‘ನೀವು ನನಗೆ ಸಹೋದರಿಯರಿದ್ದಂತೆ, ಹೋರಾಟ ಕೈಬಿಡಿ’: ಆಶಾ ಕಾರ್ಯಕರ್ತೆಯರಿಗೆ ಡಿಕೆಶಿ ಭಾವನಾತ್ಮಕ ಮನವಿ

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಿಂಪಡೆಯುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾವನಾತ್ಮಕ ಮನವಿ ಮಾಡಿದ್ದಾರೆ. ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ಸಹೋದರಿಯರಿದ್ದಂತೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕಾರ್ಯಕರ್ತೆಯರ ಬೇಡಿಕೆಗಳಿಗೆ ಸಂಪುಟದ ಜೊತೆ ಚರ್ಚಿಸಿ ಸಮಗ್ರ ಹಾಗೂ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ತಮ್ಮ ಸೇವೆ ಮತ್ತು ತ್ಯಾಗವನ್ನು ಸರ್ಕಾರ ಗೌರವಿಸುತ್ತದೆ ಎಂದಿರುವ ಡಿಕೆಶಿ, ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದಾರೆ.

ನೀವು ನನಗೆ ಸಹೋದರಿಯರಿದ್ದಂತೆ, ಹೋರಾಟ ಕೈಬಿಡಿ: ಆಶಾ ಕಾರ್ಯಕರ್ತೆಯರಿಗೆ ಡಿಕೆಶಿ ಭಾವನಾತ್ಮಕ ಮನವಿ
ಡಿಕೆ ಶಿವಕುಮಾರ್

Updated on: Nov 21, 2026 | 5:09 PM

ಮುಖ್ಯಾಂಶಗಳು

  • ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕೈಬಿಡುವಂತೆ ಡಿಕೆ ಶಿವಕುಮಾರ್ ಭಾವನಾತ್ಮಕ ಮನವಿ ಮಾಡಿದ್ದಾರೆ.
  • ನೀವು ನನಗೆ ಸಹೋದರಿಯರಿದ್ದಂತೆ, ನಿಮ್ಮ ನೋವು ಸಂಕಷ್ಟ ಅರ್ಥವಾಗುತ್ತದೆ ಎಂದ ಡಿಕೆಶಿ.
  • ಸಂಪುಟದ ಜೊತೆ ಚರ್ಚಿಸಿ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ.

ಬೆಂಗಳೂರು, ನವೆಂಬರ್ 21: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಪ್ರತಿಭಟನೆ ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ಮನವೊಲಿಕೆ ಪ್ರಯತ್ನವೂ ಫಲ ನೀಡಿಲ್ಲ. ಇತ್ತೀಚೆಗೆ ಆಶಾ ಕಾರ್ಯಕರ್ತೆಯರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಬೇಡಿಕೆಗಳನ್ನು ಸಚಿವ ಸಂಪುಟ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೂ ಕಾರ್ಯಕರ್ತೆಯರು ಲಿಖಿತ ಆದೇಶ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದ ಮೂಲಕ ಭಾವನಾತ್ಮಕ ಮನವಿ ಮಾಡಿರುವ ಡಿಕೆಶಿ, ಪ್ರತಿಭಟನೆ ಕೈಬಿಡುವಂತೆ ಕೋರಿದ್ದಾರೆ.

‘ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ಸಹೋದರಿಯರಿದ್ದಂತೆ’ ಎಂದ ಡಿಕೆಶಿ

ಆಶಾ ಸಹೋದರಿಯರಲ್ಲಿ ಸರ್ಕಾರದ ಪರವಾಗಿ ನನ್ನ ಕಳಕಳಿಯ ಮನವಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಡಿ.ಕೆ. ಶಿವಕುಮಾರ್, ನಿಮ್ಮ ಹೋರಾಟದ ನೋವು ಮತ್ತು ಸಂಕಷ್ಟ ನನಗೆ ಅರ್ಥವಾಗುತ್ತದೆ ಎಂದಿದ್ದಾರೆ. ಕುಟುಂಬದವರನ್ನು ಬಿಟ್ಟು ಹಗಲು-ರಾತ್ರಿ ಎನ್ನದೆ ಹೋರಾಟ ಮಾಡುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ನನ್ನ ಸಹೋದರಿಯರಿದ್ದಂತೆ ಎಂದು ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.

Loading...

ಅಂಗನವಾಡಿಗಳ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರಂಭ ಹಾಗೂ ಆಶಾ ಕಾರ್ಯಕರ್ತೆಯರ ಹುದ್ದೆಗಳ ಸೃಷ್ಟಿಯ ಮೂಲಕ ಮಹಿಳೆಯರಿಗೆ ಮತ್ತು ಆರೋಗ್ಯ ಕ್ಷೇತ್ರದ ಕಾರ್ಯಕರ್ತೆಯರಿಗೆ ಸೇವೆಯ ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ್ದಾರೆ.

ಸಂಪುಟದ ಜೊತೆ ಚರ್ಚಿಸಿ ಶಾಶ್ವತ ಪರಿಹಾರದ ಭರವಸೆ

ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಸಮಗ್ರ ಹಾಗೂ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಸಂಪುಟದ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಕೆಶಿ ಭರವಸೆ ನೀಡಿದ್ದಾರೆ. ಒಬ್ಬ ಅಣ್ಣನಾಗಿ ನನ್ನ ಮನವಿಗೆ ಸ್ಪಂದಿಸಿ ಹೋರಾಟ ಕೈಬಿಡಿ. ನಿಮ್ಮ ಸೇವೆ, ಶ್ರಮ ಮತ್ತು ತ್ಯಾಗವನ್ನು ಸರ್ಕಾರ ಗೌರವಿಸುತ್ತದೆ. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳಲ್ಲಿ ಮಾಸಿಕ 15 ಸಾವಿರ ರೂಪಾಯಿ ನಿಗದಿತ ಗೌರವಧನ, 5 ಲಕ್ಷ ರೂಪಾಯಿ ನಿವೃತ್ತಿ ಸೌಲಭ್ಯ ಹಾಗೂ ಸಮಸ್ತ ಆ್ಯಪ್ ಹಿಂಪಡೆಯುವ ಬೇಡಿಕೆಗಳೂ ಸೇರಿವೆ. ಸರ್ಕಾರದ ಭರವಸೆಗಳ ನಡುವೆ ಕಾರ್ಯಕರ್ತೆಯರು ಪ್ರತಿಭಟನೆ ಮುಂದುವರಿಸಿರುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಡಿಕೆಶಿ ಅವರ ಈ ಭಾವನಾತ್ಮಕ ಮನವಿಗೆ ಆಶಾ ಕಾರ್ಯಕರ್ತೆಯರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us