ಸಿದ್ದರಾಮಯ್ಯ ಆ ರೀತಿ ಮಾತನಾಡಲು ಸಾಧ್ಯವೇ ಇಲ್ಲ: ದಲಿತ ವಿರೋಧಿ ಹೇಳಿಕೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ನ.5ರಂದು ಹಾನಗಲ್ನಲ್ಲಿ ದುರ್ಗಾದೇವಿಗೆ ಹರಕೆ ತೀರಿಸ್ತೇವೆ. ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೂ ಮುನ್ನ ಹರಕೆ ಹೊತ್ತಿದ್ದೆ. ಹಾಗಾಗಿ ನವೆಂಬರ್ 5ರಂದು ತೆರಳಿ ಹರಕೆ ತೀರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷ ಮುಳುಗುವ ಹಡಗು ಎಂದು ಹಲವರು ವ್ಯಾಖ್ಯಾನ ಮಾಡಿದ್ರು. ಆದರೆ, ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಸಮಾಧಾನಕರ ಫಲಿತಾಂಶವನ್ನ ಮತದಾರರು ನೀಡಿದ್ದಾರೆ. ಬಿಜೆಪಿಗೆ ಜವಾಬ್ದಾರಿಯುತ ಸ್ಥಾನಗಳಲ್ಲಿ ಮುಖಭಂಗ ಆಗಿದೆ. ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ನಾವು ಸೋತಿರಬಹುದು. ಆದರೆ, ಹಾನಗಲ್ ಕ್ಷೇತ್ರದ ಜನ ತಮ್ಮ ನೋವು ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಕೈಹಿಡಿದು ದೇಶಕ್ಕೆ ಸಂದೇಶ ನೀಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಹಾನಗಲ್ ಕ್ಷೇತ್ರದ ಜನ, ಕಾರ್ಯಕರ್ತರಿಗೆ ಅಭಿನಂದಿಸ್ತೇನೆ. ನಮ್ಮ ಪಕ್ಷದ ಎಲ್ಲ ನಾಯಕರಿಗೆ ನಾನು ಅಭಿನಂದಿಸುತ್ತೇನೆ. ಸೋನಿಯಾ ಗಾಂಧಿ, ರಾಹುಲ್ ಪರವಾಗಿ ಅಭಿನಂದಿಸ್ತೇನೆ. ಹಾನಗಲ್ ಕ್ಷೇತ್ರದಲ್ಲಿನ ಗೆಲುವು ನನ್ನ ಗೆಲುವು ಅಲ್ಲ. ಹಾನಗಲ್ನಲ್ಲಿನ ಜಯ ಮತದಾರನ ಗೆಲುವು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜನರ ಕಷ್ಟಗಳನ್ನು ಆಲಿಸಿದರೆ ಮತದಾರ ನಮ್ಮ ಕೈಹಿಡೀತಾನೆ. ನವೆಂಬರ್ 5 ರಂದು ಮತದಾರರಿಗೆ ಅಭಿನಂದನೆ ಹೇಳುವ ಕಾರ್ಯಕ್ರಮ ಇದೆ. ಕ್ಷೇತ್ರಕ್ಕೆ ತೆರಳುವ, ಅಭಿನಂದನೆ ಹೇಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ನ.5ರಂದು ಹಾನಗಲ್ನಲ್ಲಿ ದುರ್ಗಾದೇವಿಗೆ ಹರಕೆ ತೀರಿಸ್ತೇವೆ. ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೂ ಮುನ್ನ ಹರಕೆ ಹೊತ್ತಿದ್ದೆ. ಹಾಗಾಗಿ ನವೆಂಬರ್ 5ರಂದು ತೆರಳಿ ಹರಕೆ ತೀರಿಸುತ್ತೇವೆ ಎಂದು ಹೇಳಿದ್ದಾರೆ.
ಬಹಳ ಕೆಟ್ಟ ರಾಜ್ಯೋತ್ಸವವನ್ನ ಕರ್ನಾಟಕ ಕಂಡಿತು. ಬೆಳಕಿನ ಹಬ್ಬ ಬರ್ತಾ ಇದೆ. ಈ ಮೊದಲ ಎರಡು ವರ್ಷ ಬಹಳ ಕಷ್ಟ ಅನುಭವಿಸಿದ್ದೇವೆ. ಈ ವರ್ಷ ದೇಶ ಅನುಭವಿಸಿದ ಕತ್ತಲನ್ನ ದೂರ ಮಾಡಿ ಬೆಳಕು ಬರಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮ ಧರ್ಮದ ಬಗ್ಗೆ ಕೆಲವರಿಗೆ ನಂಬಿಕೆ ಇರದಿರಬಹುದು. ಆದರೆ ನಮ್ಮ ದೇಶದ ಸಂಸ್ಕೃತಿ ಇತಿಹಾಸ ಪ್ರತೀಕವಾಗಿ ಬೆಳಕಿನ ಹಬ್ಬವನ್ನ ಜಗತ್ತಿನಾದ್ಯಂತ ಮಾಡ್ತಾರೆ. ವೈಟ್ ಹೌಸ್ನಲ್ಲೂ ದೀಪಾವಳಿ ಆಚರಿಸುತ್ತಾರೆ ಎಂದು ಶಿವಕುಮಾರ್ ಹೇಳಿದ್ದಾರೆ. ರಾಜ್ಯದ ಜನತೆಗೆ ಪಕ್ಷದ ಪರವಾಗಿ ದೀಪಾವಳಿ ಶುಭಾಶಯ ತಿಳಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ದಲಿತ ವಿರೋಧಿ ಹೇಳಿಕೆ ಆರೋಪಕ್ಕೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಶೇಕಡಾ 90ರಷ್ಟು ದಲಿತರು ಕಾಂಗ್ರೆಸ್ ಪಕ್ಷದ ಪರ ಇದ್ದಾರೆ. ದಲಿತರು ಅಂದ್ರೆ ಕಾಂಗ್ರೆಸ್ ಕಾಂಗ್ರೆಸ್ ಅಂದ್ರೆ ದಲಿತರು. ಸಿದ್ದರಾಮಯ್ಯ ಆ ರೀತಿ ಮಾತನಾಡಿರುವ ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಕಾಲದಲ್ಲೇ ದಲಿತರಿಗೆ ವಿಶೇಷ ಯೋಜನೆ ಇತ್ತು. ಕಾಂಗ್ರೆಸ್ಗೆ ಎಲ್ಲ ಜಾತಿ ಧರ್ಮಗಳ ಬಗ್ಗೆ ವಿಶೇಷ ಕಾಳಜಿಯಿದೆ ಎಂದು ಅವರು ಹೇಳಿದ್ದಾರೆ.
ಪುನೀತ್ ರಾಜ್‍ಕುಮಾರ್ ಹೆಸರು ರಸ್ತೆಗೆ ಇಡುವ ವಿಚಾರವಾಗಿ ಮಾತನಾಡಿದ ಶಿವಕುಮಾರ್, ನಟ ಪುನೀತ್ ರಾಜ್‍ಕುಮಾರ್ ಎಲ್ಲದಕ್ಕೂ ಅರ್ಹರಿದ್ದಾರೆ. ಪದ್ಮ ಪ್ರಶಸ್ತಿ, ರಸ್ತೆಗೆ, ಸರ್ಕಲ್ಗೆ ಹೆಸರಿಡಲು ನಾವು ಒತ್ತಾಯಿಸ್ತೇವೆ ಎಂದು ಹೇಳಿದ್ದಾರೆ.
ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಇಡಿ ತನಿಖೆಗೆ ನೀಡಿದ್ರೆ ದಯವಿಟ್ಟು ದಾಖಲೆಯನ್ನು ನೀಡಿ. ಸಾರ್ವಜನಿಕವಾಗಿ ದಾಖಲೆ ಬಿಡುಗಡೆ ಮಾಡಿ. ಯಾವ ಅಧಿಕಾರಿಗೆ ಕೊಟ್ಟಿದ್ರಿ, ಎಷ್ಟು ದಾಖಲೆ ಸಂಗ್ರಹಿಸಿದ್ದೀರಿ. ಯಾರ ಬಳಿ ಬಿಟ್ ಕಾಯಿನ್ ಇದೆ ಎಂದು ತಿಳಿಸಿ ಎಂದು ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಒತ್ತಾಯ ಮಾಡಿದ್ದಾರೆ.
ಇಡಿ ಇಲ್ಲವೇ ಸಿಬಿಐಗೆ ಬರೆದ ಪತ್ರದ ಮಾಹಿತಿ ಕೊಡಿ. 2018ರ ಫೆಬ್ರವರಿಯಲ್ಲಿ ಪ್ರಕರಣ ಬೆಳಕಿಗೆ ಬರಬೇಕಿತ್ತು. ಆಗ ಅಧಿಕಾರದಲ್ಲಿ ಯಾರಿದ್ದರೆಂದು ಸಿಎಂ ಹೇಳಿದ್ದಾರೆ. ಸಿಎಂ ಬೊಮ್ಮಾಯಿ ನನ್ನ ಹೆಸರು ಹೇಳಿದ್ದರೂ ಸಂತೋಷ. ಇದನ್ನೂ ಸೇರಿಸಿಕೊಂಡು ಸಿಎಂ ತನಿಖೆಗೆ ನೀಡಲಿ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ನಾವು ಅಂಬೇಡ್ಕರ್ರ ಸಂವಿಧಾನದ ಪರವಾಗಿ ಇರುವವರು: ಬಿಜೆಪಿ ಪ್ರತಿಭಟನೆಗೆ ಸಿದ್ದರಾಮಯ್ಯ ತಿರುಗೇಟು
ಇದನ್ನೂ ಓದಿ: ಬಿಜೆಪಿಗೆ ಜನರಿಂದ ಸೋಲಿನ ದೀಪಾವಳಿ ಉಡುಗೊರೆ: ಕಾಂಗ್ರೆಸ್ ವ್ಯಂಗ್ಯ