ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಮತ್ತೆ ಮರುಜೀವ; ಭೂಮಿ ಕೊಟ್ಟ ರೈತರ ಜತೆ ಡಿಸಿಎಂ ಸಭೆ, ಅಳಲು ತೋಡಿಕೊಂಡ ಮಾಜಿ ಸೈನಿಕ

PRR ರಸ್ತೆ ನಿರ್ಮಾಣಕ್ಕೆ ಸರ್ಕಾರ ಮತ್ತೆ ಒಲವು ತೋರಿಸುತ್ತಿದೆ. ನಗರದ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರ ಜೊತೆ ಸಭೆ ನಡೆಸಿದ್ದಾರೆ.

ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಮತ್ತೆ ಮರುಜೀವ; ಭೂಮಿ ಕೊಟ್ಟ ರೈತರ ಜತೆ ಡಿಸಿಎಂ ಸಭೆ, ಅಳಲು ತೋಡಿಕೊಂಡ ಮಾಜಿ ಸೈನಿಕ
ಡಿಕೆ ಶಿವಕುಮಾರ್ ಸಭೆ
Follow us
| Updated By: ಆಯೇಷಾ ಬಾನು

Updated on: Jul 31, 2023 | 3:23 PM

ಬೆಂಗಳೂರು, ಜುಲೈ 31: ಕಾಂಗ್ರೆಸ್ ಸರ್ಕಾರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮತ್ತೆ ಮರುಜೀವ ಪಡೆದಿದೆ(PRR Project). ದಶಕಗಳಿಂದ ಬೆಂಗಳೂರಿಗರು ಎದುರು ನೋಡ್ತಿರುವ PRR ರಸ್ತೆ ನಿರ್ಮಾಣಕ್ಕೆ ಸರ್ಕಾರ ಮತ್ತೆ ಒಲವು ತೋರಿಸುತ್ತಿದೆ. ನಗರದ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್( DK Shivakumar) ಅವರು ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರ ಜೊತೆ ಸಭೆ ನಡೆಸಿದ್ದಾರೆ. ಕಳೆದ 15 ವರ್ಷದಿಂದ ನೆನೆಗುದಿಗೆ ಬಿದ್ದಿರುವ ಪೆರಿಫೆರಲ್ ರಸ್ತೆ ನಿರ್ಮಾಣ ಸಂಬಂಧ ಚರ್ಚೆ ನಡೆದಿದೆ. ಸಭೆಯಲ್ಲಿ ಬಿಡಿಎ ಕಮಿಷನರ್ ಕುಮಾರ್ ನಾಯಕ್, ಉಪ ಆಯುಕ್ತೆ ಡಾ. ಸೌಜನ್ಯ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನೋಟಿಫಿಕೇಷನ್ ಆದ ಜಮೀನನ್ನು ಡಿನೋಟಿಫಿಕೇಷನ್ ಮಾಡಲ್ಲ. ಹಳೇ ಕಾಯ್ದೆಯಂತೆ‌ ಪರಿಹಾರ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹಳೇ ಕಾಯ್ದೆ ಪ್ರಕಾರವೇ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲದಿದ್ರೆ ನಾವು ಕೂಡ ಕಾನೂನು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ನೀವು ನನ್ನ ಸ್ಥಾನದಲ್ಲಿದ್ದು ಯೋಚನೆ ಮಾಡಿ ಸಲಹೆ ಕೊಡಿ. ಹಳೇ ಭೂ ಸ್ವಾದೀನ ಪ್ರಕ್ರಿಯೆಯನ್ನೇ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದು ನಿಮಗೆ ಸಮಂಜಸವೆನಿಸದಿದ್ದರೆ ನೀವೂ ಈ ತೀರ್ಪಿನ್ನ ಪ್ರಶ್ನಿಸಿ ನ್ಯಾಯಲಯದ ಮೊರೆ ಹೋಗಬಹುದು ಎಂದು ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಭಿನ್ನ ಅಭಿಪ್ರಾಯಗಳನ್ನ ಹೇಳಿದ್ದೀರಾ. ನನಗೆ ಡಿನೋಟಿಫಿಕೇಶನ್ ಮಾಡುವ ಅಧಿಕಾರ ಇಲ್ಲ. ನಿಮಗೆ ಸಹಾಯ ಮಾಡುವ ದಾರಿ‌ ಹುಡುಕುತ್ತಿದ್ದೇನೆ. ಲಾಯರ್ ಗಳಿಗಿಂತ ರೈತರಿಗೆ ಹೆಚ್ಚಿನ ಕಾನೂನು ಗೊತ್ತಿದೆ. ನಾನು ಕಾನೂನು ತಜ್ಞರ ಜೊತೆ ಚರ್ಚೆ ಮಾಡ್ತೇನೆ. ರೋಡ್ ಮಾಡೋದು ನಾವು ನಿಲ್ಲಿಸೋಕೆ ಆಗಲ್ಲ. ಆದರೆ ಪರಿಹಾರ ಕೊಡುವ ಬಗ್ಗೆ ಚರ್ಚಿಸ್ತೇನೆ. ಇದರ ಬಗ್ಗೆ ಗಂಭೀರವಾಗಿ ಯೋಚಿಸ್ತೇವೆ. ಕ್ಯಾಬಿನೆಟ್​ನಲ್ಲಿ ಇದರ ಬಗ್ಗೆ ಚರ್ಚೆ ಮಾಡ್ತೇವೆ. ಆದಷ್ಟು ಬೇಗ ಯೋಜನೆ ಕೈಗೆತ್ತಿಕೊಳ್ಳಬೇಕು. ನಾನಂತೂ ಯೋಜನೆ ಲೇಟ್ ಮಾಡಲ್ಲ. ರೋಡ್ ಆಗಬೇಕು, ನಿಮಗೂ ಲಾಭ ಆಗಬೇಕು. ನಿಮಗೆ ಹೇಗೆ ಸಹಾಯ ಮಾಡೋಕೆ ಸಾಧ್ಯ, ಇದರ ಬಗ್ಗೆ ನಾನು‌ ಯೋಚಿಸ್ತಿದ್ದೇನೆ. ನಾನು ನಿಮ್ಮ ಜೊತೆ ಇದ್ದೇನೆ ಎಂದರು.

ಇದನ್ನೂ ಓದಿ: ಜುವೆಲ್ಲರಿ ಶಾಪ್ ಮಾಲೀಕನ ಕಳ್ಳಾಟ ಬಯಲು, ಚಿನ್ನ ಕಳ್ಳತನವಾಗಿದೆ ಎಂದು ದೂರು ನೀಡಿದ್ದನನ್ನೇ ಬಂಧಿಸಿದ ಪೊಲೀಸ್ರು

ಮಾಜಿ ಸೈನಿಕನ ಅಳಲು

ಇನ್ನು ಮತ್ತೊಂದೆಡೆ ಈ ಬಗ್ಗೆ ಮಾಜಿ ಸೈನಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ನಾನು ಆರ್ಮಿಯಲ್ಲಿ 12 ವರ್ಷ ಸೇವೆ ಮಾಡಿದ್ದೆ. ಯಲಹಂಕದ ನಾಗೇನಹಳ್ಳಿಯಲ್ಲಿ ನನ್ನ ಅರಿಯರ್ಸ್ ಎಲ್ಲ ಸೇರಿ ನಿವೇಶನ ಖರೀದಿಸಿದೆ. ಅಲ್ಲಿ ಸಾಲ ಮಾಡಿ ಮನೆಯನ್ನೂ ಕಟ್ಟಿದ್ದೆ. ಈಗ ನನ್ನ ಮನೆಯೂ ರಸ್ತೆಗೆ ಹೋಗಲಿದೆ. ಬ್ರಿಟೀಷರ ಪರಿಹಾರವನ್ನೇ ಕೊಟ್ಟರೆ ಹೇಗೆ. ಸರ್ಕಾರ ಮಾಜಿ ಸೈನಿಕರಿಗೆ ಜಮೀನು ಕೊಡ್ತಾರೆ ಅಂತಾರೆ. ಆದರೆ ಯಾವ ಸೈನಿಕರಿಗೆ ಜಮೀನು ಕೊಡ್ತಿಲ್ಲ. ಕಾರ್ಪೋರೇಟರ್,ಅಧಿಕಾರಿಗಳೇ ಪಡೆದುಕೊಳ್ತಾರೆ. ಈಗ ನಾನು ಮಕ್ಕಳಿಗೆ ಮದುವೆ ಮಾಡೋದೇಗೆ? ಈಗ ನಿವೇಶನ ಇಲ್ಲ, ನನಗೆ ಬೇರೆಡೆ ಸೈಟ್ ಕೊಡಿ. ಇಲ್ಲವೇ ಬಿಡಿಎ ವ್ಯಾಪ್ತಿಯಲ್ಲಿ ನಿವೇಶನ ಕೊಡಿ. ಇಲ್ಲ ಈ ಯೋಜನೆಯನ್ನೇ ನೀವು ಕೈಬಿಡಿ. ವಶಪಡಿಸಿಕೊಂಡ ಭೂಮಿ ರೈತರಿಗೆ ಕೊಡಿ ಎಂದು ಮಾಜಿ ಸೈನಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ರಸ್ತೆ ನಿರ್ಮಾಣಕ್ಕೆ ಅಂತ 2007 ರಲ್ಲಿ ರೈತರಿಂದ ಬಿಡಿಎ ಭೂ ಸ್ವಾಧೀನ ಮಾಡಿಕೊಂಡಿತ್ತು. ಆದ್ರೆ ಪರಿಹಾರ ನೀಡಲು ಸಾಧ್ಯವಾಗದೆ ಯೋಜನೆ ನೆನೆಗುದಿಗೆ ಬಿದ್ದಿದೆ. ಹೀಗಾಗಿ ರೈತರಿಗೆ ಪರಿಹಾರ ನೀಡಿ ರಸ್ತೆ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ಮಾಡಿದೆ. ಇನ್ನು ಮತ್ತೊಂದೆಡೆ PRR ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರ ಪರಿಹಾರ ವಿಚಾರದಲ್ಲಿ ಅನ್ಯಾಯ ಆರೋಪ ಕೇಳಿ ಬಂದಿದ್ದು ಭೂಮಿ ಕಳೆದುಕೊಳ್ಳುವ ರೈತರಿಗೆ 1984 ರ ಆಕ್ಟ್ ಪ್ರಕಾರ ಭೂ ಪರಿಹಾರ ನೀಡಲು ಪ್ರಾಧಿಕಾರ ಮುಂದಾಗಿದೆ. ಆದ್ರೆ ಬಿಡಿಎ ಹಳೇ ಆಕ್ಟ್ ಪ್ರಕಾರ ಭೂ ಪರಿಹಾರಕ್ಕೆ ರೈತರು ಭಾರಿ ವಿರೋಧ ವ್ಯಕ್ತಪಡಿಸಿದ್ದು 2013 ರ ಆಕ್ಟ್ ಪ್ರಕಾರ ಭೂ ಪರಿಹಾರ ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ರೈತರ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರ ಜೊತೆ ಡಿಕೆ ಶಿವಕುಮಾರ್ ಸಭೆ ನಡೆಸಿ ರೈತರ ಸಮಸ್ಯೆ ಆಲಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ