ವಿಕ್ಟೋರಿಯಾ, ಬೌರಿಂಗ್ ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ: ರೋಗಿಗಳಿಗೆ ಸಿಗ್ತಿಲ್ಲ ಸಮರ್ಪಕ ಚಿಕಿತ್ಸೆ, ಆರೈಕೆ
ಬೆಂಗಳೂರು ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಗೆ ಸರಿಹೊಂದುವಂತೆ ವೈದ್ಯರು ಕೂಡಾ ಇರಬೇಕು. ಆದರೆ, ಸರ್ಕಾರ ಮಾತ್ರ ವೈದ್ಯರ ನೇಮಕಾತಿಯಲ್ಲಿ ವಿಳಂಬ ಮಾಡುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಸಂಬಂಧಿತ ಮಾಹಿತಿ ಇಲ್ಲಿದೆ.

ಬೆಂಗಳೂರು, ಜುಲೈ 1: ಬೆಂಗಳೂರಿನ (Bengaluru) ವಿಕ್ಟೋರಿಯಾ (Victoria Hospital), ಬೌರಿಂಗ್ ಸೇರಿದಂತೆ ಅನೇಕ ಆಸ್ಪತ್ರೆಗಳಲ್ಲಿ ದಿನನಿತ್ಯ 500-800 ರಷ್ಟು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ, ಬರುವ ರೋಗಿಗಳು ವೈದ್ಯರು ಹಾಗೂ ಸಿಬ್ಬಂದಿ (Medical Staff Shortage) ಕೊರತೆಯ ಕಾರಣ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಕೆಲವೊಂದು ಬಾರಿ ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳು ಪರಿತಪಿಸುವಂತಹ ಪರಿಸ್ಥಿತಿ ಕೂಡಾ ಎದುರಾಗುತ್ತಿದೆ.
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕಳೆದ ಒಂದು ವರ್ಷದಿಂದಲೂ ಇದೇ ಸಮಸ್ಯೆ ಇದೆ. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆ ಮಾತ್ರ ಸಿಬ್ಬಂದಿ ನೇಮಕ ಮಾಡಲು ಪ್ರಯತ್ನವನ್ನೇ ಮಾಡುತ್ತಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೇ 40 ರಷ್ಟು , ಬೌರಿಂಗ್ ನಲ್ಲಿ ಶೇ 20-40 ರಷ್ಟು ಸಿಬ್ಬಂದಿಯೇ ಇಲ್ಲ. ಅನೇಕ ಬಾರಿ ಸಿಬ್ಬಂದಿ ನೇಮಿಸಿ ಎಂದು ಮನವಿಗಳು ಸಲ್ಲಿಕೆಯಾಗಿದ್ದರೂ ಕ್ರಮ ಆಗಿಲ್ಲ. ಇದರಿಂದಾಗಿ ಸರಿಯಾದ ವೈದ್ಯಕೀಯ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ರೋಗಿಗಳು ವೈದ್ಯರು, ನರ್ಸ್, ಟೆಕ್ನಿಷಿಯನ್ಸ್, ಹಾಗೂ ಡಿಗ್ರೂಪ್ ನೌಕರರು ಇಲ್ಲದೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವ ಸಿಬ್ಬಂದಿ ಹುದ್ದೆ ಎಷ್ಟು ಖಾಲಿ ಇದೆ?
- ಗ್ರೂಪ್ ಎ – 2904 ಹುದ್ದೆಖಾಲಿ
- ಗ್ರೂಪ್ ಬಿ – 152 ಹುದ್ದೆ
- ಗ್ರೂಪ್ ಸಿ – 4504 ಹುದ್ದೆ
- ಗ್ರೂಪ್ ಡಿ – 3587 ಹುದ್ದೆ
ವೈದ್ಯಕೀಯ ಶಿಕ್ಷಣ ಇಲಾಖೆಯ ಅಂಕಿ ಅಂಶದ ಪ್ರಕಾರ, ಸ್ವಾಯತ್ತ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳಲ್ಲಿ ಒಟ್ಟು 11,147 ಖಾಲಿ ಹುದ್ದೆಗಳಿವೆ. ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸುಮಾರು 3005 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಲು ಸರ್ಕಾರದ ಮಟ್ಟದಲ್ಲಿ ಇನ್ನೂ ಸರಿಯಾದ ತೀರ್ಮಾನ ಆಗಿಲ್ಲ. ಸರ್ಕಾರದ ಗಮನಕ್ಕೆ ತಂದು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕಾದ ಪರಿಸ್ಥಿತಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಇದೆ. ಆದರೆ, ಒಂದು ವರ್ಷದಿಂದಲೂ ನೇಮಕಾತಿ ವಿಳಂಬ ಆಗುತ್ತಿದ್ದು, ಇದರ ಪರಿಣಾಮ ರೋಗಿಗಳ ಮೇಲೆ ತಟ್ಟುತ್ತಿದೆ. ಅಲ್ಲದೆ, ಹಾಲಿ ಇರುವ ಸಿಬ್ಬಂದಿಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ಇದನ್ನೂ ಓದಿ: ನೈಸ್ ರಸ್ತೆ ಟೋಲ್ ದರ ಹೆಚ್ಚಳ, ಇಂದಿನಿಂದಲೇ ಜಾರಿ, ಇಲ್ಲಿದೆ ಪರಿಷ್ಕೃತ ದರ ಪಟ್ಟಿ
ವಿಕ್ಟೋರಿಯಾದಂತಹ ಆಸ್ಪತ್ರೆಗಳಲ್ಲಿ ಸರ್ಕಾರದ ಸೌಲಭ್ಯ ಸಿಗುತ್ತದೆ ಎಂದು ಜನರು ಹೋಗುತ್ತಾರೆ. ಆದರೆ ಅಲ್ಲಿ ಚಿಕಿತ್ಸೆ ನೀಡಲು ವೈದ್ಯರು , ಆರೈಕೆ ಮಾಡಲು ನರ್ಸಿಂಗ್ ಸ್ಟಾಫ್ಗಳೇ ಸಾಕಷ್ಟಯ ಸಂಖ್ಯೆಯಲ್ಲಿ ಇಲ್ಲದೆ ಇರುವುದು ರೋಗಿಗಳಿಗೆ ಸಮಸ್ಯೆ ತಂದೊಡ್ಡುತ್ತಿದೆ. ಇನ್ನಾದರೂ ಇಲಾಖೆ ಸಿಬ್ಬಂದಿ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.







