ಳಬೇಕು .ಬಿ ಖಾತೆಯಿಂದ ಎ ಖಾತೆ ಮಾಡಿಕೊಂಡರೆ ಗೈಡೆನ್ಸ್ ವ್ಯಾಲ್ಯೂ ಶೇಕಡಾ 5ರಿಂದ 2ಕ್ಕೆ ಇಳಿಕೆ ಮಾಡುತ್ತಿದ್ದೇವೆ. ಸೂಕ್ತ ದಾಖಲೆ ಕೊಟ್ಟರೆ ಆಸ್ತಿ ಪ್ರಮಾಣಪತ್ರ ಮನೆಗೆ ತಲುಪಿಸುತ್ತೇವೆ .ಮುಂದಿನ 100 ದಿನಗಳಲ್ಲಿ ಈ ಅವಕಾಶ ಪಡೆದುಕೊಳ್ಳಬೇಕು ಎಂದರು.
ಕೆಂಪೇಗೌಡ ಜಯಂತಿ ದಿನ ಗ್ರೀನ್ ಬೆಂಗಳೂರು ಮಾಡಲು ತೀರ್ಮಾನ ಮಾಡಲಾಗಿದ್ದು, 15 ಲಕ್ಷ ಸಸಿಗಳನ್ನು ನೆಡಬೇಕು ಅಂತಾ ನಿರ್ಧಾರ ಮಾಡಿದ್ದೇವೆ. ಬಿಡಿಎ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಜೂನ್ 27ರಂದು ಅದ್ಧೂರಿಯಾಗಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆ ವರೆಗೆ 33 ಕಿಲೋ ಮೀಟರ್ ಬಿಸಿನೆಸ್ ಕಾರಿಡಾರ್ ಆಗಲಿದೆ. ಈ ಭಾಗದಲ್ಲಿ ಭೂಮಿ ಕೊಡುವ ಮಾಲೀಕರಿಗೆ 5 ವಿವಿಧ ರೂಪದ ಪರಿಹಾರ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಇದನ್ನ ಡಿನೋಟಿಫೈ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
Published On - 3:11 pm, Wed, 13 May 26