ಇದು ಬಿಜೆಪಿ ಲಾಕ್​ಡೌನ್, ಬಿಜೆಪಿ ವೀಕೆಂಡ್ ಕರ್ಫ್ಯೂ; ಸರ್ಕಾರದ ನಿರ್ಧಾರ ಅವೈಜ್ಞಾನಿಕ ಎಂದು ಆರೋಪಿಸಿದ ಡಿಕೆ ಶಿವಕುಮಾರ್

ಇದು ಬಿಜೆಪಿ ಲಾಕ್​ಡೌನ್, ಬಿಜೆಪಿ ವೀಕೆಂಡ್ ಕರ್ಫ್ಯೂ; ಸರ್ಕಾರದ ನಿರ್ಧಾರ ಅವೈಜ್ಞಾನಿಕ ಎಂದು ಆರೋಪಿಸಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

DK Shivakumar Press Meet: ಕೇವಲ ರಾಜಕೀಯವಾಗಿ ಮಾತನಾಡುತ್ತಿದೆ. ಇದು ಬಿಜೆಪಿ ಲಾಕ್‌ಡೌನ್, ಬಿಜೆಪಿ ವೀಕೆಂಡ್ ಕರ್ಫ್ಯೂ, ಕೊವಿಡ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಿವಕುಮಾರ್ ಟೀಕಿಸಿದ್ದಾರೆ.

TV9kannada Web Team

| Edited By: ganapathi bhat

Jan 07, 2022 | 4:40 PM


ಬೆಂಗಳೂರು: ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಕ್ರಮವನ್ನು ಸೂಕ್ತ ಮಾನದಂಡದ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಶೇಕಡಾ 5ರಷ್ಟು ಕೊವಿಡ್ ಪಾಸಿಟಿವಿಟಿ ಇದ್ದರೆ ಲಾಕ್‌ಡೌನ್ ಮಾಡುವುದಾಗಿ ಈ ಹಿಂದೆ ಸರ್ಕಾರ ಹೇಳಿತ್ತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ 32.89ರಷ್ಟು ಪಾಸಿಟಿವಿಟಿ ಇತ್ತು. ಆಗ ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸಲಾಗಿತ್ತು. ಈಗ ಶೇಕಡಾ 3.95ರಷ್ಟಕ್ಕೇ ಕರ್ಫ್ಯೂ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯದಿಂದ ಸಾವಿರಾರು ಕರೆಗಳು ನಮಗೆ ಬರುತ್ತಿವೆ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಬಗ್ಗೆ ನಮಗೆ ಕರೆಗಳು ಬರ್ತಿವೆ. ಜನರು ತಮ್ಮ ನೋವು ಹೇಳಿಕೊಳ್ಳಲು ಕರೆ ಮಾಡುತ್ತಿದ್ದಾರೆ. ವಿಪಕ್ಷವಾಗಿ ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರಾಜ್ಯ ಸರ್ಕಾರ ಲೆಕ್ಕಾಚಾರ ಮಾಡಿ ಕರ್ಫ್ಯೂ ಮಾಡಿರಬಹುದು. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮಾಡಿರಬಹುದೆಂದುಕೊಂಡಿದ್ದೆ. ಆದರೆ ಕರೆ ಬಂದ ಮೇಲೆ ನಾನು ಮಾಹಿತಿ ತರಿಸಿಕೊಂಡಿದ್ದೇನೆ. ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ಶೇಕಡಾ 2ರಷ್ಟು ಕೂಡ ಇಲ್ಲ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮಾಡಲು ನಿಗದಿತ ಮಾನದಂಡವಿದೆ ಎಂದು ಹೇಳಿದ್ದಾರೆ.

ಇಡೀ ರಾಜ್ಯದಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡಿಲ್ಲ. ಆದರೆ ನಮ್ಮ ಜಿಲ್ಲೆಯಲ್ಲಿ ಮಾತ್ರ ಪ್ರವಾಸಿ ತಾಣ ಬಂದ್ ಆಗಿದೆ. ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ಮಾತನಾಡುವುದಕ್ಕೆ ಹೋಗ್ತಿಲ್ಲ. ಕೇವಲ ರಾಜಕೀಯವಾಗಿ ಮಾತನಾಡುತ್ತಿದೆ. ಇದು ಬಿಜೆಪಿ ಲಾಕ್‌ಡೌನ್, ಬಿಜೆಪಿ ವೀಕೆಂಡ್ ಕರ್ಫ್ಯೂ, ಕೊವಿಡ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಿವಕುಮಾರ್ ಟೀಕಿಸಿದ್ದಾರೆ.

ಬದುಕಿರುವ ಜನರನ್ನು ಸಾಯಿಸಲು ಹೊರಟಿದ್ದಾರೆ. ದೇಶದಲ್ಲಿ 12.2 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ. ಅಧಿಕೃತವಾದ ದಾಖಲೆಯಲ್ಲಿ ಮಾಹಿತಿ ನೀಡಿದ್ದೇವೆ. ಜನವಿರೋಧಿ ನೀತಿಯನ್ನು ಜಾರಿ ಮಾಡಿದ್ದಾರೆ. ಪೂರ್ವನಿಯೋಜಿತವಲ್ಲದ ಲಾಕ್‌ಡೌನ್ ಮಾಡಿದ್ದಾರೆ. ಇಂತಹ ಲಾಕ್‌ಡೌನ್‌ಗಳಿಂದ 78 ಸಾವಿರ ಕೋಟಿ ರೂಪಾಯಿ ಸಾಲ ಆಗಿದೆ. 78 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಸಾಲ ಪಡೆದಿದ್ದಾಗಿ ಸಿಎಜಿ ವರದಿ ಮಾಡಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಪಾಸಿಟಿವಿಟಿ ಬಗ್ಗೆ ಕೂಡ ತನಿಖೆ ಮಾಡಬೇಕು
ರಾಜ್ಯ ಸರ್ಕಾರ ಕೂಡಲೇ ಕರ್ಫ್ಯೂ ವಾಪಸ್​ ಪಡೆಯಬೇಕು. ಕೊರೊನಾ ಪಾಸಿಟಿವಿಟಿ ಬಗ್ಗೆ ಕೂಡ ತನಿಖೆ ಮಾಡಬೇಕು. ಈ ಬಗ್ಗೆ ಒಂದು ಆಯೋಗ ರಚನೆ ಆಗಬೇಕು. ಪಾಸಿಟಿವಿಟಿ ಪಟ್ಟಿಯೇ ಬೋಗಸ್. ಸಚಿವ ಸುಧಾಕರ್ ಒಬ್ಬರೂ ICUನಲ್ಲಿ ಇಲ್ಲ ಎಂದಿದ್ದಾರೆ. ಹಾಗಿದ್ರೆ ಏಕೆ ಕರ್ಫ್ಯೂ, ಏಕೆ ಲಾಕ್​ಡೌನ್. ಜನರಿಗೆ ಏಕೆ ತೊಂದರೆ ಕೊಡ್ತಾ ಇದ್ದೀರಿ. ನಮ್ಮ ಮೇಲಿನ ದ್ವೇಷಕ್ಕೆ ರಾಜ್ಯದ ಜನರಿಗೆ ಯಾಕೆ ಶಿಕ್ಷೆ? ಎಂದು ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್​ ವಾಗ್ದಾಳಿ ನಡೆಸಿದ್ದಾರೆ.

ಐಸಿಯು ಬೆಡ್ ಇದೆ ಟೆಕ್ನಿಷಿಯನ್ ಇಲ್ಲ: ಯುಟಿ ಖಾದರ್
ರಾಜ್ಯ ಸರ್ಕಾರ ದುರುದ್ದೇಶದಿಂದ ಕರ್ಫ್ಯೂ ಜಾರಿ ಮಾಡಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 5ರಷ್ಟು ಇರಬೇಕು. ಆಕ್ಸಿಜನ್​ಗೆ ಬೇಡಿಕೆ ಹೆಚ್ಚಾದಾಗ ಲಾಕ್​ಡೌನ್​ ಮಾಡಬೇಕು. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.5ರಷ್ಟು ಇದೆ. ಆದರೆ ರೋಗಿಗಳಿಗೆ ಆಕ್ಸಿಜನ್ ಬೇಕಿಲ್ಲ, ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲೇ ಅನೇಕರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಆದರೂ ಜನರಿಗೆ ಸರ್ಕಾರ ತೊಂದರೆಯನ್ನ ಕೊಡುತ್ತಿದೆ. ಇದರಿಂದಾಗುವ ಆರ್ಥಿಕ ಸಮಸ್ಯೆಗೆ ಸರ್ಕಾರವೇ ಹೊಣೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ.ಖಾದರ್​ ಆಕ್ರೋಶ ಹೊರಹಾಕಿದ್ದಾರೆ.

ಬೇರೆ ಬೇರೆ ರಾಜ್ಯಗಳಲ್ಲಿ ಆಗಿದೆ ಎಂದು ಇವರು ಹೇಳ್ತಾರೆ. ಆದರೆ ಅದಕ್ಕೊಂದು ಸ್ಟ್ಯಾಂಡರ್ಡ್ ಇದೆ. ಐಸಿಯು ಬೆಡ್ ಇದೆ ಟೆಕ್ನಿಷಿಯನ್ ಇಲ್ಲ, ಬಾಕಿ ಮೊತ್ತ ನೀಡಿಲ್ಲ. ಖಾಸಗಿ ಆಸ್ಪತ್ರೆಗೆ ಬಾಕಿ ಹಣ ನೀಡಿಲ್ಲ ಇದರ ಅರ್ಥ ಏನು? ಇದರ ಅರ್ಥ ಸರ್ಕಾರಕ್ಕೆ ಸದುದ್ದೇಶ ಇಲ್ಲ ಎಂದು ಅರ್ಥ. 18-60 ವರ್ಷದವರಿಗೆ ಏಕೆ ಬೂಸ್ಟರ್ ಡೋಸ್ ನೀಡಿಲ್ಲ ಎಂದು ಯುಟಿ ಖಾದರ್ ಹೇಳಿದ್ದಾರೆ.

ಇದನ್ನೂ ಓದಿ: Mekedatu Ground Report : ಮೇಕೆದಾಟು ಎಲ್ಲಿದೆ, ಹೇಗಿದೆ ಅನ್ನೋ ಗ್ರೌಂಡ್​ ರಿಪೋರ್ಟ್​ ಇಲ್ಲಿದೆ

ಇದನ್ನೂ ಓದಿ: ಮೇಕೆದಾಟು: ಸರ್ವಪಕ್ಷ ನಿಯೋಗ ಕರೆದೊಯ್ದರೆ ಮೋದಿ ಹತ್ರ ನಾನು ಮಾತಾಡ್ತೇನಿ- ಸಿದ್ದರಾಮಯ್ಯ ಘೋಷಣೆ

Follow us on

Related Stories

Most Read Stories

Click on your DTH Provider to Add TV9 Kannada